ADVERTISEMENT

ಖಾಸಗಿ ಶಾಲೆಗಳಲ್ಲೂ ಶಿಕ್ಷಕರ ಬರ!

ಹೆಚ್ಚು ವೇತನ: ಕೋಚಿಂಗ್‌ ಕೇಂದ್ರಗಳತ್ತ ಒಲವು

ಸೂರ್ಯನಾರಾಯಣ ವಿ
Published 19 ಜನವರಿ 2016, 19:32 IST
Last Updated 19 ಜನವರಿ 2016, 19:32 IST
ಖಾಸಗಿ ಶಾಲೆಗಳಲ್ಲೂ ಶಿಕ್ಷಕರ ಬರ!
ಖಾಸಗಿ ಶಾಲೆಗಳಲ್ಲೂ ಶಿಕ್ಷಕರ ಬರ!   

ಬೆಂಗಳೂರು: ಸರ್ಕಾರಿ ಶಾಲೆಗಳಷ್ಟೇ ಅಲ್ಲ; ರಾಜ್ಯದ ಖಾಸಗಿ ಶಾಲೆಗಳೂ ಶಿಕ್ಷಕರ ಕೊರತೆ ಎದುರಿಸುತ್ತಿವೆ!

ವಿವಿಧ ವಿಷಯಗಳ ನುರಿತ ಶಿಕ್ಷಕರು ಈಗ ಹೆಚ್ಚು ವೇತನ ನೀಡುವ ಟ್ಯುಟೋರಿಯಲ್‌ಗಳು ಮತ್ತು ಕೋಚಿಂಗ್‌ ಕೇಂದ್ರಗಳತ್ತ ಮುಖ ಮಾಡುತ್ತಿರುವುದು ಇದಕ್ಕೆ ಕಾರಣ. ಅಲ್ಲದೆ  ಶಾಲೆಗಳಲ್ಲಿ ಸಿಗುವ ಸಂಬಳಕ್ಕಿಂತ ಹೆಚ್ಚು ದುಡ್ಡು ಸಂಪಾದಿಸಬಹುದು ಎಂಬ ಕಾರಣಕ್ಕೆ ಕೆಲವು ಶಿಕ್ಷಕರು ತಮ್ಮದೇ ಆದ ಕೋಚಿಂಗ್ ಕೇಂದ್ರ ತೆರೆಯುತ್ತಿರುವುದರಿಂದಲೂ ಈ ಸಮಸ್ಯೆ ಉಂಟಾಗಿದೆ.

ಹಾಗಾಗಿ, ಸರ್ಕಾರಿ ಶಾಲೆಗಳಿಗಿಂತ ಹೆಚ್ಚು ವೇತನ ಖಾಸಗಿ ಶಾಲೆಗಳು ನೀಡುತ್ತಿದ್ದರೂ, ಉತ್ತಮ ಶಿಕ್ಷಕರು ಸಿಗುತ್ತಿಲ್ಲ. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಖಾಸಗಿ ಶಾಲೆಗಳಲ್ಲಿ ಈ ಪರಿಸ್ಥಿತಿ ಇದೆ.

ಬೆಂಗಳೂರಿನಲ್ಲಿ ಸಿಬಿಎಸ್‍ಇ, ಐಸಿಎಸ್‍ಇ ಪಠ್ಯ ಕ್ರಮವನ್ನು ಹೊಂದಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ಪ್ರತಿ ತಿಂಗಳು ₹45 ಸಾವಿರಕ್ಕೂ ಹೆಚ್ಚಿನ ವೇತನ ನೀಡುತ್ತಿವೆ. ಮಧ್ಯಮ ವರ್ಗದ ಖಾಸಗಿ ಶಾಲೆಗಳಲ್ಲೂ ಸಂಬಳ ಕಡಿಮೆ ಇಲ್ಲ. ಈ ಶಾಲೆಗಳ ಶಿಕ್ಷಕರು ಕೂಡ ಅನುಭವ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ವೇತನ ಪಡೆಯುತ್ತಿದ್ದಾರೆ.

ತೊಂದರೆ ನಿಜ: ‘ಕೋಚಿಂಗ್‌ ಕೇಂದ್ರಗಳಲ್ಲಿ ಹೆಚ್ಚು ಸಂಬಳ ನೀಡುತ್ತಾರೆ ಎಂಬ ಕಾರಣಕ್ಕೆ ಶಿಕ್ಷಕರು ಅಲ್ಲಿಗೆ ಹೋಗುತ್ತಿರುವುದು ನಮಗೆ ಸಮಸ್ಯೆಯಾಗಿದೆ’ ಎಂದು ಬೆಂಗಳೂರು ಮತ್ತು  ಮತ್ತು ಮೈಸೂರಿನ ದೆಹಲಿ ಪಬ್ಲಿಕ್‌ ಸ್ಕೂಲ್‌ನ ಆಡಳಿತ ಮಂಡಳಿ ಸದಸ್ಯ ಮನ್ಸೂರ್‌ ಅಲಿ ಖಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಧ್ಯಮ ಪ್ರಮಾಣದ ಶಾಲೆಗಳಿಗೆ ಇದರಿಂದ ತೊಂದರೆ. ಶಿಕ್ಷಕರಿಗೆ ವೇತನ ನೀಡಬೇಕು ಎಂದರೆ ನಾವು ಶಾಲಾ ಶುಲ್ಕ ಹೆಚ್ಚಿಸಬೇಕು. ಆದರೆ, ಇದರಿಂದ  ಪೋಷಕರಿಗೆ ಹೆಚ್ಚು ಹೊರೆಯಾಗುತ್ತದೆ. ಹಾಗಾಗಿ, ಈ ಬಗ್ಗೆ ನಾವು ಯೋಚಿಸುವಂತೆಯೂ ಇಲ್ಲ. ಸರ್ಕಾರದಿಂದಲೂ ನಮ್ಮ ಮೇಲೆ ಒತ್ತಡ ಇದೆ. ₹10 ಸಾವಿರ– ₹12 ಸಾವಿರ ಸಂಬಳಕ್ಕೆ ಯಾರೂ ಬರುವುದಿಲ್ಲ. ಈ ವರ್ಷ ಶೇ 10ರಿಂದ 12ರಷ್ಟು ಶಿಕ್ಷಕರು ನಮ್ಮ ಶಿಕ್ಷಣ ಸಂಸ್ಥೆಗಳನ್ನು ತೊರೆದಿದ್ದಾರೆ. ಎರಡು ವರ್ಷಗಳಿಂದೀಚೆಗೆ ಶಾಲೆ ತೊರೆಯುವ ಶಿಕ್ಷಕರ ಪ್ರಮಾಣ ಹೆಚ್ಚುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

‘ಸರ್ಕಾರ ಖಾಸಗಿ ಶಾಲೆಗಳ ನಿಯಂತ್ರಣಕ್ಕೆ ಹಲವಾರು ನಿಯಮಗಳನ್ನು ತಂದಿದೆ. ಆದರೆ, ಟ್ಯುಟೋರಿಯಲ್‌, ಕೋಚಿಂಗ್‌ ಕೇಂದ್ರಗಳಿಗೆ ಅಂತಹ ನಿಯಮಗಳಿಲ್ಲ’  ಎಂದು ಖಾನ್‌ ಆಕ್ಷೇಪಿಸಿದರು

ನಿಯಮ ರೂಪಿಸಲಿ: ‘ಕೋಚಿಂಗ್‌ ಕೇಂದ್ರಗಳು ದಂಧೆ ನಡೆಸುತ್ತಿವೆ. ನಮ್ಮ ಶಿಕ್ಷಕರಿಗೆ ಹೆಚ್ಚಿನ ವೇತನದ ಆಮಿಷವೊಡ್ಡಿ  ಸೆಳೆಯುತ್ತಿವೆ. ಅಲ್ಲಿ ಶಿಕ್ಷಕರು ಬೋಧನೆ ಮಾಡಬೇಕಾದ ಅವಧಿ ಕಡಿಮೆ. ಬೆಳಿಗ್ಗೆ ಮತ್ತು ಸಂಜೆ ತಲಾ ಮೂರು ಗಂಟೆ ಪಾಠ ಮಾಡಿದರೆ ಸಾಕು. ಇದರ ಜೊತೆಗೆ ವೇತನವೂ ಹೆಚ್ಚು ಸಿಗುತ್ತದೆ. ಹಾಗಾಗಿ, ಶಿಕ್ಷಕರು ಶಾಲೆ ತೊರೆಯಲು ಮನಸ್ಸು ಮಾಡುತ್ತಿದ್ದಾರೆ’ ಎಂದು ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ತಿಳಿಸಿದರು.

‘ಟ್ಯುಟೋರಿಯಲ್‌, ಕೋಚಿಂಗ್‌ ಕೇಂದ್ರ ಆರಂಭಿಸಲು ನೋಂದಣಿ ಮಾಡಬೇಕಿಲ್ಲ. ಇವುಗಳ ನಿರ್ವಹಣೆಗೆ ನಿಯಮಗಳೂ ಇಲ್ಲ. ಶಿಕ್ಷಣ ಇಲಾಖೆಯು ಇವುಗಳಿಗಾಗಿ ಪ್ರತ್ಯೇಕ ನಿಯಮಾವಳಿ ರೂಪಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಸಾಮಾನ್ಯವಾಗಿ ಕೋಚಿಂಗ್‌ ಕೇಂದ್ರಗಳಲ್ಲಿ ಸಿಬಿಎಸ್‌ಇ ಪಠ್ಯಕ್ರಮಗಳನ್ನು ಬೋಧಿಸಲಾಗುತ್ತಿದೆ. ಹಾಗಾಗಿ, ಸಿಬಿಎಸ್‌ಇ ಪಠ್ಯದ ತಜ್ಞ ಶಿಕ್ಷಕರಿಗೆ ಅಲ್ಲಿ ಬೇಡಿಕೆ ಇದೆ.  ಬಹುತೇಕ ಶಿಕ್ಷಕರು ಸ್ನಾತಕೋತ್ತರ ಪದವಿಯೊಂದಿಗೆ ಬಿಇಡಿ ಶಿಕ್ಷಣವನ್ನೂ ಪಡೆದಿರುತ್ತಾರೆ’ ಎಂದು ಶಿಕ್ಷಕರೊಬ್ಬರು ಹೇಳಿದರು.

‘ಹೆಚ್ಚಿನ ಕೋಚಿಂಗ್‌ ಸೆಂಟರ್‌ಗಳಲ್ಲಿ ಬೋಧಕರಿಗೆ ಗಂಟೆಗಳ ಲೆಕ್ಕದಲ್ಲಿ ವೇತನ ನೀಡುತ್ತಾರೆ. ಗಂಟೆಗೆ ಸಾವಿರ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚು ಸಂಬಳ ನೀಡುವವರೂ ಇದ್ದಾರೆ. ದಿನಕ್ಕೆ ಮೂರು ಗಂಟೆ ಮಾಡಿದರೂ ತಿಂಗಳಿಗೆ ₹ 90 ಸಾವಿರ ಸಂಬಳ ಸಿಗುತ್ತದೆ’ ಎಂದು ಮಂಗಳೂರಿನ ಪಿಯು ಕಾಲೇಜೊಂದರ ಉಪನ್ಯಾಸಕರೊಬ್ಬರು ಮಾಹಿತಿ ನೀಡಿದರು.

ಕಡಿಮೆ ವೇತನದ ಕಾರಣಕ್ಕೆ ಇವರು  ಸರ್ಕಾರಿ ಉಪನ್ಯಾಸಕ ಹುದ್ದೆ ತೊರೆದು ಖಾಸಗಿ ಕಾಲೇಜಿಗೆ ಸೇರಿದ್ದಾರೆ!

‘ಈ ಕಾಲದಲ್ಲಿ ಎಷ್ಟು ದುಡಿದರೂ ಸಾಕಾಗುವುದಿಲ್ಲ. ನನಗೆ ಸರ್ಕಾರ ₹ 25 ಸಾವಿರ ಸಂಬಳ ಕೊಡುತ್ತಿತ್ತು. ಅದು ಸಾಕಾಗುತ್ತಿರಲಿಲ್ಲ. ₹40 – 45 ಸಾವಿರ ಸಿಕ್ಕಿದ್ದರೆ ನಾನು ಕೆಲಸ ಬಿಡುತ್ತಿರಲಿಲ್ಲ. ಈಗ ಕೋಚಿಂಗ್‌ ಕೇಂದ್ರಗಳು ಹೆಚ್ಚು ದುಡ್ಡು ಕೊಡುವುದರಿಂದ ಸಹಜವಾಗಿ ಶಿಕ್ಷಕರು ಅತ್ತ ಮುಖ ಮಾಡಿದ್ದಾರೆ’ ಎಂದು ಅವರು ಅಭಿಪ್ರಾಯ ಪಟ್ಟರು.

ಯಾವ ವಿಷಯಗಳಿಗೆ ಬೇಡಿಕೆ?
*ಭೌತ ವಿಜ್ಞಾನ
*ರಸಾಯನ ವಿಜ್ಞಾನ
*ಜೀವ ವಿಜ್ಞಾನ
*ಗಣಿತ
*ಇಂಗ್ಲಿಷ್‌

ಒಲವೇಕೆ?
* ಕಡಿಮೆ ಜವಾಬ್ದಾರಿ. ಬೋಧನೆ ಹೊರತಾಗಿ ಹೆಚ್ಚುವರಿ ಕೆಲಸ ಇಲ್ಲ.
* ಇಡೀ ದಿನ ಶಾಲೆಯಲ್ಲೇ ಇರಬೇಕಾಗಿಲ್ಲ
* ನಿಗದಿತ ಸಮಯಕ್ಕೆ ಬಂದು ಪಾಠ ಮಾಡಿದರೆ ಸಾಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT