ADVERTISEMENT

ಗಾಂಧಿ ಸೇವಾ ಪ್ರಶಸ್ತಿ ಪ್ರದಾನ

ಪ್ರಶಸ್ತಿ ಮೊತ್ತವನ್ನು ಸಾಮಾಜಿಕ ಕಾರ್ಯಗಳಿಗೆ ಅರ್ಪಿಸಿದ ಹೊ.ಶ್ರೀನಿವಾಸಯ್ಯ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2015, 19:30 IST
Last Updated 2 ಅಕ್ಟೋಬರ್ 2015, 19:30 IST

ಬೆಂಗಳೂರು:  ‘ಗಾಂಧಿ ಹೆಸರಿನ ಈ ಪ್ರಶಸ್ತಿ ಜತೆಗೆ ಬಂದಿರುವ ₹ 5 ಲಕ್ಷ ಗೌರವಧನವನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗ ಮಾಡಲಿದ್ದೇನೆ’ ಎಂದು ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ. ಹೊ.ಶ್ರೀನಿವಾಸಯ್ಯ ಹೇಳಿದರು.

ರಾಜ್ಯ ಸರ್ಕಾರ ಶುಕ್ರವಾರ ನೀಡಿದ ‘ಗಾಂಧಿ ಸೇವಾ ಪ್ರಶಸ್ತಿ’ಯನ್ನು ಸ್ವೀಕರಿಸಿ ಅವರು ಮಾತನಾಡಿದರು. ‘ಗಾಂಧಿ ಪ್ರಣೀತ ಅರ್ಥಶಾಸ್ತ್ರವನ್ನು ನಾವು ಸರಿದಾರಿಯಲ್ಲಿ ದುಡಿಸಿಕೊಂಡಿದ್ದರೆ ಈಗ ರೂಪಾಯಿ ಅಪಮೌಲ್ಯಗೊಳ್ಳುವ ಪ್ರಸಂಗವೇ ಬರುತ್ತಿರಲಿಲ್ಲ. ಆರ್ಥಿಕ ಸವಾಲುಗಳು ಸಹ ಎದುರಾಗುತ್ತಿರಲಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ನಮ್ಮ ದೇಶ ಹಾಗೂ ಸರ್ಕಾರಗಳು ಗಾಂಧಿಯನ್ನು ಕಡೆಗಣಿಸಿ ಬಿಟ್ಟಿವೆಯಲ್ಲ, ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಣ್ಣಮುಂದೆ ಇರುವಾಗ ನಾವು ಕುರುಡಾಗಿದ್ದೇವಲ್ಲ ಎಂಬ ವಿಷಾದ ಕಾಡುತ್ತಿತ್ತು. ರಾಜ್ಯ ಸರ್ಕಾರ ಗಾಂಧಿ ಮಾರ್ಗ ಕಂಡುಕೊಳ್ಳುವ ಮೂಲಕ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಹಾಕಿದ್ದು ಸಮಾಧಾನ ತಂದಿದೆ’ ಎಂದು ಹರ್ಷಚಿತ್ತರಾಗಿ ಹೇಳಿದರು.

ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ, ‘ಶ್ರೀನಿವಾಸಯ್ಯ ಅವರಂತಹ ಸ್ವಾತಂತ್ರ್ಯ ಸೇನಾನಿಗಳನ್ನು ಕಂಡಾಗ ಗಾಂಧಿ ಇನ್ನೂ ಬದುಕಿದ್ದಾರೆ ಎಂಬ ಭಾವ ಮೂಡುತ್ತದೆ’ ಎಂದು ಕೊಂಡಾಡಿದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಗಾಂಧೀಜಿ ಅವರ ಸರಳ ಜೀವನ ಅನುಸರಿಸಲು ಸಿದ್ಧತೆ, ಬದ್ಧತೆ ಎರಡೂ ಬೇಕು. ಹಾಗೆ ಬದುಕುವುದು ನಮ್ಮಿಂದ ಸಾಧ್ಯವಿಲ್ಲ. ಹೀಗಾಗಿ ನಾವು ಗಾಂಧಿ ಅನುಯಾಯಿಗಳು ಎಂದು ಹೇಳಿಕೊಂಡರೆ ಆತ್ಮ ವಂಚನೆ ಆಗುತ್ತದೆ’ ಎಂದರು.

ಹೊಡೀರಿ ಚಪ್ಪಾಳೆ
ಗಾಂಧಿ ಜಯಂತಿ ಆಚರಣೆಗೆ ಮುಖ್ಯಮಂತ್ರಿ ಕೈಗೊಂಡ ನಿರ್ಧಾರದ ಕುರಿತು ಮನಸಾರೆ ಶ್ಲಾಘಿಸಿದ ಹೊ.ಶ್ರೀನಿವಾಸಯ್ಯ, ‘ಏಕೆ ಸುಮ್ಮನೆ ಕುಳಿತಿದ್ದೀರಿ, ಹೊಡೀರಿ ಚಪ್ಪಾಳೆ’ ಎಂದು 2–3 ಸಲ ಸಭಿಕರನ್ನು ಹುರಿದುಂಬಿಸಿದರು. ಅವರ ಈ ಮಾತಿಗೆ ಸ್ವತಃ ಸಿದ್ದರಾಮಯ್ಯ ಅವರೂ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.