ADVERTISEMENT

ಕೆಆರ್‌ಎಸ್‌: 108 ಅಡಿ ನೀರು

ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2014, 4:35 IST
Last Updated 25 ಜುಲೈ 2014, 4:35 IST

ಬೆಂಗಳೂರು: ಮಹಾರಾಷ್ಟ್ರದ ಜಲಾ­ಶಯ­ಗಳಿಂದ ಗುರುವಾರ ಅಪಾರ ಪ್ರಮಾಣದಲ್ಲಿ ನೀರು ಬಿಟ್ಟಿರುವು­ದರಿಂದ ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು ಸಾಗರ ತಾಲ್ಲೂಕಿ­ನಲ್ಲಿ ವರದಾ ನದಿ ಪ್ರವಾಹ ಇನ್ನಷ್ಟು ಪ್ರದೇಶಗಳಿಗೆ ವ್ಯಾಪಿಸಿದೆ. ಕರಾವಳಿ, ಕೊಡಗಿನಲ್ಲಿ ಮಳೆ ಕಡಿಮೆಯಾಗಿದೆ.

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಕೃಷ್ಣಾ ನದಿಗೆ ಗುರುವಾರ 1,38,­063 ಕ್ಯೂಸೆಕ್‌ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಮಹಾರಾಷ್ಟ್ರದ ರಾಜಾ­ಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ 1,16,591 ಕ್ಯೂಸೆಕ್ ಹಾಗೂ ಕಾಳಮ್ಮವಾಡಿ ಜಲಾಶಯದಿಂದ ದೂಧ­­ಗಂಗಾ ನದಿಗೆ 21,472 ಕ್ಯೂಸೆಕ್ ನೀರು ಬಿಡಲಾಗಿದೆ. ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಯ ಒಳಹರಿವು ಒಟ್ಟು 1,38,063 ಕ್ಯೂಸೆಕ್‌ಗೆ ತಲುಪಿದೆ.

ತಾಲ್ಲೂಕಿನಲ್ಲಿ ದೂಧಗಂಗಾ ಮತ್ತು ವೇದಗಂಗಾ ನದಿಗಳು ತುಂಬಿ ಹರಿಯು­ತ್ತಿದ್ದು, ನೀರು ಪಕ್ಕದ ಹೊಲ­ಗದ್ದೆಗಳಿಗೆ ನುಗ್ಗತೊಡಗಿದೆ. ತಾಲ್­ಲೂಕಿನ 5 ಸೇತುವೆ­ಗಳು ಇನ್ನೂ ಜಲಾವೃತ ಸ್ಥಿತಿಯಲ್ಲಿವೆ. ಪ್ರವಾಹ ಪರಿಸ್ಥಿತಿ  ಎದುರಿಸಲು ಅಗತ್ಯ ಸಿದ್ಧತೆ­ಗಳನ್ನು ಮಾಡಿಕೊಳ್ಳಲಾಗಿದ್ದು, ಬೋಟ್‌­­ಗಳನ್ನು ಸುಸ್ಥಿತಿಯಲ್ಲಿ ಇಡಲಾ­ಗಿದೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.

ಶುಕ್ರವಾರ (ಜು.25) ಮಹಾ­ರಾಷ್ಟ್ರ­­ದಿಂದ ಸುಮಾರು 2 ಲಕ್ಷ ಕ್ಯೂಸೆಕ್‌ ನೀರು ಬಿಡುಗಡೆಯಾಗುವ ಸಂಭವ­ವಿದ್ದು, ನದಿಗಳ ಒಳಹರಿವು ಇನ್ನೂ ಹೆಚ್ಚುವ ಸಾಧ್ಯತೆ ಇದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಪಟ್ಟಣದ ಹಳೆ ಸೇತುವೆಯ ಮೇಲೆ 6 ಅಡಿ ನೀರು ಹರಿಯುತ್ತಿದ್ದು, ತಾಲ್ಲೂಕಿನ ಮಲಪ್ರಭಾ, ಮಹಾ­ದಾಯಿ, ಪಾಂಡರಿ ನದಿ ತುಂಬಿ ಹರಿಯುತ್ತಿವೆ.

ಬಾಗಲಕೋಟೆ ವರದಿ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನಲ್ಲಿ ಕೃಷ್ಣಾ ನದಿ ಹರಿವು ಸುಮಾರು 1.53 ಲಕ್ಷ ಕ್ಯೂಸೆಕ್‌­ಗಳಷ್ಟಿದ್ದು, ಪ್ರವಾಹ ಪರಿಸ್ಥಿತಿ ಎದುರಿ­ಸಲು ತಾಲ್ಲೂಕು ಆಡಳಿತ ಸಜ್ಜಾಗಿದೆ.

ಹಾವೇರಿ ವರದಿ: ಜಿಲ್ಲೆಯಲ್ಲಿ ತುಂಗಭದ್ರಾ , ವರದಾ ಮತ್ತಿತರ ನದಿ, ಹಳ್ಳಗಳು ಮೈದುಂಬಿ ಹರಿಯುತ್ತಿವೆ. 
ಕಾರವಾರ ವರದಿ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಗುರುವಾರವೂ ಮುಂದುವರಿದಿದೆ.

ಶಿರಸಿ, ಸಿದ್ದಾಪುರ ಹಾಗೂ ಅರೆಬಯ­ಲುಸೀಮೆ ಯಲ್ಲಾ­ಪುರ, ಮುಂಡಗೋಡ, ದಾಂಡೇಲಿಯಲ್ಲಿ ಇಡೀ ದಿನ ಬಿರುಸಿನ ಮಳೆ ಸುರಿಯಿತು. ಕಾಳಿ, ಅಘನಾಶಿನಿ, ಶರಾವತಿ, ಗಂಗಾವಳಿ ನದಿ­ಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದು, ನದಿ ಪಾತ್ರದ ಜನರು ಆತಂಕಗೊಂಡಿದ್ದಾರೆ.

ವರದಾ ನದಿಯ ನೀರಿನ ಮಟ್ಟದಲ್ಲಿ ಹೆಚ್ಚಳವಾಗಿದ್ದು ಶಿರಸಿ ತಾಲ್ಲೂಕಿನಲ್ಲಿ 600 ಎಕರೆಗೂ ಅಧಿಕ ಪ್ರಮಾಣದ ಕೃಷಿ­ಭೂಮಿ ವರದೆಯ ನೀರಿನಲ್ಲಿ ಮುಳುಗಿದೆ. ಅಜ್ಜರಣಿ ಗ್ರಾಮಕ್ಕೆ ತೆರಳುವ ರಸ್ತೆಯ ಸಂಪರ್ಕ ಕಡಿತಗೊಂಡು ಮೂರು ದಿನಗಳಾಗಿದ್ದು, ರಸ್ತೆಯ ಮೇಲೆ ಸುಮಾರು 8 ಅಡಿಗೂ ಹೆಚ್ಚು ನೀರು ಹರಿಯುತ್ತಿದೆ.

ಹೊಸಪೇಟೆ ವರದಿ: ಹೊಸಪೇಟೆ ಬಳಿಯ ತುಂಗಭದ್ರಾ ಜಲಾ­ಶ­ಯಕ್ಕೆ ಒಳ ಹರಿವು ಗುರುವಾರ 75,818 ಕ್ಯೂಸೆಕ್‌ ಇತ್ತು.  ಜಲಾಶಯದಲ್ಲಿ 51.331 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

ಶಿವಮೊಗ್ಗ ವರದಿ: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದು­ವ­ರಿ­ದಿದೆ. ಸಾಗರ ತಾಲ್ಲೂಕಿನಲ್ಲಿ  ವರದಾ ನದಿ ಪ್ರವಾಹ ಇನ್ನಷ್ಟು ಕೃಷಿ ಭೂಮಿಗೆ ವ್ಯಾಪಿಸಿದೆ. ಕನ್ನಹೊಳೆ ಸೇತುವೆ ಮೇಲೆ ನೀರು ಹರಿಯುತ್ತಿದೆ. ಸೈದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೀಸನಗದ್ದೆ ಗ್ರಾಮ ನಡುಗಡ್ಡೆಯಂತಾಗಿದ್ದು ಗ್ರಾಮಸ್ಥರ ಸಂಚಾರಕ್ಕೆ ತೆಪ್ಪದ ವ್ಯವಸ್ಥೆ ಮಾಡಲಾಗಿದೆ.

ಕೃಷಿಕ ಸಾವು: ಜಂಬಾನೆ ಗ್ರಾಮದಲ್ಲಿ ಜಲಾವೃತ­ಗೊಂಡಿದ್ದ ಗದ್ದೆಯಲ್ಲಿ ಟಿಲ್ಲರ್‌ನಲ್ಲಿ ಉಳುವೆ ಮಾಡುತ್ತಿದ್ದ ತಿಮ್ಮಪ್ಪ (21) ಎಂಬುವವರು  ಟಿಲ್ಲರ್‌ ಸಮೇತ ಬಾವಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು 53,478 ಕ್ಯೂಸೆಕ್‌ ಇದ್ದು, ನೀರಿನ ಮಟ್ಟ 1781.20 ಅಡಿಗಳಿಗೆ ಹೆಚ್ಚಿದೆ. ಭದ್ರಾ ಜಲಾಶಯದ ನೀರಿನ ಮಟ್ಟ 165.10 ಅಡಿ ತಲು­ಪಿದ್ದು, ಒಳಹರಿವು 29,800 ಕ್ಯೂಸೆಕ್‌ ಇದೆ. ಭದ್ರಾ ಜಲಾಶಯ ಭರ್ತಿಯಾಗಲು 21 ಹಾಗೂ ಲಿಂಗನಮಕ್ಕಿ ಭರ್ತಿಗೆ 38 ಅಡಿ ನೀರಿನ ಅಗತ್ಯವಿದೆ.

ತುಂಗಾ ಜಲಾಶಯದಲ್ಲಿ ನೀರು ಗರಿಷ್ಠ ಮಟ್ಟ 587.45 ಅಡಿ ತಲುಪಿದೆ. ಜಲಾಶಯಕ್ಕೆ 48,900 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಷ್ಟೂ ನೀರನ್ನು 12 ಗೇಟ್‌ಗಳ ಮೂಲಕ ನದಿಗೆ ಬಿಡಲಾಗುತ್ತಿದೆ.

ಮಂಡ್ಯ ವರದಿ: ಜಿಲ್ಲೆಯ ಕೆಆರ್‌ಎಸ್‌ ಅಣೆಕಟ್ಟೆಗೆ ಒಳ­ಹರಿವು ಗುರುವಾರ 30,129 ಕ್ಯೂಸೆಕ್‌ಗೆ ಇಳಿದಿದೆ. ಅಣೆ­ಕಟ್ಟೆಯ ಗರಿಷ್ಠ ಮಟ್ಟ 124.80 ಅಡಿ ಇದ್ದು, ಗುರುವಾರ 108.50 ಅಡಿಗೆ ತಲುಪಿದೆ. ಕಳೆದ ವರ್ಷ ಇದೇ ದಿನ ಅಣೆ­ಕಟ್ಟೆ ಭರ್ತಿಯಾಗಿತ್ತು.

ನಂಜನಗೂಡು ವರದಿ: ಕೇರಳದ ವೈನಾಡಿನಲ್ಲಿ ಬಾರಿ ಮಳೆ­ಯಾ­ಗು­ತ್ತಿದ್ದು, ಕಬಿನಿ ಜಲಾಶಯ­ದಿಂದ 40 ಸಾವಿರ ಕ್ಯೂಸೆಕ್‌ ನೀರನ್ನು ಬಿಟ್ಟಿದ್ದರಿಂದ ಪಟ್ಟಣದ ತಗ್ಗು ಪ್ರದೇಶ­ಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಮಡಿಕೇರಿ ವರದಿ: ಜಿಲ್ಲೆಯಾದ್ಯಂತ ಮಳೆ ಗುರುವಾರ ಇಳಿಮುಖವಾಗಿದೆ.

ಚಿಕ್ಕಮಗಳೂರು ವರದಿ: ಜಿಲ್ಲೆಯ ಶೃಂಗೇರಿ, ಜಯಪುರ ಸುತ್ತ­ಮುತ್ತ ಭಾರಿ ಮಳೆ ಸುರಿಯುತ್ತಿದೆ. ಕೊಗ್ರೆ ಮೂಲಕ ತೆರ­ಳುವ ಜಯಪುರ –ಹೊರನಾಡು ರಸ್ತೆಯಲ್ಲಿ ಹೈಟೆನ್ಷನ್‌ ವಿದ್ಯುತ್‌ ಕಂಬ ಮುರಿದು ಬಿದ್ದುದರಿಂದ ರಸ್ತೆ ಸಂಪರ್ಕ ಕಡಿತ­ಗೊಂಡಿದೆ. ಇದರಿಂದಾಗಿ  ಹೊರನಾಡಿಗೆ ತೆರಳಬೇಕಾದ ಪ್ರವಾ­ಸಿ­ಗರು ಬಸರೀಕಟ್ಟೆ, ಕಳಸ ಮೂಲಕ ಸುತ್ತಿಬಳಸಿ ತೆರಳಬೇಕಾಯಿತು.

ಶಾಲೆಗಳಿಗೆ ರಜೆ: ಕೊಪ್ಪ, ಶೃಂಗೇರಿ ಹಾಗೂ ನರಸಿಂಹರಾಜ­ಪುರ  ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ  ಗುರು­ವಾ­ರವೂ ರಜೆ ಘೋಷಿಸಲಾಗಿತ್ತು. ಹೊರನಾಡು, ಮೆಣಸಿನ­ಹಾಡ್ಯ, ಕೊಗ್ರೆ ಗ್ರಾಮದ ಬೆಕನ್ ಕುಡಿಗೆ ಗುಡ್ಡ ಕುಸಿದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಶೃಂಗೇರಿ ಪಟ್ಟಣ ಸೇರಿದಂತೆ ಹಲವೆಡೆ ವಿದ್ಯುತ್‌ ಪೂರೈಕೆ ವ್ಯತ್ಯಯಗೊಂಡಿದೆ.

ಮಂಗಳೂರು ವರದಿ: ಕರಾವಳಿ ಭಾಗದಲ್ಲಿ ಮಳೆ ಮತ್ತಷ್ಟು ಕ್ಷೀಣಿ­ಸಿದೆ. ಆದರೆ ದಟ್ಟ ಮೋಡ, ಬಲವಾದ ಗಾಳಿಯೊಂದಿಗೆ ಆಗಾಗ ಸುರಿಯುತ್ತಿರುವ ಮಳೆ­ಯಿಂದಾಗಿ ಕಡು ಮಳೆಗಾ­ಲದ ಸನ್ನಿವೇಶ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT