ADVERTISEMENT

ಕೌರವ ಸ್ವರೂಪಿ ಸರ್ಕಾರಗಳ ವಿರುದ್ಧ ಸತ್ಯ ಸಂಗ್ರಾಮ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST
ಪಾಂಡವಪುರ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ರೈತರ ರಾಷ್ಟ್ರಮಟ್ಟದ ಸಮಾವೇಶದಲ್ಲಿ ಸ್ವರಾಜ್‌ ಇಂಡಿಯಾ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಯೋಗೇಂದ್ರ ಯಾದವ್‌ ಮಾತನಾಡಿದರು
ಪಾಂಡವಪುರ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ರೈತರ ರಾಷ್ಟ್ರಮಟ್ಟದ ಸಮಾವೇಶದಲ್ಲಿ ಸ್ವರಾಜ್‌ ಇಂಡಿಯಾ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಯೋಗೇಂದ್ರ ಯಾದವ್‌ ಮಾತನಾಡಿದರು   

ಪಾಂಡವಪುರ: ‘ಕೌರವ ಸ್ವರೂಪಿ ಸರ್ಕಾರಗಳ ವಿರುದ್ಧ ಸತ್ಯದ ಸಂಗ್ರಾಮ ನಡೆಸಿ ರೈತರು ತಮ್ಮ ಹಕ್ಕು ಪಡೆಯಬೇಕು’ ಎಂದು ಸ್ವರಾಜ್‌ ಇಂಡಿಯಾ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಯೋಗೇಂದ್ರ ಯಾದವ್‌ ಇಲ್ಲಿ ಶುಕ್ರವಾರ ಹೇಳಿದರು.

ಅಖಿಲ ಭಾರತ ರೈತ ಹೋರಾಟ ಸಮನ್ವಯ ಸಮಿತಿಯ ‘ರೈತ ಮುಕ್ತಿ ಜಾಥಾ’ ಅಂಗವಾಗಿ ಏರ್ಪಡಿಸಿದ್ದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

‘ಕೌರವರು ಹಾಗೂ ಪಾಂಡವರ ನಡುವೆ ಹೊಸ ಯುಗದ ಯುದ್ಧ ಮತ್ತೆ ನಡೆಯಬೇಕು. ರೈತರು ಪಾಂಡವರಾದರೆ ಸರ್ಕಾರಗಳು ಕೌರವರು. ಸರ್ಕಾರದ ಬಳಿ ಹಣ, ಮಾಧ್ಯಗಳಿದ್ದರೆ ಅನ್ನದಾತನ ಬಳಿ ಸತ್ಯವಿದೆ. ರೈತರು ಸತ್ಯದ ಸಂಗ್ರಾಮ ನಡೆಸಲು ಸಜ್ಜಾಗಬೇಕು’ ಎಂದರು.

ADVERTISEMENT

‘ಈಗ ಅನ್ನದಾತ ಎಲ್ಲವನ್ನೂ ಕಳೆದುಕೊಂಡಿದ್ದಾನೆ. ಕಡೆಗುಳಿದ ಭೂಮಿಯನ್ನೂ ಕಿತ್ತುಕೊಳ್ಳಲು ಕೌರವ ಸ್ವರೂಪಿ ಸರ್ಕಾರಗಳು ಹುನ್ನಾರ ನಡೆಸಿವೆ. ಭೂಮಿ ರಕ್ಷಣೆಗೆ ಮತ್ತೊಂದು ಕುರುಕ್ಷೇತ್ರ ನಡೆಸಬೇಕು. ಅವೈಜ್ಞಾನಿಕ ನೀತಿಗಳಿಂದಾಗಿ ಕೃಷಿ ಕ್ಷೇತ್ರವನ್ನು ಪ್ರಯೋಜನಕ್ಕೆ ಬಾರದ ವಲಯವನ್ನಾಗಿ ಮಾಡಿವೆ. ಆ ಮೂಲಕ ಹೊಸ ರೈತ ಸಂಗ್ರಾಮಕ್ಕೆ ಮುನ್ನುಡಿ ಬರೆಯುತ್ತಿವೆ’ ಎಂದರು.

ಕರಕುಶಲ ಉತ್ಪನ್ನಗಳಿಗೆ ತೆರಿಗೆ: ಸ್ವರಾಜ್‌ ಇಂಡಿಯಾ ಮುಖಂಡ ಹಾಗೂ ಸಾಹಿತಿ ದೇವನೂರು ಮಹಾದೇವ ಮಾತನಾಡಿ, ‘ಕರಕುಶಲ ಉತ್ಪನ್ನಗಳಿಗೆ ತೆರಿಗೆ ವಿಧಿಸಲು ಮುಂದಾಗಿರುವ ಸರ್ಕಾರಗಳ ವಿರುದ್ಧ ರಾಜ್ಯದಲ್ಲಿ ಚಳವಳಿ ಆರಂಭವಾಗಿದೆ. ಉದ್ಯೋಗ ಮತ್ತು ಸ್ವಾವಲಂಬನೆಯೇ ಅಭಿವೃದ್ಧಿ ಎಂಬ ಮಂತ್ರವನ್ನು ಈ ದೇಶ ಜಪಿಸಬೇಕು’ ಎಂದರು.

ಬ್ರೆಜಿಲ್‌ ರೈತರ ಬೆಂಬಲ

ಸಮಾವೇಶದಲ್ಲಿ ಬ್ರೆಜಿಲ್‌ನ ರೈತ ಪ್ರತಿನಿಧಿಗಳು ಭಾಗವಹಿಸಿ ಗಮನ ಸೆಳೆದರು.

ಬ್ರೆಜಿಲ್‌ನಲ್ಲಿ ವೈದ್ಯರಾಗಿರುವ ಕ್ಲಾರಿಸಾ ಲೇಗ್ಸ್‌, ಸಾಮಾಜಿಕ ಹೋರಾಟಗಾರ್ತಿ ಬಾರ್ಬರಾ ಲಾರೆಸ್‌ ಸಮಾವೇಶದಲ್ಲಿ ಪಾಲ್ಗೊಂಡರು. ಭೂರಹಿತ ಕಾರ್ಮಿಕರಿಗಾಗಿ ಹೋರಾಟ ನಡೆಸುತ್ತಿರುವ ‘ಭೂ ರಹಿತ ಕಾರ್ಮಿಕ ಚಳವಳಿ’ ಧ್ವಜವನ್ನು ಯೋಗೇಂದ್ರ ಯಾದವ್‌ ಹಾಗೂ ವಿ.ಎಂ.ಸಿಂಗ್‌ ಅವರಿಗೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.