ADVERTISEMENT

ಕುರುಬರಿಗೆ ದೀಕ್ಷೆ ಕೊಡಲು ಪೇಜಾವರರು ಯಾರು?

ಕಾಗಿನೆಲೆ ಸ್ವಾಮೀಜಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2013, 19:30 IST
Last Updated 27 ಅಕ್ಟೋಬರ್ 2013, 19:30 IST

ರಾಣೆಬೆನ್ನೂರು: ‘ಹಾಲುಮತ ನಮ್ಮ ದೇಶದ ಮೂಲ ಸಂಸ್ಕೃತಿ. ಕುರುಬರು ಮೂಲತಃ ಶೈವರು, ಹಾಗಾಗಿ ವೈಷ್ಣವ ದೀಕ್ಷೆ
ಪಡೆ­ಯುವ ಅಗತ್ಯ ಅವರಿಗಿಲ್ಲ. ಹಾಲು­ಮತದವರು ಗರ್ಭದ­ಲ್ಲಿಯೇ ದೀಕ್ಷೆ ಪಡೆದಿರುತ್ತಾರೆ’ ಎಂದು ಕಾಗಿನೆಲೆ ನಿರಂಜನಾನಂದ­ಪುರಿ ಸ್ವಾಮೀಜಿ ಭಾನುವಾರ ಹೇಳಿದರು.

ನಗರದ ಹಲಗೇರಿ ರಸ್ತೆಯ ಬೀರ­ಲಿಂಗೇಶ್ವರ ದೇವಸ್ಥಾನದ ಆವರಣ­­ದಲ್ಲಿ ನಡೆದ ಕನಕದಾಸರ 526ನೇ ಜಯತ್ಯುಂತ್ಸವ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ತಾಲ್ಲೂಕು ಮಟ್ಟದ ಕುರುಬ ನೌಕರರ ಸಮಾವೇಶ­ದಲ್ಲಿ ಅವರು ಮಾತನಾಡಿದರು.

ಕುರುಬರು ಬಯಸಿದರೆ ವೈಷ್ಣವ ದೀಕ್ಷೆ ನೀಡಲು ಸಿದ್ಧ ಎಂಬ ಪೇಜಾವರ ಶ್ರೀಗಳ ಹೇಳಿಕೆಯನ್ನು ಹಿಗ್ಗಾಮುಗ್ಗಾ ಖಂಡಿಸಿದ ಅವರು, ‘ನಿಮಗೆ
75 ವರ್ಷ ಆಗಿದೆ, ಬಹಳ ಸಾಧನೆ ಮಾಡಿದ್ದೀರಿ, ಸಾವಿಗೆ ಸಮೀಪವಾಗಿದ್ದೀರಿ, ಕೆಟ್ಟ ಕೆಲಸ ಮಾಡಲು ಹೋಗಬೇಡಿ’ ಎಂದರು.

‘ಇಳಿ ವಯಸ್ಸಿನಲ್ಲಿ ಉತ್ತಮ ಕೆಲಸ ಮಾಡಿ, ಆದರ್ಶರಾಗಿ. ಜಾತಿ ಭೇದ ಮಾಡಿ ದ್ವಂದ್ವ ಹೇಳಿಕೆ­­­ಗಳನ್ನು ನೀಡುವುದನ್ನು ಬಿಡಿ. ಸಾಮರಸ್ಯದ
ಬಾಳಿಗೆ ದಾರಿ ಮಾಡಿಕೊಟ್ಟು ಎಲ್ಲರನ್ನು ಪ್ರೀತಿಯಿಂದ ಕಾಣಿ’ ಎಂದು ಅವರು ಸಲಹೆ ಮಾಡಿದರು.

‘ಕನಕ ಹಾಲುಮತದ ಸಂಕೇತ, ನೀವು ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ, ನಮಗೇನು ದೀಕ್ಷೆ ಕೊಡುತ್ತೀರಿ, ಹಾಲುಮತದ ಸಮುದಾಯ ದಾರ್ಶನಿಕರು ಲಿಂಗ ದೀಕ್ಷೆ ನೀಡಿದ ಪರಂಪರೆಯವರು. ನಿಮಗೆ ಗೊತ್ತಿಲ್ಲದ ಪದ್ಧತಿಯನ್ನು ತಿಳಿದುಕೊಳ್ಳಿ, ಕನಕನನ್ನು ವೈಷ್ಣವ ಪಂಥಕ್ಕೆ ಸೀಮಿತಗೊಳಿಸಲು ಯತ್ನಿಸಬೇಡಿ’ ಎಂದು ಅವರು ಹೇಳಿದರು.

‘ಕನಕದಾಸ ವೈಷ್ಣವ ಸಿದ್ಧಾಂತದ ಪರಿಪಾಲಕ. ಆತನ ಇಷ್ಟದೇವರು ಕೃಷ್ಣ, ಮನೆ ದೇವರು ಬೀರಲಿಂಗ, ಭಗವಂತನಿಗೆ ಬೇಕಾಗಿದ್ದುದು
ಭಕ್ತಿಯೇ ಹೊರತು ನಿಮ್ಮ ಪೂಜೆ, ಆಚಾರ–ವಿಚಾರವಲ್ಲ, ಕನಕದಾಸ ಸ್ವಾಭಿಮಾನದ ಸಂಕೇತ, 1992 ರಲ್ಲಿ ಕನಕಗುರು ಪೀಠ ಕಟ್ಟಿಕೊಂಡಿರುವುದು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವುದಕ್ಕಾಗಾಯೇ ಹೊರತೋ ಜಾತಿ ತಾರತಮ್ಯ ಮಾಡಲು ಅಲ್ಲ’ ಎಂದು ಸ್ಪಷ್ಟಪಡಿಸಿದರು.

‘ಕನಕದಾಸರು ವೈಷ್ಣವ ದೀಕ್ಷೆ ಪಡೆದಿರುವುದಕ್ಕೆ ಯಾವುದಾರೂ ದಾಖಲೆಯಿದ್ದರೆ ಬಹಿರಂಗವಾಗಿ ತೋರಿಸಿ’ ಎಂದು ಅವರು ಸವಾಲು ಹಾಕಿದರು. ‘ಹರ ಮತ್ತು ಹರಿಯನ್ನು ಒಂದೇ ಎಂದು ಪೂಜಿಸಿದ ಏಕೈಕ ಮಹಾನ್‌ ವ್ಯಕ್ತಿ ಭಕ್ತ ಕನಕದಾಸರು, ಉಡುಪಿಯಲ್ಲಿರುವ ಶ್ರೀಕೃಷ್ಣ
ಮಠದಿಂದ ಕನಕನ ಕಿಂಡಿಯನ್ನು ಬೇರ್ಪಡಿಸಿ, ಅದನ್ನು ವಿಶಾಲವಾಗಲು ಬಿಡಿ.  ಚುನಾವಣೆ ಸಂದರ್ಭದಲ್ಲಿ ದ್ವಂದ್ವ ಹೇಳಿಕೆ ನೀಡುವುದು ಸರಿಯಲ್ಲ’ ಎಂದು ಕಾಗಿನೆಲೆ ಶ್ರೀಗಳು ಅಭಿಪ್ರಾಯಪಟ್ಟರು.

‘ಇದು ಬ್ರಾಹ್ಮಣ ವರ್ಸಸ್‌ ಕುರುಬರಿಗಷ್ಟೇ ಹತ್ತಿದ ಮ್ಯಾಚ್‌ ಅಲ್ಲರೀ, ಅದು ಈಗ ಪೇಜಾವರ ಮಠ ವರ್ಸಸ್‌ ಕಾಗಿನೆಲೆ ಕನಕ
ಗುರುಪೀಠಕ್ಕೆ ಹತ್ತಿದ ಮ್ಯಾಚ್‌’ ಎಂದು ಸ್ವಾಮೀಜಿ ಲೇವಡಿ ಮಾಡಿದರು.

‘ನಾಚಿಕೆಯಾಗಬೇಕು’
ಕನಕದಾಸರ ಆರಾಧಕ­ರಿಗೆ ವೈಷ್ಣವ ದೀಕ್ಷೆ ಕೊಡಲು ನೀವು (ಪೇಜಾವರ ಶ್ರೀ) ಯಾರು? ನಿಮ್ಮ ದೀಕ್ಷೆ ಯಾರಿಗೆ ಬೇಕು? ನಾಚಿಕೆಯಾಗಬೇಕು ನಿಮಗೆ.
– ಕಾಗಿನೆಲೆ ನಿರಂಜನಾನಂದಪುರಿ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.