ADVERTISEMENT

ಕುಲಪತಿ– ಕುಲಸಚಿವ ಸೇರಿ ನಾಲ್ವರ ಬಂಧನ

ಧಾರವಾಡ ಕ.ವಿ.ವಿ.ಯಲ್ಲಿ ಭ್ರಷ್ಟಾಚಾರ ಆರೋಪ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2014, 19:30 IST
Last Updated 20 ಅಕ್ಟೋಬರ್ 2014, 19:30 IST

ಧಾರವಾಡ: ಕರ್ನಾಟಕ ವಿವಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ­ಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕುಲಪತಿ ಡಾ. ಎಚ್‌.ಬಿ.­ವಾಲಿಕಾರ ಸೇರಿದಂತೆ ನಾಲ್ವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಸಂಜೆ ಬಂಧಿಸಿದರು.

ಶನಿವಾರದಿಂದ ತನಿಖೆ ಹಾಗೂ ದಾಖಲೆ ಪರಿಶೀಲನೆ ನಡೆಸಿದ ಲೋಕಾ­ಯುಕ್ತ ಪೊಲೀಸರು, ಸೋಮ­ವಾರವೂ ತನಿಖೆಯನ್ನು ಮುಂದು­ವ­ರಿಸಿದ್ದರು. ಅದರಂತೆಯೇ ಹಣಕಾಸು ಅಧಿಕಾರಿ ರಾಜಶ್ರೀ, ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರೊ.ಎಚ್‌.ಟಿ.­ಪೋತೆ, ಕುಲಪತಿಯ ಆಪ್ತ ಸಹಾಯಕ ಶಿವಾನಂದ ಬೀಳಗಿ ಅವರನ್ನು ಸೋಮವಾರ ಬೆಳಿಗ್ಗೆ ನಗರದ ಕಚೇರಿಗೆ ಕರೆಸಿ­ಕೊಂಡು ಲೋಕಾ­ಯುಕ್ತ ಪೊಲೀಸರು ವಿಚಾರಣೆ ನಡೆಸಿ, ಅಲ್ಲಿಯೇ ವಶಕ್ಕೆ ತೆಗೆದುಕೊಂಡರು.

ಸಂಜೆ 6.30ಕ್ಕೆ ವಿಶ್ವವಿದ್ಯಾಲಯಕ್ಕೆ ಬಂದ ಲೋಕಾಯುಕ್ತ ಎಸ್‌ಪಿ ಕೆ.ಪರುಶು­ರಾಮ ಮತ್ತು ಸಿಬ್ಬಂದಿ ಕುಲಪತಿಗಳನ್ನು ಬಂಧಿಸಿದರು.
ಅಧಿಕಾರ­ದಲ್ಲಿ ಇರುವಾಗಲೇ ಬಂಧನಕ್ಕೆ ಒಳಗಾಗಿ­ರುವ ಮೊದಲ ಕುಲಪತಿ ಇವರಾಗಿದ್ದಾರೆ.

ಈ ಸಂದರ್ಭದಲ್ಲಿ ಡಾ. ವಾಲಿಕಾರ ಅವರ ಪತ್ನಿ ಅನಸೂಯಾ ಮತ್ತು ಕುಟುಂಬದ ಸದಸ್ಯರು ರೋದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ.ವಾಲಿಕಾರ ‘ನನಗೆ ಏನೂ ಆಗುವುದಿಲ್ಲ. ಮೇಲೆ ಎಲ್ಲವನ್ನೂ ನೋಡಿಕೊಳ್ಳುವ ಒಬ್ಬನಿದ್ದಾನೆ’ ಎಂದು ಸಮಾಧಾನ ಪಡಿಸಿ ಪೊಲೀಸರೊಂದಿಗೆ ಹೊರಟರು.

ನಗರ ಜಿಲ್ಲಾ ಆಸ್ಪತ್ರೆಯಲ್ಲಿ ನಾಲ್ವ­ರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿ­ಸಲಾಯಿತು. ನಂತರ ಡಾ.ಎಚ್‌.ಟಿ.­ಪೋತೆ ಹಾಗೂ ಶಿವಾನಂದ ಬೀಳಗಿ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಆರೋಪಿಗಳಾದ ಪೋತೆ ಮತ್ತು ಶಿವಾನಂದ ಬೀಳಗಿ ಅವರನ್ನು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ (ಭ್ರಷ್ಟಾಚಾರ ನಿಗ್ರಹ)  ಎಸ್‌.ಎಸ್‌.ಬಳ್ಳುಳ್ಳಿ ಅವರ ನಿವಾಸ ಕಚೇರಿಯಲ್ಲಿ ಹಾಜರುಪಡಿಸ­ಲಾ­ಯಿತು. ಈ ಸಂದರ್ಭದಲ್ಲಿ ಇವರಿ­ಬ್ಬರೂ ಜಾಮೀನು ಕೋರಿ ಅರ್ಜಿ ಸಲ್ಲಿಸಿ­ದರು.

ಆದರೆ ಅರ್ಜಿಯನ್ನು ತಿರಸ್ಕ­ರಿಸಿದ ನ್ಯಾಯಾಧೀಶರು, ಆರೋಪಿ­ಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಆನಂತರ ಇವರಿಬ್ಬರನ್ನು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು.ವಾಲಿಕಾರ ಆಸ್ಪತ್ರೆಗೆ: ಡಾ. ವಾಲಿಕಾರ ಹಾಗೂ ರಾಜಶ್ರೀ ಅವರ ದೇಹ ಸ್ಥಿತಿಯಲ್ಲಿ ವ್ಯತ್ಯಾಸ ಕಂಡು ಬಂದದ್ದರಿಂದ ಅವರನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ. ವಾಲಿಕಾರ, ‘ಜಾತಿ ರಾಜಕಾರಣದ ವ್ಯವಸ್ಥಿತ ಪಿತೂರಿಗೆ ನಾನು ಬಲಿಯಾಗಿದ್ದೇನೆ’ ಎಂದು ಹೇಳಿದರು. 


ಪ್ರಕರಣದ ಹಿನ್ನೆಲೆ: ಕರ್ನಾಟಕ ವಿವಿಯಲ್ಲಿ 2010ರಿಂದ ಈಚೆಗೆ ಅಂಕಪಟ್ಟಿ ಹಗರಣ, ನೇಮಕಾತಿ ಹಗರಣ ಸೇರಿದಂತೆ ಹಲವು ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ಕುಲಪತಿ ಡಾ. ವಾಲಿಕಾರ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿತ್ತು. ದೂರುಗಳ ಕುರಿತು ತನಿಖೆ ನಡೆಸಲು ರಾಜ್ಯಪಾಲರು ನಿವೃತ್ತ ನ್ಯಾಯಮೂರ್ತಿ ಪದ್ಮರಾಜ ನೇತೃತ್ವದ ಆಯೋಗ ರಚಿಸಿ, 15 ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದ್ದರು.  ಅದರನ್ವಯ ಆಯೋಗ ವರದಿ ಸಲ್ಲಿಸಿತ್ತು. ‘ಕುಲಪತಿಗಳು ನಿಯಮ ಮೀರಿ ನೇಮಕಾತಿ ಮಾಡಿಕೊಂಡಿರುವುದು, ಹಲವು ಅಕ್ರಮಗಳಲ್ಲಿ ಭಾಗಿಯಾಗಿ­ರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದ­ರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ’ ಶಿಫಾರಸು ಮಾಡಿತ್ತು. 

ಹೀಗಾಗಿ ಕುಲಪತಿಗಳ ವಿರುದ್ಧ ಲೋಕಾಯುಕ್ತರಿಗೆ ದೂರು ಸಲ್ಲಿಸುವಂತೆ ಕುಲಸಚಿವೆ ಡಾ. ಚಂದ್ರಮಾ  ಅವರಿಗೆ ರಾಜ್ಯಪಾಲರು ನಿರ್ದೇಶನ ನೀಡಿದ್ದರು.  ರಾಜ್ಯಪಾಲರ ಸೂಚನೆಯ ಮೇರೆಗೆ ಡಾ. ವಾಲಿಕಾರ ಸೇರಿದಂತೆ 11 ಜನರ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ಕುಲಸಚಿವೆ ಡಾ. ಚಂದ್ರಮಾ ಕಣಗಲಿ ಇದೇ 7ರಂದು ದೂರು ದಾಖಲಿಸಿದ್ದರು.

ಹೈಕೋರ್ಟ್‌ನಲ್ಲಿ ನಡೆಯದ ವಿಚಾರಣೆ: ರಾಜ್ಯಪಾಲರ ಆದೇಶ ರದ್ದುಪಡಿಸಬೇಕು ಮತ್ತು ತಮ್ಮ ವಿರುದ್ಧ ಸಲ್ಲಿಕೆಯಾಗಿರುವ ಎಫ್‌ಐಆರ್‌ ರದ್ದುಪಡಿಸಬೇಕೆಂದು ಕೋರಿ ಕುಲಪತಿ ಡಾ.ವಾಲಿಕಾರ ಅವರು ಸಲ್ಲಿಸಿದ್ದ ರಿಟ್‌ ಅರ್ಜಿ ಪಟ್ಟಿಯಲ್ಲಿದ್ದರೂ ವಿಚಾರಣೆ ನಡೆಯಲಿಲ್ಲ. 

ವ್ಯವಸ್ಥಿತ ಸಂಚು: ಡಾ. ವಾಲಿಕಾರ ಅವರ ಬಂಧನ­ವಾಗುತ್ತಿದ್ದಂತೆಯೇ ಅವರ ಪತ್ನಿ ಅನಸೂಯಾ ಹಾಗೂ ಮನೆಯವರ ರೋದನ ಮುಗಿಲುಮುಟ್ಟಿತ್ತು. ‘ಮಹಿಳೆಗೆ ಮಹಿಳೆಯೇ ಶತ್ರು ಎನ್ನುವುದು ಇಂದು ಸಾಬೀತಾಯಿತು. ಇಷ್ಟೊಂದು ಕೆಲಸ ಮಾಡಬೇಡಿ ಎಂದು ಹೇಳಿದರೂ ರಾತ್ರಿ ಮೂರು ಗಂಟೆಯವರೆಗೂ ಕೆಲಸ ಮಾಡುತ್ತಿದ್ದರು. ಯಾರದೋ ಸಂಚಿಗೆ ನನ್ನ ಪತಿ ಬಲಿಯಾಗಿದ್ದಾರೆ’ ಎಂದು ಅನಸೂಯಾ ರೋದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT