ADVERTISEMENT

ಕುಂಟುತ್ತಿದ್ದವರಿಗೆ ಬಲ

ಪ್ರಸನ್ನ ಸತ್ಯಾಗ್ರಹ ಬೆಂಬಲಿಸಿದ ದೇವನೂರ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2015, 19:30 IST
Last Updated 11 ಏಪ್ರಿಲ್ 2015, 19:30 IST
ಕುಂಟುತ್ತಿದ್ದವರಿಗೆ ಬಲ
ಕುಂಟುತ್ತಿದ್ದವರಿಗೆ ಬಲ   

ಮೈಸೂರು: ‘ಬದನವಾಳುವಿನಲ್ಲಿ ಪ್ರಸನ್ನ ಹಾಗೂ ಅವರ ಗೆಳೆಯರ ವಾಸ್ತವ್ಯ ಸುಸ್ಥಿರವಾದ ಬದುಕಿನ ಕಡೆ ನಡೆಯುವ ಮಾರ್ಗಕ್ಕೆ ಪ್ರೇರಣೆ ಆಗುತ್ತದೆ’ ಸಾಹಿತಿ ದೇವನೂರ ಮಹಾದೇವ ತಿಳಿಸಿದರು.

ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಬದನವಾಳುವಿನಲ್ಲಿ ಏ. 19ರಂದು ಆಯೋಜಿಸಿರುವ ‘ಸತ್ಯಾಗ್ರಹ ಮತ್ತು ಸುಸ್ಥಿರ ಬದುಕಿನ ಸಮಾವೇಶ’ಕ್ಕೂ ಮುನ್ನ ಪ್ರಸನ್ನ ಅವರನ್ನು ಶನಿವಾರ ಭೇಟಿಯಾಗಿ ಬೆಂಬಲ ವ್ಯಕ್ತಪಡಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.

‘ರೈತ ಚಳವಳಿ, ದಲಿತ ಚಳವಳಿ, ನೈಸರ್ಗಿಕ ಕೃಷಿ ಮೊದಲಾದವುಗಳ ಕುರಿತು ನಾವೆಲ್ಲ ಒಂಟಿ ಕಾಲಲ್ಲಿ ಕುಂಟುತ್ತಿದ್ದೇವೆ. ಅಂದರೆ ಒಂಟಿಯಾಗಿದ್ದೇವೆ. ಆದರೆ, ಈಗ ಕಾಲ ಕೂಡಿ ಬಂದಿದೆ. ಒಟ್ಟಿಗೆ ನಡೆಯಬೇಕು ಎಂಬ ಅರಿವಾಗಿದೆ. ಜತೆಗೂಡಿ ಹೋಗಬೇಕಾದ ಅಗತ್ಯ ತುಂಬ ಇದೆ. ರೈತರು, ದಲಿತರು, ಮಹಿಳಾ ಹೋರಾಟಗಾರರು, ಪ್ರಗತಿಪರ ಹೋರಾಟಗಾರರು ಕೂಡಿಕೊಂಡು ಕೈಮಗ್ಗ, ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ, ನೈಸರ್ಗಿಕ ಕೃಷಿ ಮೊದಲಾದ ವಿಷಯಗಳ ಕುರಿತು ಒಕ್ಕೂಟದ ಪರಿಕಲ್ಪನೆಯಲ್ಲಿ ಪರಸ್ಪರ ಪೂರಕವಾಗಿ ನಡೆಯಬೇಕಿದೆ. ಬದನವಾಳು ಸತ್ಯಾಗ್ರಹ ಎಚ್ಚರಿಕೆ ಗಂಟೆ ಬಾರಿಸಿದೆ’ ಎಂದರು.

ಹೈದರಾಬಾದ್‌ನಿಂದ ಶ್ರೀಕುಮಾರ್‌ ತಂತ್ರಜ್ಞಾನಿ ರಾಮಗೋಪಾಲ್, ಕೃಷಿ ತಜ್ಞೆ ಉಷಾರಾವ್, ಕುಂದಾಪುರದಲ್ಲಿ ಸುಸ್ಥಿರ ಕೃಷಿ ಮಾಡುತ್ತಿರುವ ಅನಿಲ್‌ ಹೆಗ್ಡೆ ಅವರು ಪ್ರಸನ್ನ ಅವರೊಂದಿಗೆ ಇದ್ದಾರೆ.

ಪ್ರಸನ್ನ ಅವರನ್ನು ಶನಿವಾರ ನಟ ಧನಂಜಯ್ ಭೇಟಿ ಮಾಡಿ ಬೆಂಬಲ ವ್ಯಕ್ತಪಡಿಸಿದರು. ರಂಗಕರ್ಮಿ ಮಂಡ್ಯ ರಮೇಶ್ ಅವರು ತಮ್ಮ ‘ನಟನ’ ಸಂಸ್ಥೆಯ ಮಕ್ಕಳನ್ನು ಕರೆದುಕೊಂಡು ಹೋಗಿ ‘ರತ್ನಪಕ್ಸಿ’ ನಾಟಕ ಪ್ರದರ್ಶಿಸಿದರು. ಚಾಮರಾಜನಗರದ ದೀನಬಂಧು ಆಶ್ರಮದ ಅನಾಥಾಲಯದ ಮಕ್ಕಳು ಹಾಡು ಹೇಳಿದರು.

*
ಪ್ರಸನ್ನ ಹಾಗೂ ಚರಕ ಸಂಸ್ಥೆಯೊಂದಿಗೆ ಮೊದಲಿನಿಂದಲೂ ಜತೆಯಲ್ಲಿರುವೆ. ಕ್ರಿಯಾಶೀಲನಾಗಿರದೆ ಇರಬಹುದು. ಅವರೊಂದಿಗೆ ಸದಾ ಜತೆಗಿರುವೆ

-ದೇವನೂರ ಮಹಾದೇವ, ಹಿರಿಯ ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT