ADVERTISEMENT

ಕಾರ್ಯಕರ್ತರ ಸಮಾವೇಶದಲ್ಲಿ ಒಗ್ಗಟ್ಟಿನ ಮಂತ್ರ

ಜೆಡಿಎಸ್‌ ಕುಟುಂಬದ ಆಸ್ತಿ ಅಲ್ಲ: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2015, 19:30 IST
Last Updated 2 ಮಾರ್ಚ್ 2015, 19:30 IST

ರಾಮನಗರ: ‘ಜೆಡಿಎಸ್‌ ಅಪ್ಪ, ಮಕ್ಕಳ ಪಕ್ಷವಲ್ಲ. ಇದು ನಮ್ಮ ಕುಟುಂಬದ ಖಾಸಗಿ ಆಸ್ತಿಯೂ ಆಲ್ಲ. ನನ್ನ ಕುಟುಂಬದಿಂದ ಈ ಪಕ್ಷ ಸ್ಥಾಪನೆಯೂ ಆಗಿಲ್ಲ. ಅದು ತನ್ನದೇ ಆದ ಹಿನ್ನೆಲೆ ಹೊಂದಿರುವ ಪ್ರಾದೇಶಿಕ ಪಕ್ಷ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಪ್ರತಿಪಾದಿಸಿದರು.

ಇಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶ ಮತ್ತು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘1989ರಲ್ಲಿ ನನ್ನನ್ನು ಪಕ್ಷದಿಂದ ಹೊರಗೆ ತಳ್ಳಲಾಗಿತ್ತು. ಆಗ ಬೆಂಗಳೂರಿನಲ್ಲಿ ₨ 3 ಸಾವಿರಕ್ಕೆ ಬಾಡಿಗೆ ಮನೆ ತೆಗೆದುಕೊಂಡು ರಾಜಕೀಯ ಜೀವನ ನಡೆಸಿದೆ.

1993ರಲ್ಲಿ ಜನರು ನನ್ನ ಕೈಹಿಡಿದರು. ಆ ನಂತರ ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಾದೆ. ಇಂದು ನಮ್ಮ ಪಕ್ಷಕ್ಕೆ ಕಚೇರಿ ಇಲ್ಲವಾಗಿದೆ. ನಮಗೆ ಕೂರಲು ಸಹ ಜಾಗವಿಲ್ಲ. ಅದಕ್ಕಾಗಿಯೇ ನಿವೇಶನವನ್ನು ಬಾಡಿಗೆ ಪಡೆದು ಅಲ್ಲಿ ಶೆಡ್‌ಹಾಕಿ ಕಾರ್ಯನಿರ್ವಹಿಸಲು ಮುಂದಾಗಿದ್ದೇನೆ’ ಎಂದರು.

ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ‘ಪಕ್ಷವನ್ನು ದೊಡ್ಡ ಮಟ್ಟದಲ್ಲಿ ಪುನಃಶ್ಚೇತನಗೊಳಿಸುವ ಉದ್ದೇಶದಿಂದ ರಾಮನಗರ ಕ್ಷೇತ್ರದಿಂದಲೇ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ರಾಜ್ಯದ 224 ಕ್ಷೇತ್ರಗಳಲ್ಲೂ ಜೆಡಿಎಸ್‌ ಪಕ್ಷವನ್ನು ಬೃಹತ್ತಾಗಿ ಬೆಳೆಸುವ ಉದ್ದೇಶ ಹೊಂದಲಾಗಿದೆ’ ಎಂದು ಹೇಳಿದರು. ಶಾಸಕ ಚಲುವರಾಯಸ್ವಾಮಿ  ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕಿದೆ ಎಂದರು.

‘ಘಟಕಗಳ ಪುನರ್‌ರಚನೆ’
‘ಪಕ್ಷದ ರಾಜ್ಯ ಘಟಕ ಮತ್ತು ಜಿಲ್ಲಾ ಘಟಕಗಳ ಪುನರ್‌ ರಚನೆಗೆ ಸದ್ಯದಲ್ಲಿಯೇ ಚಾಲನೆ ನೀಡಲಾಗುವುದು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

ಬಿಡದಿ ಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ಎಚ್‌.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಶಾಸಕರು ಹಾಗೂ ಮುಖಂಡರ ಸಭೆಯ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು. ಈ ಸಂಬಂಧ 2–3 ದಿನದಲ್ಲಿ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದರು.


ಜೆಡಿಎಸ್‌ ಕಚೇರಿಗೆ ಭೂಮಿ ಪೂಜೆ
ಬೆಂಗಳೂರು: ಶೇಷಾದ್ರಿಪುರದ ಪ್ಲಾಟ್‌­ಫಾರ್ಮ್‌ ರಸ್ತೆಯಲ್ಲಿರುವ ಕೃಷ್ಣಾ ಫ್ಲೋರ್‌ ಮಿಲ್‌ ಸಮೀಪ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿ­ಎಂಪಿ) ಗುತ್ತಿಗೆಗೆ ನೀಡಿರುವ ನಿವೇಶ­ನ­ದಲ್ಲಿ ಜೆಡಿಎಸ್‌ನ ನೂತನ ಕಚೇರಿ ನಿರ್ಮಾಣಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಸೋಮವಾರ ಭೂಮಿಪೂಜೆ ನೆರವೇರಿಸಿದರು.

ರೇಸ್‌ ಕೋರ್ಸ್‌ ರಸ್ತೆಯಲ್ಲಿರುವ ಕಾಂಗ್ರೆಸ್‌ ಭವನವನ್ನು ಕಾಂಗ್ರೆಸ್‌ ಪಕ್ಷಕ್ಕೆ ಹಸ್ತಾಂತರ ಮಾಡಿದ ನಂತರ ಜೆಡಿಎಸ್‌ ಪಕ್ಷಕ್ಕೆ ಕಚೇರಿ ಇಲ್ಲ. ಬಿಬಿಎಂಪಿ ಈ ಮೊದಲು ಗುತ್ತಿಗೆಗೆ ನೀಡಿದ್ದ ನಿವೇಶನ­ವನ್ನು ಜೆಡಿಎಸ್‌ ಸ್ವಾಧೀನಕ್ಕೆ ಪಡೆಯು­ವಾಗ ವಿವಾದ ಉಂಟಾಗಿತ್ತು. ಈಗ ಪಾಲಿ­ಕೆಯು ನೀಡಿರುವ 39 ಗುಂಟೆ ವಿಸ್ತೀರ್ಣದ ನಿವೇಶನದಲ್ಲಿ ಜೆಡಿಎಸ್‌ನ ಹೊಸ ಕಚೇರಿ ನಿರ್ಮಿಸಲಾಗುತ್ತಿದೆ.

ಭೂಮಿ ಪೂಜೆ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ದೇವೇಗೌಡ, ‘ಐದು ವರ್ಷಗಳ ಅವಧಿಗೆ ಈ ನಿವೇಶನ­ವನ್ನು ಗುತ್ತಿಗೆಗೆ ಪಡೆದಿದ್ದೇವೆ. ಈಗ ತಾತ್ಕಾಲಿಕ ಶೆಡ್‌ ಒಂದನ್ನು ನಿರ್ಮಿಸಿ, ಕಚೇರಿ ಸ್ಥಳಾಂತರ ಮಾಡುತ್ತೇವೆ. ನಂತರದ ದಿನಗಳಲ್ಲಿ ಕಟ್ಟಡ ನಿರ್ಮಾಣದ ಕುರಿತು ಯೋಚಿಸುತ್ತೇವೆ’ ಎಂದರು.

‘ಈಗ ನಮ್ಮ ಪಕ್ಷಕ್ಕೆ ಕಚೇರಿಯ ಜಾಗ ಸಿಕ್ಕಿದೆ. ಆರು ತಿಂಗಳ ಅವಧಿಗಾಗಿ ₨ 72 ಸಾವಿರ ಬಾಡಿಗೆಯನ್ನು ಮುಂಗಡವಾಗಿ ನೀಡಿದ್ದೇವೆ. ಮುಂದೆ ಹಂತ ಹಂತವಾಗಿ ಪಾವತಿ ಮಾಡುತ್ತೇವೆ’ ಎಂದು ಹೇಳಿದರು. ಈಗ ಜೆಡಿಎಸ್‌ಗೆ ಗುತ್ತಿಗೆಗೆ ನೀಡಿರುವ ನಿವೇಶನದಲ್ಲಿ ಆಸ್ಪತ್ರೆ ನಿರ್ಮಿಸುವ ಪ್ರಸ್ತಾವ ಇರುವ ಕುರಿತು ಕೇಳಿದಾಗ, ‘ಸ್ಥಳೀಯ ಶಾಸಕರು, ಪಾಲಿಕೆ ಸದಸ್ಯರ ಜೊತೆ ಸಮಾಲೋಚಿಸಿದ ಬಳಿಕವೇ ಈ ನಿವೇಶನವನ್ನು ನಮ್ಮ ಪಕ್ಷಕ್ಕೆ ಗುತ್ತಿಗೆಗೆ ನೀಡಲಾಗಿದೆ. ಸುತ್ತಮುತ್ತ ಸಾಕಷ್ಟು ಸ್ಥಳಾವಕಾಶವಿದೆ. ಅಲ್ಲಿ ಆಸ್ಪತ್ರೆ ನಿರ್ಮಿಸಬಹುದು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.