ADVERTISEMENT

ಖಾಂಡ್ಯ ಸಹಚರ ಅಭಿರಾಮ್‌ ಬಂಧನ

ಕಲ್ಲಪ್ಪ ಹಂಡಿಬಾಗ ಆತ್ಮಹತ್ಯೆ– ತೇಜಸ್‌ ಅಪಹರಣ ಪ್ರಕರಣ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST

ಚಿಕ್ಕಮಗಳೂರು: ಡಿವೈಎಸ್‌ಪಿ ಕಲ್ಲಪ್ಪ ಹಂಡಿಬಾಗ ಆತ್ಮಹತ್ಯೆ ಮತ್ತು ತೇಜಸ್‌ ಅಪಹರಣದ ಪ್ರಮುಖ ಸೂತ್ರಧಾರ, ವಿಶ್ವ ಹಿಂದೂ ಪರಿಷತ್‌ ಶಿವಮೊಗ್ಗ ವಿಭಾಗೀಯ ಸಂಚಾಲಕ ಖಾಂಡ್ಯ ಪ್ರವೀಣನ ಸಹಚರ ಅಭಿರಾಮ್ ಎಂಬಾತನನ್ನು ಸಿಐಡಿ ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಬಂಧಿತರ ಸಂಖ್ಯೆ ಮೂರಕ್ಕೇರಿದೆ.

‘ಬಂಧಿತ ಆರೋಪಿ ಸಿಎಸ್‌ಎಫ್‌ ನಿವೃತ್ತ ಯೋಧನ ಪುತ್ರ. ಬೆಂಗಳೂರಿನ ನಿವಾಸಿಯಾಗಿದ್ದು, ಈತನನ್ನು ಮಂಗಳವಾರ ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದರು. ಬುಧವಾರ ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಆರೋಪಿಯನ್ನು ಬಿಗಿಭದ್ರತೆಯಲ್ಲಿ ನಗರದ ಸಿಐಡಿ ತಾತ್ಕಾಲಿಕ ಕಚೇರಿಗೆ ಕರೆತಂದರು. ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿ, ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಪೊಲೀಸ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ವಿಚಾರಣೆ ವೇಳೆ ಪ್ರದೀಪ ನೀಡಿದ ಸುಳಿವು ಆಧರಿಸಿ, ಆರೋಪಿ ಅಭಿರಾಮ್‌ನನ್ನು ತನಿಖಾ ತಂಡ ಬಂಧಿಸಿದೆ. ತಲೆ ಮರೆಸಿಕೊಂಡಿರುವ ಪ್ರಕರಣದ ಸೂತ್ರಧಾರ ಖಾಂಡ್ಯ ಪ್ರವೀಣ್‌, ಈತನ ಸಹಚರರಾದ ನವೀನ್‌ ಶೆಟ್ಟಿ ಹಾಗೂ ಈತನ ಮಗ ಅಶ್ವಿತ್‌ ಶೆಟ್ಟಿ, ಅಪಹರಣದಲ್ಲಿ ಭಾಗಿಯಾಗಿರುವ ಜೀವ ಹಾಗೂ ಇತರರನ್ನು ಬಂಧಿಸಲು ಸಿಐಡಿ ತಂಡಗಳು ರಾಜ್ಯ ಮತ್ತು ಹೊರ ರಾಜ್ಯದಲ್ಲಿ ತೀವ್ರ ಶೋಧ ನಡೆಸುತ್ತಿವೆ’ ಎಂದು ಮೂಲಗಳು ಹೇಳಿವೆ.

ಆರೋಪಿ ಅಭಿರಾಮ್‌, ತೇಜಸ್‌ ಅಪಹರಿಸುವ ಮೊದಲು, ಜೂನ್‌ 26ರಂದು ತಾಲ್ಲೂಕಿನ ಚಿಕ್ಕೊಳಲೆ ಮಾಧವ ಎಂಬಾತನ ತೋಟದಲ್ಲಿ ನಡೆಯುತ್ತಿದ್ದ ಜೂಜಾಟದಲ್ಲಿ ಸೆರೆ ಸಿಕ್ಕಿದ್ದ ಆರೋಪಿಗಳ ಬಿಡುಗಡೆಗೆ ಗ್ರಾಮಾಂತರ ಪೊಲೀಸ್‌ ಠಾಣೆಗೆ ಹೋಗಿ, ಜಾಮೀನಿಗೆ ಸಹಿ ಹಾಕಿದ್ದ. ‘ತಾನು ಖಾಂಡ್ಯ ಪ್ರವೀಣ್‌ ಕಾರು ಚಾಲಕ, ವಿಜಯಪುರ ವಾಸಿ’ ಎಂದು ಸುಳ್ಳು ವಿಳಾಸ ನೀಡಿದ್ದ. ಠಾಣೆಯಿಂದ ಬಿಡುಗಡೆಯಾದ ನಂತರ ಔತಣಕೂಟ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ತೇಜಸ್‌ನನ್ನು ಹಿಂಬಾಲಿಸಿ, ಆತನ ಮನೆ ಸಮೀಪ ಅಡ್ಡಗಟ್ಟಿ ಸ್ಕಾರ್ಪಿಯೋದಲ್ಲಿ ಅಪಹರಿಸಿದ್ದರು. 6 ಮಂದಿ ಅಪಹರಣಕಾರರಲ್ಲಿ ಆರೋಪಿ ಅಭಿರಾಮ್‌ ಒಬ್ಬ.

ನಟರಾಜನ ಸಹಚರ ಸಿಐಡಿ ವಶಕ್ಕೆ?:  ಫೈನಾನ್ಶಿಯರ್‌ ತೇಜಸ್‌ ಅಪಹರಣಕ್ಕೆ ಸುಪಾರಿ ನೀಡಿದ್ದ ಆರೋಪಿ ಕಲ್ಮನೆ ಚಿಟ್‌ಫಂಡ್‌ ಮುಖ್ಯಸ್ಥ ನಟರಾಜನ ವ್ಯವಹಾರಿಕ ಪಾಲುದಾರನೊಬ್ಬನನ್ನು ಸಿಐಡಿ ತನಿಖಾ ತಂಡ ಬುಧವಾರ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದೆ.

‘ನಟರಾಜನ ಆಪ್ತ ಎನ್ನಲಾದ ಈ ವ್ಯಕ್ತಿ ಅಪಹರಣ ನಡೆದು, ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ. ಈತನಿಗಾಗಿ ಅಪರಾಧ ಪತ್ತೆ ವಿಭಾಗ ಮತ್ತು ಸಿಐಡಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದರು. ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್‌ ನೀಡಿದ ಹಿನ್ನೆಲೆಯಲ್ಲಿ ಬುಧವಾರ ವಿಚಾರಣೆಗೆ ಹಾಜರಾಗಿದ್ದ. ಸಿಐಡಿ ಬಂಧಿಸಿರುವ ಅಪಹರಣಕಾರರಲ್ಲಿ ಒಬ್ಬನಾದ ಅಭಿರಾಮ್‌,  ನೀಡಿರುವ ಮಾಹಿತಿಯಲ್ಲಿ ನಟರಾಜನ ಆಪ್ತನಾಗಿರುವ ಈ ವ್ಯಕ್ತಿಯ ಪಾತ್ರವಿರುವುದು ತನಿಖಾ ತಂಡಕ್ಕೆ ಗೊತ್ತಾಗಿದೆ’ ಎಂದು ಪೊಲೀಸ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಸಿಐಡಿ ವಶದಲ್ಲಿರುವ ಖಾಂಡ್ಯ ಪ್ರವೀಣ್‌ ಸಹಚರ ಪ್ರದೀಪ ನೀಡಿರುವ ಸುಳಿವು ಆಧರಿಸಿ, ಇನ್ನು ಮೂವರು ಪ್ರಭಾವಿ ವ್ಯಕ್ತಿಗಳನ್ನು ವಶಕ್ಕೆ ಪಡೆಯಲು ತನಿಖಾ ತಂಡ ಕಾರ್ಯಾಚರಣೆ ನಡೆಸುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ತನಿಖೆಯ ಪ್ರಗತಿ ಪರಿಶೀಲಿಸಲು ಸಿಐಡಿ ಡಿಜಿಪಿ ಕಿಶೋರಚಂದ್ರ, ಎಡಿಜಿಪಿ ಪ್ರತಾಪ್‌ ರೆಡ್ಡಿ ಬುಧವಾರ ಮಧ್ಯಾಹ್ನ ನಗರಕ್ಕೆ ಬಂದಿದ್ದಾರೆ. ಪಶ್ಚಿಮ ವಲಯ ಐಜಿಪಿ ಅರುಣ್‌ ಚಕ್ರವರ್ತಿ ಅವರು ನಗರದಲ್ಲಿ ಮೊಕ್ಕಾಂ ಮಾಡಿದ್ದಾರೆ.

ಖಾಂಡ್ಯ ಪ್ರವೀಣ್‌ ಪತ್ನಿ ವಿಚಾರಣೆ
ಚಿಕ್ಕಮಗಳೂರು: ಪ್ರಕರಣದ ಸೂತ್ರಧಾರ ಖಾಂಡ್ಯ ಪ್ರವೀಣನ ಪತ್ನಿ ರೇಷ್ಮಾ (ಪ್ರಿಯಾ) ಅವರನ್ನು ಸಿಐಡಿ ತನಿಖಾಧಿಕಾರಿಗಳು ಬುಧವಾರ ವಿಚಾರಣೆಗೆ ಒಳಪಡಿಸಿದರು.

‘ಮಧ್ಯಾಹ್ನ 1.30ರ ಸುಮಾರಿಗೆ ನಗರದಲ್ಲಿರುವ ಸಿಐಡಿ ತಾತ್ಕಾಲಿಕ ಕಚೇರಿಗೆ ಕರೆತಂದು ಸಂಜೆವರೆಗೂ ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿಕೊಂಡರು. ಪ್ರವೀಣನ ಆಪ್ತರಾದ ಬಜರಂಗ ದಳಕ್ಕೆ ಸೇರಿದ 6 ಯುವಕರನ್ನು ಬಾಳೆಹೊನ್ನೂರು ಪೊಲೀಸ್‌ ಠಾಣೆಗೆ ಕರೆಸಿಕೊಂಡು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಖಾಂಡ್ಯ ಪ್ರವೀಣನ ತಂದೆ–ತಾಯಿ ಹೇಳಿಕೆ ದಾಖಲಿಸಿ ಕೊಳ್ಳಲಾಯಿತು. ದೂರುದಾರ ತೇಜಸ್‌ ವಿಚಾರಣೆ ನಡೆಸಿ, ಹೇಳಿಕೆ ಪಡೆಯಲಾಯಿತು’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT