ADVERTISEMENT

ಕೂಲಿ ಮಾಡುತ್ತಲೇ ಓದಿದ ಚೈತ್ರಾ ಪ್ರಥಮ

ಕೆ.ನರಸಿಂಹ ಮೂರ್ತಿ
Published 11 ಮೇ 2017, 19:43 IST
Last Updated 11 ಮೇ 2017, 19:43 IST
ಕೂಲಿ ಮಾಡುತ್ತಲೇ ಓದಿದ ಚೈತ್ರಾ ಪ್ರಥಮ
ಕೂಲಿ ಮಾಡುತ್ತಲೇ ಓದಿದ ಚೈತ್ರಾ ಪ್ರಥಮ   

ಬಳ್ಳಾರಿ: ‘ನಮ್ಮಪ್ಪ ಕೃಷಿ ಕೂಲಿಕಾರರು, ಅಮ್ಮನೂ ಕೂಲಿ ಮಾಡುತ್ತಾರೆ. ನಾನೂ ರಜೆ ದಿನಗಳಲ್ಲಿ ಕೂಲಿ ಮಾಡಲು ಹೋಗುತ್ತಿದ್ದೆ. ಕಾಲೇಜಿಗೆ ಟಾಪರ್‌ ಆಗಬೇಕು ಎಂದುಕೊಂಡೆ. ಈಗ ಅದಕ್ಕೂ ಹೆಚ್ಚಿನ ಸಾಧನೆ ಮಾಡಿರುವೆ’ –ಕಲಾ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಅತ್ಯಧಿಕ ಅಂಕ (589) ಪಡೆದಿರುವ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕೊಟ್ಟೂರಿನಲ್ಲಿರುವ ಇಂದೂ ಕಾಲೇಜಿನ ವಿದ್ಯಾರ್ಥಿನಿ ಬಿ.ಚೈತ್ರಾ ಅವರ ಮನದಾಳದ ಮಾತುಗಳಿವು.

ಬಣಕಾರ ಕೊಟ್ರೇಶ್‌ ಮತ್ತು ಕವಿತಾ ದಂಪತಿಯ ಎರಡನೇ ಮಗಳು ಅವರು. ಕೊಟ್ಟೂರು ಪಟ್ಟಣದಿಂದ 11 ಕಿ.ಮೀ ದೂರದಲ್ಲಿರುವ ಗಂಗಮ್ಮನಹಳ್ಳಿಯ ಆ ಕುಟುಂಬ ಈಗ ಸಂಭ್ರಮದಲ್ಲಿದೆ.

‘ಎಸ್ಸೆಸ್ಸೆಲ್ಸಿವರೆ ಗಷ್ಟೇ ಓದಿರುವ ತಂದೆ ತಮ್ಮ ಮಕ್ಕಳಾದರೂ ಹೆಚ್ಚು ಓದಲಿ ಎಂಬ ಆಸೆಯಿಂದ ಪಟ್ಟ ಶ್ರಮವನ್ನು ಚೈತ್ರಾ ಸಾರ್ಥಕಗೊಳಿಸಿದ್ದಾಳೆ’ ಎಂಬುದು ತಾಯಿಯ ಹೆಮ್ಮೆಯ ನುಡಿ.

ADVERTISEMENT

ಐಚ್ಛಿಕ ಕನ್ನಡ, ರಾಜ್ಯಶಾಸ್ತ್ರ, ಇತಿಹಾಸ ಮತ್ತು ಶಿಕ್ಷಣ ಸಂಯೋಜನೆಯಲ್ಲಿ ಮೊದಲ ಪಿಯುಸಿಗೆ ಸೇರುವಾಗಲೇ ಚೈತ್ರಾ ಕಾಲೇಜಿಗೇ ಟಾಪರ್‌ ಆಗಬೇಕೆಂದು ನಿರ್ಧರಿಸಿದ್ದರು.  ಅವರಿಗೆ ಕೆಎಎಸ್‌ ಅಧಿಕಾರಿಯಾಗಬೇಕೆಂಬ ಆಸೆ.

‘ಇದ್ದ ಒಂದು ಎಕರೆ ಹೊಲವನ್ನು ತಾಯಿಗೆ ಬಿಟ್ಟುಕೊಟ್ಟಿದ್ದೇವೆ. ನಮಗೆ ಯಾವ ಜಮೀನೂ ಇಲ್ಲ. ಗುತ್ತಿಗೆ ಆಧಾರದಲ್ಲಿ ಜಮೀನು ಬಾಡಿಗೆಗೆ ಪಡೆದು ಕೃಷಿ ನಡೆಸುವುದು ಎಷ್ಟು ಕಷ್ಟ ಎಂಬುದು ಬಲ್ಲವರೇ ಬಲ್ಲರು. ಹೀಗಾಗಿ ಮನೆ ಮಂದಿ ಎಲ್ಲರೂ ಕೆಲಸ ಮಾಡಲೇಬೇಕಾದ ಪರಿಸ್ಥಿತಿ. ಅದಕ್ಕೆ ಹೊಂದಿಕೊಂಡ ಮಗಳು ಚೈತ್ರಾ, ತಾನೂ ರಜೆ ದಿನಗಳಲ್ಲಿ ಕೆಲಸ ಮಾಡಿಕೊಂಡೇ ಇಂಥ ಸಾಧನೆ ಮಾಡಿದ್ದಾಳೆ’ ಎಂದು ಕೊಟ್ರೇಶ್‌ ಹೇಳಿದರು.
ಕಾಲೇಜು ಸಾಧನೆ: ಇಂದೂ ಕಾಲೇಜಿನ ವಿದ್ಯಾರ್ಥಿಗಳು ಸತತ ಮೂರು ವರ್ಷದಿಂದ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುತ್ತಿರುವುದು ವಿಶೇಷ. 2015ರಲ್ಲಿಯೂ ಕಲಾ ವಿಭಾಗದಲ್ಲಿ ನೇತ್ರಾವತಿ ಹಾಗೂ 2016ರಲ್ಲಿ ಅನಿತಾ ಪ್ರಥಮ ಸ್ಥಾನ ಪಡೆದಿದ್ದರು. ಚೈತ್ರಾಳ ವ್ಯಾಸಂಗಕ್ಕೆ ಸಂಪೂರ್ಣ ನೆರವು ನೀಡುವ ನಿರ್ಧಾರವನ್ನು ಕಾಲೇಜು ಪ್ರಕಟಿಸಿದೆ.

ಇದೇ ಕಾಲೇಜಿನ ಕಲಾ ವಿಭಾಗದ ಕವಿತಾ ಹಾದಿಮನಿ 582 ಅಂಕ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.