ADVERTISEMENT

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ತಪ್ಪು ಉತ್ತರ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2015, 19:30 IST
Last Updated 4 ಅಕ್ಟೋಬರ್ 2015, 19:30 IST

ಬಳ್ಳಾರಿ: ಕರ್ನಾಟಕ ಲೋಕ ಸೇವಾ ಆಯೋಗವು ಪ್ರಥಮ ದರ್ಜೆ ಸಹಾಯಕರ ಹುದ್ದೆ ಭರ್ತಿಗಾಗಿ ನಗರದಲ್ಲಿ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಕನ್ನಡ ವಿಷಯದ ಬಹು ಆಯ್ಕೆ ಪ್ರಶ್ನೆಪತ್ರಿಕೆಯ ಎರಡು ಪ್ರಶ್ನೆಗಳಿಗೆ ನೀಡಲಾಗಿದ್ದ ಉತ್ತರ ತಪ್ಪಾಗಿದೆ ಎಂದು ಅಭ್ಯರ್ಥಿಗಳು ದೂರಿದ್ದಾರೆ.

ಲೇಖಕ ಮತ್ತು ಕೃತಿಗೆ ಸಂಬಂಧಿಸಿದ ವಾಕ್ಯದಲ್ಲಿ ಗೆರೆ ಎಳೆದ ಭಾಗ ತಪ್ಪಾಗಿದ್ದು, ಆಯೋಗ ನೀಡಿದ್ದ ನಾಲ್ಕು ಆಯ್ಕೆಗಳಲ್ಲಿ ಒಂದನ್ನು ಅಭ್ಯರ್ಥಿಗಳು ಆಯ್ಕೆ ಮಾಡಬೇಕಾಗಿತ್ತು.

ಬಿ ಶ್ರೇಣಿ ಪ್ರಶ್ನೆಪತ್ರಿಕೆಯ 49ನೇ ಪ್ರಶ್ನೆ: ಉರಿಯ ನಾಲಿಗೆ– ಇದು ಹಾ.ಮಾ.ನಾ ಅವರ ಕೃತಿ ಎಂಬ ವಾಕ್ಯದಲ್ಲಿ ಉರಿಯ ನಾಲಿಗೆ ಪದಗಳ ಕೆಳಗೆ ಗೆರೆ ಎಳೆಯಲಾಗಿತ್ತು. ಉರಿಯ ನಾಲಿಗೆ ಹಾಮಾನಾ ಕೃತಿ ಅಲ್ಲ. ಹೀಗಾಗಿ ಹಾಮಾನಾ ಕೃತಿಯನ್ನು ಗುರುತಿಸಲು ಆಯೋಗವು ನಾಲ್ಕು ಕೃತಿಗಳ ಪಟ್ಟಿಯನ್ನು ನೀಡಬೇಕಾಗಿತ್ತು. ಆದರೆ ಅದರ ಬದಲು ಪಿ.ಲಂಕೇಶ್‌, ಯು.ಆರ್‌.ಅನಂತಮೂರ್ತಿ, ರಾಮಚಂದ್ರಶರ್ಮ ಮತ್ತು ಕೀರ್ತಿನಾಥ ಕುರ್ತುಕೋಟಿ ಅವರ ಹೆಸರನ್ನು ನೀಡಿದೆ ಎಂದು ಅಭ್ಯರ್ಥಿಗಳು ದೂರಿದ್ದಾರೆ,

ಉರಿಯ ನಾಲಿಗೆ ಬದಲಿಗೆ ಹಾ.ಮಾ.ನಾ ಹೆಸರಿನ ಕೆಳಗೆ ಗೆರೆ ಎಳೆದಿದ್ದರೆ ಕೀರ್ತಿನಾಥ ಕುರ್ತುಕೋಟಿಯವರ ಹೆಸರನ್ನು ಆಯ್ಕೆ ಮಾಡಬಹುದಿತ್ತು. ಆದರೆ ಉರಿಯ ನಾಲಿಗೆ ಪದಗಳ ಕೆಳಗೆ ಗೆರೆ ಎಳೆದಿರುವದರಿಂದ, ಹಾ.ಮಾ.ನಾ ಕೃತಿ ಯಾವುದು? ಎಂಬುದೇ ಪ್ರಶ್ನೆಯಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.

50ನೇ ಪ್ರಶ್ನೆ ಹಗಲು ಗನಸುಗಳು ಕೃತಿಯ ಕರ್ತೃ ಚಂದ್ರಶೇಖರ ಕಂಬಾರ ಎಂಬ ಸಾಲಿದೆ. ಹಾಗಾದರೆ, ಚಂದ್ರಶೇಖರ ಕಂಬಾರರ ಕೃತಿ ಯಾವುದು ಎಂದು ಹುಡುಕಿ ಹೊರಟರೆ, ಆಯೋಗ ನೀಡಿರುವ ಪಟ್ಟಿಯಲ್ಲಿ ಕೃತಿಗಳ ಪಟ್ಟಿಯ ಬದಲಿಗೆ ಜಿ.ಎಸ್‌. ಶಿವರುದ್ರಪ್ಪ, ಕೀರ್ತಿನಾಥ ಕುರ್ತುಕೋಟಿ, ಎ.ಎನ್‌. ಮೂರ್ತಿರಾವ್ ಮತ್ತು ಗೋಪಾಲಕೃಷ್ಣ ಅಡಿಗರ ಹೆಸರಿದೆ ಎಂದು ದೂರಿದ್ದಾರೆ,
ತಪ್ಪು ಆಯ್ಕೆಗಳನ್ನು ನೀಡಲಾಗಿರುವ ಈ ಎರಡು ಪ್ರಶ್ನೆಗಳಿಗೆ ಆಯೋಗವು ಅಂಕ ಹೇಗೆ ನಿರ್ಧರಿಸುತ್ತದೆ ಎಂದು ಅಭ್ಯರ್ಥಿಗಳು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.