ADVERTISEMENT

ಕುಡಿಯುವ ನೀರಿಗೂ ಪಡಿತರ?

ಬೆಂಗಳೂರು–ಮೈಸೂರು ಸೇರಿ 6 ಜಿಲ್ಲೆಗಳಲ್ಲಿ ಜಾರಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2017, 4:14 IST
Last Updated 22 ಫೆಬ್ರುವರಿ 2017, 4:14 IST
ಕುಡಿಯುವ ನೀರಿಗೂ ಪಡಿತರ?
ಕುಡಿಯುವ ನೀರಿಗೂ ಪಡಿತರ?   

ಬೆಂಗಳೂರು: ತೀವ್ರ ಬರಗಾಲದಿಂದಾಗಿ ಜಲಾಶಯಗಳು ಬರಿದಾಗುತ್ತಿದ್ದು, ಕಾವೇರಿ ನದಿ ನೀರನ್ನು ಆಶ್ರಯಿಸಿರುವ ನಗರ ಮತ್ತು ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿಗೆ ‘ಪಡಿತರ ಮಾದರಿ ವ್ಯವಸ್ಥೆ’ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ.

ಜಲಸಂಪನ್ಮೂಲ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಕಾವೇರಿ ನೀರಾವರಿ ನಿಗಮ, ಬೆಂಗಳೂರು ಜಲಮಂಡಳಿ ಮುಖ್ಯಸ್ಥರ ಸಭೆ ಗುರುವಾರ ನಡೆಯಲಿದ್ದು, ಪಡಿತರ ಮಾದರಿ ವ್ಯವಸ್ಥೆ ಜಾರಿಗೊಳಿಸಬೇಕೇ ಬೇಡವೇ ಎಂಬ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಮಾಧ್ಯಮ ಪ್ರತಿನಿಧಿಗಳ ಜತೆ ಮಂಗಳವಾರ ಮಾತನಾಡಿದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು, ‘ಬೆಂಗಳೂರು ಮಹಾನಗರಕ್ಕೆ ಮೇ ಅಂತ್ಯದವರೆಗೆ ನೀರು ಪೂರೈಸಲು 2 –3 ಟಿಎಂಸಿ ಅಡಿ ನೀರು ಕೊರತೆ ಬೀಳಲಿದೆ. ಕೃಷ್ಣರಾಜ ಸಾಗರ(ಕೆಆರ್‌ಎಸ್‌) ಜಲಾಶಯದಲ್ಲಿ ಲಭ್ಯ ಇರುವ ನೀರನ್ನು ಸಮರ್ಪಕವಾಗಿ ಪೂರೈಕೆ ಮಾಡಲು ನೀರು ಪಡಿತರ (ನಿರ್ದಿಷ್ಟ ಪ್ರಮಾಣ ಮತ್ತು ಅವಧಿಯಲ್ಲಿ ಮಾತ್ರ ನೀರು ಪೂರೈಸಲು)ವ್ಯವಸ್ಥೆ ಜಾರಿಗೊಳಿಸಬೇಕಾಗಬಹುದು ಎಂದು ತಿಳಿಸಿದರು.

ADVERTISEMENT

ಬೆಂಗಳೂರಿಗೆ ನೀರಿನ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಬೆಂಗಳೂರು ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಹಾಗೂ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್‌ಸಿಂಗ್‌ ಪ್ರತಿನಿತ್ಯ  ಸಭೆ ನಡೆಸುತ್ತಿದ್ದಾರೆ ಎಂದು ಅವರು ವಿವರಿಸಿದರು.

ನೀರಿನ ಬೇಡಿಕೆ–ಪೂರೈಕೆ: ಕಾವೇರಿ ಕೊಳ್ಳದ ಜಲಾಶಯಗಳಲ್ಲಿರುವ ನೀರು, ನಗರ, ಪಟ್ಟಣಗಳಿಗೆ ಮೇ ತಿಂಗಳಿನವರೆಗಿನ ಬೇಡಿಕೆ ಕುರಿತು ಬೆಂಗಳೂರು ಜಲಮಂಡಳಿ ಕಚೇರಿಯಲ್ಲಿ ಮಂಗಳವಾರ ರಾತ್ರಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು ಎಂದು ಗೊತ್ತಾಗಿದೆ.

ಏಪ್ರಿಲ್‌–ಮೇ ತಿಂಗಳಿನಲ್ಲಿ ಮಳೆ ಬೀಳುವವರೆಗೆ ಕಾವೇರಿಕೊಳ್ಳದ ಕೆಆರ್‌ಎಸ್‌, ಹಾರಂಗಿ, ಕಬಿನಿ ಹಾಗೂ ಹೇಮಾವತಿ ನೀರನ್ನು ಕಾಯ್ದಿರಿಸಿಕೊಳ್ಳುವ ಅನಿವಾರ್ಯತೆ ಕುರಿತು ಚರ್ಚೆಯಾಯಿತು. 50 ವರ್ಷಗಳ ಇತಿಹಾಸದಲ್ಲಿ, ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಫೆಬ್ರುವರಿ ಅಂತ್ಯಕ್ಕೆ ಒಟ್ಟು ನೀರಿನ ಸಂಗ್ರಹ 9 ಟಿಎಂಸಿ ಅಡಿಗೆ ಇಳಿದಿರುವುದು ಇದೇ ಮೊದಲು. ಈ ಬಗ್ಗೆ ಸಭೆ ಆತಂಕ ವ್ಯಕ್ತಪಡಿಸಿತು ಎನ್ನಲಾಗಿದೆ.

ಸಂಗ್ರಹ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಿದರೂ ಪಡಿತರ ಮಾದರಿ ವ್ಯವಸ್ಥೆ ಜಾರಿಗೆ ತರಬೇಕಾಗುತ್ತದೆ. ಇಲ್ಲದೆ ಇದ್ದರೆ ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು, ರಾಮನಗರ, ಹಾಸನ ಜಿಲ್ಲೆಯ ನಗರಗಳು, 33 ಪ್ರಮುಖ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಂಕಷ್ಟ ಎದುರಾಗಲಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು ಎಂದು ಮೂಲಗಳು ತಿಳಿಸಿವೆ.

ನಿತ್ಯ 600 ಕ್ಯುಸೆಕ್‌ ನೀರು ಅಗತ್ಯವಿದ್ದು, ಅಣೆಕಟ್ಟಿನ ಹೊರಹರಿವು ಈ ಪ್ರಮಾಣದಲ್ಲಿ ಇರುವವರೆಗೆ ಸಮಸ್ಯೆ ಇಲ್ಲ. ಅದು ನಿಂತರೆ ಸ್ಥಿತಿ ಬಿಗಡಾಯಿಸಲಿದೆ ಎಂದು ಅಭಿಪ್ರಾಯಪಡಲಾಯಿತು.

ಡೆಡ್‌ ಸ್ಟೋರೇಜ್‌ ಬಳಕೆಗೆ ವಿರೋಧ
ಕೆಆರ್‌ಎಸ್‌ ಜಲಾಶಯದ ಡೆಡ್‌ ಸ್ಟೋರೇಜ್‌ ಬಳಕೆಗೆ ಇಲಾಖೆಯ ವಿರೋಧವಿದೆ ಎಂದೂ ಎಂ.ಬಿ. ಪಾಟೀಲ ಸ್ಪಷ್ಟಪಡಿಸಿದರು.
ಡೆಡ್‌ ಸ್ಟೋರೇಜ್‌ ನೀರನ್ನು ಬಳಸಿದರೆ 5 ಟಿಎಂಸಿ ಅಡಿ ನೀರು ಹೆಚ್ಚುವರಿಯಾಗಿ ಸಿಗಲಿದೆ. ಆದರೆ, ಇದಕ್ಕೆ ಅಂದಾಜು ₹40 ಕೋಟಿ ವೆಚ್ಚವಾಗಲಿದೆ. ಮತ್ತೊಂದೆಡೆ ಜಲಚರಗಳ ಮೇಲೆ ದುಷ್ಪರಿಣಾಮ ಬೀರಲಿದೆ. ಹೀಗಾಗಿ ಕುಡಿಯುವ ನೀರು ಪೂರೈಕೆಗೆ ಅನಿವಾರ್ಯವಾದರೆ ಮಾತ್ರ ಡೆಡ್‌ ಸ್ಟೋರೇಜ್‌ ಬಳಸಲು ಒಪ್ಪಿಗೆ ನೀಡಲಾಗುವುದು ಎಂದರು.

ಪಡಿತರ ವ್ಯವಸ್ಥೆ ಎಂದರೆ?
ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ದಿನ ಬಿಟ್ಟು ದಿನ ಕಾವೇರಿ ನೀರು ಪೂರೈಸಲಾಗುತ್ತಿದೆ. ಕೆಲವು ಕಡೆಗಳಲ್ಲಿ ವಾರಕ್ಕೆ ಎರಡು ದಿನ ಮಾತ್ರ ನೀರಿನ ಸರಬರಾಜು ಇದೆ. ಪಡಿತರ ವ್ಯವಸ್ಥೆ ಜಾರಿಯಾದರೆ ಎಲ್ಲ ಪ್ರದೇಶಗಳಲ್ಲಿ ವಾರಕ್ಕೆ ಎರಡು ದಿನ ಮಾತ್ರ ನೀರು ಪೂರೈಕೆ ಇರಲಿದೆ.

ಅಂಕಿ ಅಂಶ
* 600 ಕ್ಯುಸೆಕ್‌ ಪ್ರತಿನಿತ್ಯ ಬೇಕಾದ ನೀರು
* 2.4 ಟಿಎಂಸಿ ಅಡಿ ಪ್ರತಿ ತಿಂಗಳಿಗೆ ಬೇಕಾದ ನೀರು
* 9 ಟಿಎಂಸಿ ಅಡಿ ಸದ್ಯ ಲಭ್ಯವಿರುವ ನೀರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.