ADVERTISEMENT

ಕೊನೆಗೂ ಸಿಕ್ಕಿಬಿದ್ದ ಅಶ್ವಿನ್‌ ರಾವ್‌

​ಪ್ರಜಾವಾಣಿ ವಾರ್ತೆ
Published 27 ಜುಲೈ 2015, 19:30 IST
Last Updated 27 ಜುಲೈ 2015, 19:30 IST

ಬೆಂಗಳೂರು: ಕಾರ್ಯನಿರ್ವಾಹಕ ಎಂಜಿನಿಯರ್‌ ಕೃಷ್ಣಮೂರ್ತಿ ಅವರಿಂದ ₨ 1 ಕೋಟಿ ಲಂಚ ಕೇಳಿದ ಪ್ರಕರಣದ ಪ್ರಮುಖ ಆರೋಪಿ, ಲೋಕಾಯುಕ್ತ ವೈ. ಭಾಸ್ಕರ ರಾವ್ ಪುತ್ರ ಅಶ್ವಿನ್ ರಾವ್ ಅವರನ್ನು ವಿಶೇಷ ತನಿಖಾ ತಂಡ ಸೋಮವಾರ ಹೈದರಾಬಾದ್‌ನಲ್ಲಿ ವಶಕ್ಕೆ ಪಡೆದಿದೆ.

ಅವರನ್ನು ಬೆಂಗಳೂರಿಗೆ ಕರೆತಂದು ಮಂಗಳವಾರ ಲೋಕಾಯುಕ್ತ ವಿಶೇಷ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಲೋಕಾಯುಕ್ತ ಜಂಟಿ ಆಯುಕ್ತ (ಸಾರ್ವಜನಿಕ ಸಂಪರ್ಕ) ಸೈಯದ್‌ ರಿಯಾಜ್‌ ಸೇರಿದಂತೆ ಈ ಪ್ರಕರಣದಲ್ಲಿ ಇದುವರೆಗೆ ನಾಲ್ಕು ಜನರನ್ನು ಬಂಧಿಸಲಾಗಿದೆ.

ಹೈದಾರಾಬಾದ್‌ನ ಫ್ಲ್ಯಾಟ್‌ ಒಂದರಲ್ಲಿ ಇದ್ದ ಅಶ್ವಿನ್‌ ಅವರನ್ನು ಎಸ್‌ಐಟಿ ಅಧಿಕಾರಿಗಳು ಸೋಮವಾರ ಬೆಳಿಗ್ಗೆ ವಶಕ್ಕೆ ಪಡೆದರು. ತನಿಖೆಗೆ ಸಹಕಾರ ನೀಡುವುದಾಗಿ ಅಶ್ವಿನ್‌ ಹೇಳಿದ್ದಾರೆ ಎನ್ನಲಾಗಿದೆ. ಈ ನಡುವೆ, ಅಶ್ವಿನ್‌ ಪರ ವಕೀಲರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

ಬಂಧನ; ವಶ ಗೊಂದಲ
ಅಶ್ವಿನ್‌ ಅವರನ್ನು ವಶಕ್ಕೆ ಪಡೆಯಲಾಗಿದೆಯೇ ಅಥವಾ ಬಂಧಿಸಲಾಗಿದೆಯೇ ಎಂಬುದು ಗೊಂದಲಮಯವಾಗಿಯೇ ಇದೆ.  ‘ಅವರು ನಮ್ಮ ವಶದಲ್ಲಿದ್ದಾರೆ’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ಹೇಳಿದರು.

‘ಅಶ್ವಿನ್‌ ಅವರನ್ನು ಬಂಧಿಸಲಾಗಿದೆ. ಇದು ನಮಗೆ ದೊರೆತಿರುವ ಮಾಹಿತಿ. ಅವರನ್ನು ನ್ಯಾಯಾಲಯಕ್ಕೆ ಆದಷ್ಟು ಬೇಗ ಹಾಜರುಪಡಿಸಲಾಗುವುದು’ ಎಂದು ಎಸ್‌ಐಟಿ ವಕೀಲರು ಸುದ್ದಿಗಾರರಿಗೆ ತಿಳಿಸಿದರು.

ಏನು ವ್ಯತ್ಯಾಸ: ಯಾವುದೇ ವ್ಯಕ್ತಿಯನ್ನು ಪೊಲೀಸರು ‘ಬಂಧಿಸಿದರೆ’ 24 ಗಂಟೆಗಳೊಳಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲೇಬೇಕು.
‘ವಶಕ್ಕೆ’ ತೆಗೆದುಕೊಂಡರೆ, ಗರಿಷ್ಠ 24 ಗಂಟೆಗಳವರೆಗೆ ಅವರನ್ನು ವಿಚಾರಣೆಗೆ ಒಳಪಡಿಸಬಹುದು. ಅಗತ್ಯ ಇಲ್ಲ ಎನಿಸಿದರೆ ಬಿಟ್ಟು ಕಳಿಸಬಹುದು. ಕೋರ್ಟ್‌ಗೆ ಹಾಜರುಪಡಿಸಬೇಕಿಲ್ಲ. ಆದರೆ ಯಾವುದೇ ಕಾರಣಕ್ಕೂ 24 ಗಂಟೆಗಳಿಗಿಂತ ಹೆಚ್ಚಿನ ಅವಧಿಗೆ ಪೊಲೀಸರು ತಮ್ಮ ಬಳಿ ಇರಿಸಿಕೊಳ್ಳುವಂತಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.