ADVERTISEMENT

ಕಾವೇರಿ ನೀರಿನ ವಿಷಯಕ್ಕೆ ಹೋರಾಟ: ದೇವೇಗೌಡ

ಮತ್ತೆ ಪ್ರಧಾನಿ ಆಗಲು ನಾನು ಬದುಕಿಲ್ಲ

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 16:08 IST
Last Updated 30 ಜೂನ್ 2016, 16:08 IST
ಕಾವೇರಿ ನೀರಿನ ವಿಷಯಕ್ಕೆ ಹೋರಾಟ: ದೇವೇಗೌಡ
ಕಾವೇರಿ ನೀರಿನ ವಿಷಯಕ್ಕೆ ಹೋರಾಟ: ದೇವೇಗೌಡ   

ಮಂಡ್ಯ: ‘ಪ್ರಧಾನಮಂತ್ರಿ, ಮುಖ್ಯಮಂತ್ರಿ ಆಗಲು ನಾನು ಬದುಕಿಲ್ಲ. ಪಕ್ಷ ಕಟ್ಟಿ ಹೋರಾಡುತ್ತಿಲ್ಲ. ಕಾವೇರಿ ನೀರಿನ ವಿಷಯದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಹೋರಾಟ ಮಾಡುತ್ತಿದ್ದೇನೆ' ಎಂದು ಜೆಡಿಎಸ್‌ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಹೇಳಿದರು.

ನಗರದಲ್ಲಿ ಗುರುವಾರ ಜೆಡಿಎಸ್‌ ಹಮ್ಮಿಕೊಂಡಿದ್ದ ವಿಧಾನ ಪರಿಷತ್‌ ನೂತನ ಸದಸ್ಯರಿಗೆ ಸನ್ಮಾನ ಹಾಗೂ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಸದಾ ಕಷ್ಟವನ್ನೇ ಅನುಭವಿಸುತ್ತಾ ಬಂದಿದ್ದೇನೆ. ಯಾರ ಬಗ್ಗೆಯೂ ಕೀಳಾಗಿ ಮಾತನಾಡುವುದಿಲ್ಲ. ನಾಡಿನ ರಕ್ಷಣೆಗಾಗಿ ಪ್ರಾದೇಶಿಕ ಪಕ್ಷ ಉಳಿಯಬೇಕು. ಜನರು ಸ್ವಾಭಿಮಾನ ಬೆಳೆಸಿಕೊಳ್ಳಬೇಕು' ಎಂದರು.

ಸಕ್ಕರೆ ನಾಡಿನಲ್ಲಿ 100 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಬಗ್ಗೆ ಆಡಳಿತ ನಡೆಸುವವರು, ಪ್ರತಿ ಪಕ್ಷದವರು ಮಾತನಾಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜೆಡಿಎಸ್‌ ಮುಗಿಸುವುದಾಗಿ ಹೇಳಿದರೆ, ಬಿಜೆಪಿಯ ಯಡಿಯೂರಪ್ಪ ಅವರು ಮುಂದಿನ ವಿಧಾನಸಭೆಗೆ 150 ಸೀಟು ಗೆಲ್ಲುವ ಬಗ್ಗೆ ಹೇಳುತ್ತಾರೆ. ರೈತರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಟೀಕಿಸಿದರು.

ಪಕ್ಷಕ್ಕೆ ದ್ರೋಹ ಮಾಡಿದವರನ್ನು ಒಂದು ನಿಮಿಷವೂ ಪಕ್ಷದಲ್ಲಿ ಇರಲು ಬಿಡುವುದಿಲ್ಲ. ಪಕ್ಷದಿಂದ ಬೆಳೆದು ಹೋಗಿ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯಾದವರು ಜೆಡಿಎಸ್‌ ಪಕ್ಷ ಮುಗಿಸುತ್ತೇನೆ ಎನ್ನುವುದು ನೋವು ತಂದಿದೆ. ಕಾರ್ಯಕರ್ತರು ಇರುವವರೆಗೂ ಪಕ್ಷಕ್ಕೆ ಏನೂ ಆಗುವುದಿಲ್ಲ. ಹೋರಾಟ ನಿರಂತರವಾಗಿರಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.