ADVERTISEMENT

ಕೊಡಗಿನಲ್ಲಿ ಕಲ್ಲೆಸೆತ: ಉಳಿದೆಡೆ ಶಾಂತಿಯುತ

ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಟಿಪ್ಪು ಜಯಂತಿ ಆಚರಣೆ: ಕೆಲವೆಡೆ ಬಿಜೆಪಿ ಶಾಸಕರ ಬೆಂಬಲ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 19:30 IST
Last Updated 10 ನವೆಂಬರ್ 2017, 19:30 IST
ಮಡಿಕೇರಿಯಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಮುಂದಾದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆದರು
ಮಡಿಕೇರಿಯಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಮುಂದಾದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆದರು   

ಬೆಂಗಳೂರು: ಕೊಡಗಿನಲ್ಲಿ ಬಸ್ಸಿಗೆ ತೂರಿದ ಘಟನೆ ಬಿಟ್ಟರೆ ರಾಜ್ಯದಾದ್ಯಂತ ಟಿಪ್ಪು ಜಯಂತಿಯನ್ನು ಶಾಂತಿಯುತವಾಗಿ ಆಚರಿಸಲಾಗಿದೆ.

ಬಹುತೇಕ ಜಿಲ್ಲೆಗಳಲ್ಲಿ ಬಿಜೆಪಿ ಅಧ್ಯಕ್ಷರು, ಸಂಸದರು, ಶಾಸಕರು ಟಿಪ್ಪು ಜಯಂತಿ ವಿರೋಧಿಸಿ ಪ್ರತಿಭಟನೆ ನಡೆಸಿದರು. ಆದರೆ, ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯನಗರ ಬಿಜೆಪಿ ಶಾಸಕ ಆನಂದ ಸಿಂಗ್‌ ಪಾಲ್ಗೊಂಡಿದ್ದರು. ಬೆಂಗಳೂರಿನ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ ರೆಡ್ಡಿ, ಜಯಂತಿಗೆ ಶುಭಾಶಯ ಕೋರಿ ಭಿತ್ತಿಪತ್ರ ಹಾಕಿಸಿದ್ದರು ಎನ್ನಲಾಗಿದೆ. ‘ಅದನ್ನು ನಾನು ಹಾಕಿಸಿಲ್ಲ’ ಎಂದು ರೆಡ್ಡಿ ಸ್ಪಷ್ಟನೆಯನ್ನೂ ನೀಡಿದರು.

ಸೂಕ್ಷ್ಮ ಪ್ರದೇಶ ಎಂದು ಗೃಹ ಇಲಾಖೆ ಗುರುತಿಸಿದ್ದ ಮಂಗಳೂರು, ಚಿತ್ರದುರ್ಗದಲ್ಲಿ ಅಹಿತಕರ ಘಟನೆ ವರದಿಯಾಗಿಲ್ಲ. ಜಯಂತಿ ಆಚರಣೆ ಜಾಗ ಕುರಿತು ಕಾಂಗ್ರೆಸ್‌ ಮುಖಂಡರೇ ಆಕ್ಷೇಪ ವ್ಯಕ್ತಪಡಿಸಿದ್ದರಿಂದಾಗಿ ಕೋಲಾರದಲ್ಲಿ ಗೊಂದಲ ಉಂಟಾಗಿತ್ತು.

ADVERTISEMENT

ಬಸ್‌ಗೆ ಕಲ್ಲು, ವ್ಯಕ್ತಿಗೆ ಗಾಯ: ಟಿಪ್ಪು ಜಯಂತಿ ವಿರೋಧಿ ಸಮಿತಿ ನೀಡಿದ್ದ ಕೊಡಗು ಬಂದ್‌ ಸಂಪೂರ್ಣ ಯಶಸ್ವಿ ಆಗಿದೆ. ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಿದವು. ಖಾಸಗಿ ಬಸ್‌, ಆಟೊ ಸಂಚಾರ ಸ್ಥಗಿತಗೊಂಡಿತ್ತು. ಜಿಲ್ಲೆಯಾದ್ಯಂತ ಅಂಗಡಿ– ಮುಂಗಟ್ಟುಗಳು ಬಂದ್‌ ಆಗಿದ್ದವು. ಬಹುತೇಕ ಖಾಸಗಿ ಶಾಲಾ– ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ತಾಲ್ಲೂಕಿನ ಕಟ್ಟೆಕಲ್ಲು ಗ್ರಾಮದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಮೇಲೆ ಕಲ್ಲು ತೂರಾಟ ನಡೆದಿದೆ. ಎರಡು ಬೈಕ್‌ನಲ್ಲಿ ಬಂದಿದ್ದ ನಾಲ್ವರು ಬಸ್‌ನ ಗಾಜುಗಳನ್ನು ಪುಡಿಗೊಳಿಸಿದ್ದಾರೆ. ಚಾಲಕ ಹಾಗೂ ನಿರ್ವಾಹಕರನ್ನು ಬಿಟ್ಟರೆ ಬಸ್‌ನಲ್ಲಿ ಪ್ರಯಾಣಿಕರು ಇರಲಿಲ್ಲ. ಕಡಗದಾಳು ಸಮೀಪ ರಸ್ತೆಗೆ ಮರವೊಂದನ್ನು ಕಡಿದು ಹಾಕಿದ್ದರಿಂದ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.

ಸೋಮವಾರಪೇಟೆಯಲ್ಲಿ ಮುತ್ತಿಗೆ ವೇಳೆ ತಳ್ಳಾಟ ನಡೆದು ಅಭಿಮನ್ಯು ಕುಮಾರ್‌ ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಿಗಿ ಭದ್ರತೆಯಲ್ಲಿ ಆಚರಣೆ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ  ಬಿಗಿ ಪೊಲೀಸ್‌ ಕಣ್ಗಾವಲಿನಲ್ಲಿ ಜಯಂತಿ ಆಚರಿಸಲಾಯಿತು.

ಚಿತ್ರದುರ್ಗ ನಗರದಲ್ಲಿ  ಜಯಂತಿ ವಿರೋಧಿಸಿದ ಬಿಜೆಪಿ ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರು ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಮುಂದಾದರು. ಪೊಲೀಸರ ಸೂಚನೆ ಮೇರೆಗೆ ಕಪ್ಪುಬಟ್ಟೆ ತೆಗೆದು ಮನವಿ ಸಲ್ಲಿಸಿದರು.

ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ಹುಬ್ಬಳ್ಳಿ, ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅವರನ್ನು ವಶಕ್ಕೆ ಪಡೆದ ಪೊಲೀಸರು ಬಳಿಕ ಬಿಡುಗಡೆ ಮಾಡಿದರು.

ಮಾತಿನ ಚಕಮಕಿ:  ಟಿಪ್ಪು ಜಯಂತಿ ನಿಮಿತ್ತ ಶ್ರೀರಂಗ ಪಟ್ಟಣದ ಗುಂಬಸ್‌ಗೆ ಮೈಸೂರಿನಿಂದ ಬರುತ್ತಿದ್ದ ಯುವಕರನ್ನು ತಪಾಸಣೆ ಮಾಡಲು ಪೊಲೀಸರು ಮುಂದಾದರು. ಯುವಕರು ಪೊಲೀಸರ ಜತೆ ಮಾತಿನ ಚಕಮಕಿ, ತಳ್ಳಾಟ ನಡೆಸಿದರು.

ಘೋಷಣೆ ಕೂಗದಂತೆ, ಬಾವುಟ ಬೀಸದಂತೆ ಮನವಿ ಮಾಡಿದ ಪೊಲೀಸರ ಮಾತಿಗೆ ಕಿವಿಗೊಡದ ಯುವಕರು, ಬ್ಯಾರಿಕೇಡ್‌ಗಳನ್ನು ತಳ್ಳಿಕೊಂಡೇ ಗುಂಬಸ್‌ ಕಡೆಗೆ ಬೈಕ್‌ಗಳಲ್ಲಿ ಧಾವಿಸಲು ಮುಂದಾದರು. ಎರಡು ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡರು.

ಕಾರ್ಯಕ್ರಮ ವಿಳಂಬ: ಕೋಲಾರದಲ್ಲಿ ಜಯಂತಿ ಆಚರಣೆಯ ಸ್ಥಳದ ವಿಷಯದಲ್ಲಿ ಗೊಂದಲ ಉಂಟಾಗಿದ್ದರಿಂದಾಗಿ ಬೆಳಗ್ಗೆ 10.30ಕ್ಕೆ ಆರಂಭವಾಗಬೇಕಾಗಿದ್ದ ಕಾರ್ಯಕ್ರಮ ಸಂಜೆ 4ಗಂಟೆಗೆ ನಡೆಯಿತು.

ಜಿಲ್ಲಾಡಳಿತವು ನಗರದ ಆಲ್‌ ಅಮೀನ್‌ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಜಯಂತಿ ಆಚರಿಸಲು ಸಿದ್ಧತೆ ಮಾಡಿಕೊಂಡಿತ್ತು. ಅಲ್ಲದೇ, ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲೂ ಅದೇ ಸ್ಥಳದ ಹೆಸರನ್ನು ಮುದ್ರಿಸಲಾಗಿತ್ತು.

ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಸೀರ್‌ ಅಹಮ್ಮದ್‌, ಮಾಜಿ ಸಚಿವ ನಿಸಾರ್‌ ಅಹಮ್ಮದ್‌ ಹಾಗೂ ಮುಸ್ಲಿಂ ಮುಖಂಡರು ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಯಂತಿ ಆಚರಿಸುವಂತೆ ಒತ್ತಾಯಿಸಿದರು. ಜಿಲ್ಲಾಡಳಿತ ಇದಕ್ಕೆ ಒಪ್ಪಲಿಲ್ಲ. ಮುಖಂಡರು ಪಟ್ಟು ಸಡಿಲಿಸಲಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌, ಸಂಸದ ಕೆ.ಎಚ್‌.ಮುನಿಯಪ್ಪ ಮುಖಂಡರೊಂದಿಗೆ ಚರ್ಚಿಸಿ ಕ್ಲಾಕ್‌ ಟವರ್‌ ಬಳಿ ಜಯಂತಿ ಆಚರಿಸಲು ನಿರ್ಧಾರ ಕೈಗೊಂಡರು.

ಮೆರವಣಿಗೆ ನಡೆಸುವಂತಿಲ್ಲ, ಪ್ಲೆಕ್ಸ್–ಬ್ಯಾನರ್‌ ಹಾಕಬಾರದು ಎಂದು ಪೊಲೀಸ್
ಇಲಾಖೆ ವಿಧಿಸಿದ್ದ ಷರತ್ತುಗಳನ್ನು ವಿರೋಧಿಸಿ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಕ್ಷೇತ್ರದ ಜೆಡಿಎಸ್‌ ಶಾಸಕ ಕೃಷ್ಣಾರೆಡ್ಡಿ ತಾಲ್ಲೂಕಿನಲ್ಲಿ ನಡೆದ ಕಾರ್ಯಕ್ರಮ ಬಹಿಷ್ಕರಿಸಿದರು.

*
ಪ್ರಮೋದ್‌ ಮಧ್ವರಾಜ್ ಗೈರು
ಉಡುಪಿಯಲ್ಲಿ ನಡೆದ ಸರ್ಕರಿ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಪಾಲ್ಗೊಂಡಿರಲಿಲ್ಲ. ‘ಪೂರ್ವ ನಿಗದಿತ ಕಾರ್ಯಕ್ರಮ ಇದ್ದ ಕಾರಣಕ್ಕೆ ಪಾಲ್ಗೊಳ್ಳಲಿಲ್ಲ. ಎಲ್ಲ ಜಯಂತಿಗಳಿಗೂ ಸಚಿವರು ಪಾಲ್ಗೊಳ್ಳಬೇಕು ಎಂಬ ಕಡ್ಡಾಯವಿಲ್ಲ’ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

*
ಜಯಂತಿಗೆ ವಿರೋಧ ಬೇಡ: ಆನಂದ ಸಿಂಗ್‌
ಹೊಸಪೇಟೆಯಲ್ಲಿ ಟಿಪ್ಪು ಜಯಂತಿ ಉದ್ಘಾಟಿಸಿದ ಬಿಜೆಪಿ ಶಾಸಕ ಆನಂದ ಸಿಂಗ್, ‘ಅದನ್ನು ವಿರೋಧಿಸುವುದು ಸರಿಯಲ್ಲ’ ಎಂದು ಪ್ರತಿಪಾದಿಸಿದರು.

‘ಇತಿಹಾಸದಲ್ಲಿ ಅನೇಕ ಘಟನೆಗಳು ನಡೆದಿರುತ್ತವೆ. ಅವುಗಳಲ್ಲಿ ಯಾವುದೋ ಒಂದನ್ನು ಆರಿಸಿಕೊಂಡು ವಿವಾದ ಮಾಡುವುದು ಸರಿಯಲ್ಲ. ಟಿಪ್ಪು ಜಯಂತಿಗೆ ಸಂಬಂಧಿಸಿ ಯಾವ ಪಕ್ಷ ಏನೇ ತೀರ್ಮಾನ ತೆಗೆದುಕೊಳ್ಳಲಿ. ನಾನು  ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳುವೆ’ ಎಂದು ಅವರು ಹೇಳಿದರು.

‘ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಡಿ ಎಂದು ಪಕ್ಷದಿಂದ ಯಾವುದೇ ಸೂಚನೆ ಬಂದಿರಲಿಲ್ಲ. ಈ ಹಿಂದೆಯೂ ಭಾಗವಹಿಸಿದ್ದೆ. ಈಗ ಕೂಡ ಭಾಗವಹಿಸಿದ್ದೇನೆ’ ಎಂದು ಅವರು  ‘ಪ್ರಜಾವಾಣಿ’ಗೆ ತಿಳಿಸಿದರು.

ನೋಟಿಸ್‌: ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡ ಆನಂದ ಸಿಂಗ್ ಅವರಿಗೆ ಬಿಜೆಪಿ ರಾಜ್ಯ ಘಟಕದ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದೆ. ಈ ಬಗ್ಗೆ ಸೂಕ್ತ ವಿವರಣೆ ನೀಡುವಂತೆ ಸಮಿತಿ ಅಧ್ಯಕ್ಷ ಶಂಕರಪ್ಪ ನೀಡಿದ ನೋಟಿಸ್‌ ನಲ್ಲಿ ತಿಳಿಸಿದ್ದಾರೆ.
*
ಎಲ್ಲೆಡೆ ನಿಷೇಧಾಜ್ಞೆ ವಿಧಿಸಿ ನಾಲ್ಕು ಗೋಡೆಗಳ ಮಧ್ಯೆ ಟಿಪ್ಪು ಜಯಂತಿ ಆಚರಿಸಿದ ರಾಜ್ಯ ಸರ್ಕಾರದ ಕ್ರಮ ನಾಚಿಕೆಗೇಡು
–ಎಚ್.ಡಿ. ಕುಮಾರಸ್ವಾಮಿ,
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.