ADVERTISEMENT

ಗಂಟಲಲ್ಲಿ ಸಿಕ್ಕಿಕೊಂಡ ಜಂತು ಮಾತ್ರೆ: ಮಗು ಸಾವು

ಕುದ್ರಿಮೋತಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2016, 19:48 IST
Last Updated 10 ಫೆಬ್ರುವರಿ 2016, 19:48 IST

ಯಲಬುರ್ಗಾ (ಕೊಪ್ಪಳ ಜಿಲ್ಲೆ):  ಜಂತುಹುಳು ನಿವಾರಣಾ ಮಾತ್ರೆ ಸಿಕ್ಕಿಕೊಂಡು ತಾಲ್ಲೂಕಿನ ಕುದ್ರಿಮೋತಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಒಂದೂವರೆ ವರ್ಷದ ಮಗು ಮೃತಪಟ್ಟಿದೆ.

ಇನ್ನೊಂದು ಪ್ರಕರಣದಲ್ಲಿ ಮಾತ್ರೆ ಸೇವಿಸಿದ ತರಲಕಟ್ಟಿ ಗ್ರಾಮದ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.

ಸುದೀಪ ಶಂಕ್ರಪ್ಪ ಕಲ್ಯಾಣಿ ಮೃತಪಟ್ಟಿದ್ದಾನೆ. ಮಾತ್ರೆ ಗಂಟಲಲ್ಲಿ ಸಿಕ್ಕಿ, ಉಸಿರುಗಟ್ಟಿ ಸಾವು ಸಂಭವಿಸಿದೆ ಎಂದು ವೈದ್ಯರು ಹೇಳಿದ್ದಾರೆ. ಉಳಿದ ಮಕ್ಕಳಿಗೆ ತೊಂದರೆಯಾಗಿಲ್ಲ. ಸುದೀಪ ಸೇವಿಸಿದ ಮಾತ್ರೆ ಸರಿಯಾಗಿ ದೇಹ ಸೇರದೆ ಗಂಟಲಿನಲ್ಲಿ ಸಿಲುಕಿ ಉಸಿರಾಟಕ್ಕೆ ತೊಂದರೆಯಾಗಿ ಮೃತಪಟ್ಟಿರುವುದು ವೈದ್ಯರ ವರದಿಯಿಂದ ಧೃಢ ಪಟ್ಟಿದೆ ಎಂದು ಸಿಪಿಐ ನಾಗರಾಜ ಕಮ್ಮಾರ ತಿಳಿಸಿದ್ದಾರೆ.

ಪ್ರತ್ಯೇಕ ಪ್ರಕರಣ ಅಸ್ವಸ್ಥ
ಇದೇ ತಾಲ್ಲೂಕಿನ ತರಲಕಟ್ಟಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶಿಕ್ಷಕರು ವಿತರಿಸಿದ ಜಂತುನಾಶಕ ಮಾತ್ರೆ ಸೇವನೆಯಿಂದ ಬುಧವಾರ ಹಲವು ವಿದ್ಯಾರ್ಥಿಗಳು ಅಸ್ವಸ್ಥಯಗೊಂಡಿದ್ದಾರೆ. ಆರೋಗ್ಯ ಇಲಾಖೆಯಿಂದ ವಿತರಣೆಯಾಗಿರುವ ಜಂತುನಾಶಕ ಮಾತ್ರೆಯನ್ನು 30–40 ವಿದ್ಯಾರ್ಥಿಗಳು ಸೇವಿಸಿದ್ದಾರೆ.

ಕೆಲ ಸಮಯದ ನಂತರ 4–5 ವಿದ್ಯಾರ್ಥಿಗಳಿಗೆ ವಾಂತಿ, ತಲೆಸುತ್ತು ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಗಾಬರಿಗೊಂಡ ಶಿಕ್ಷಕರು ಹಾಗೂ ಪಾಲಕರು ಬೇವೂರು ಆಸ್ಪತ್ರೆಯ ವೈದ್ಯರ ಗಮನಕ್ಕೆ ತಂದಿದ್ದಾರೆ. ವೈದ್ಯಾಧಿಕಾರಿ ಪ್ರಶಾಂತ ತಟ್ಟಿ ಮತ್ತು ಸಿಬ್ಬಂದಿ ಮಕ್ಕಳಿಗೆ ಚಿಕಿತ್ಸೆ ನೀಡಿದರು. ಖಾಲಿ ಹೊಟ್ಟೆಯಲ್ಲಿ ಮಾತ್ರೆ ತೆಗೆದುಕೊಂಡಿದ್ದರಿಂದ ಈ ರೀತಿ ತೊಂದರೆಯಾಗಿದೆ ಎಂದು ವೈದ್ಯರು ಪಾಲಕರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.