ADVERTISEMENT

ಕೇಂದ್ರೀಯ ವಿವಿಗೆ ಅಂಬೇಡ್ಕರ್‌ ಇಲ್ಲವೆ ಬಸವೇಶ್ವರರ ನಾಮಕರಣಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2016, 19:30 IST
Last Updated 6 ನವೆಂಬರ್ 2016, 19:30 IST
ಬಸವರಾಜ ರಾಯರಡ್ಡಿ
ಬಸವರಾಜ ರಾಯರಡ್ಡಿ   

ಕಲಬುರ್ಗಿ: ‘ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಡಾ.ಬಿ.ಆರ್‌. ಅಂಬೇಡ್ಕರ್‌ ಅಥವಾ ಬಸವೇಶ್ವರ ಅವರ ಹೆಸರನ್ನು ನಾಮಕರಣ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

‘ಡಾ.ಅಂಬೇಡ್ಕರ್‌ ಹಾಗೂ ಬಸವೇಶ್ವರ ಪೈಕಿ ಯಾರ ಹೆಸರನ್ನಾದರೂ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಲಿ.  ನಂತರ, ಅವರಲ್ಲಿ ಇನ್ನೊಬ್ಬ ಮಹನಿಯರ ಹೆಸರನ್ನು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಇಡಲಾಗುವುದು’ ಎಂದು ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಭ್ಯ ಉಡುಗೆ ಧರಿಸಿ ತರಗತಿಗೆ ಹಾಜರಾಗಬಹುದಾಗಿದೆ. ಇದರಲ್ಲಿ ವಿವಾದವೇನೂ ಇಲ್ಲ. ಬುರ್ಖಾ ಅಥವಾ ಕೇಸರಿ ಧರಿಸಿಕೊಂಡು ಬರುವುದು ವಿವಾದವಲ್ಲ. ಉಡುಗೆ ಕಾರಣದಿಂದ ತೊಂದರೆ ಅನುಭವಿಸಿದವರು ದೂರು ಕೊಟ್ಟರೆ, ದೂರು ಪಡೆದು ಸಂಬಂಧಿಸಿದವರ ಮೇಲೆ ಕ್ರಮ ಜರುಗಿಸಬೇಕಾಗುತ್ತದೆ.ಕೇಸರಿ ಬಣ್ಣ ಯಾರ ಸ್ವತ್ತು ಅಲ್ಲ. ರಾಷ್ಟ್ರಧ್ವಜದಲ್ಲೂ ಕೇಸರಿ ಇದ್ದು, ಅದು ನಮ್ಮ ಸಂಸ್ಕೃತಿಯ ಸಂಕೇತ’ ಎಂದು ಹೇಳಿದರು.

‘ಯಾವ ರಾಜಕೀಯ ಪಕ್ಷಗಳೂ ಕಾಲೇಜು ಕ್ಯಾಂಪಸ್‌ಗಳನ್ನು ರಾಜಕೀಯ ದುರುದ್ದೇಶಕ್ಕಾಗಿ ಬಳಸಿಕೊಳ್ಳಬಾರದು. ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಬಾರದು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.