ADVERTISEMENT

ಗಾರೆ ಕೆಲಸದಾಕೆಯ ಮಗ 8ನೇ ರ‍್ಯಾಂಕ್

​ಪ್ರಜಾವಾಣಿ ವಾರ್ತೆ
Published 18 ಮೇ 2015, 19:30 IST
Last Updated 18 ಮೇ 2015, 19:30 IST

ತುಮಕೂರು: ಗಾರೆ ಕೆಲಸ ಮಾಡುವ ತಾಯಿ, ಕಾರ್ಪೆಂಟರ್ ವೃತ್ತಿಯ ತಂದೆ. ಮನೆಯಲ್ಲಿ ಬಡತನ. ಆದರೆ ಈಗ ಮಗನ ಸಾಧನೆ ಈ ಎಲ್ಲಾ ಕಷ್ಟವನ್ನು ಮರೆಸಿದೆ. ಮೊಗದಲ್ಲಿ ನಗು ಅರಳಿಸಿದೆ.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತುಮಕೂರು ಸರ್ವೋದಯ ಕಾಲೇಜಿನ ಕೆ.ಪಿ.ಯತೀಶ್ ಶೇ 98ರಷ್ಟು ಅಂಕಗಳಿಸುವ ಮೂಲಕ ರಾಜ್ಯ ಮಟ್ಟದಲ್ಲಿ 8ನೇ ರ‍್ಯಾಂಕ್ ಗಳಿಸಿದ್ದಾರೆ.

ಅಮ್ಮನದ್ದು ಗಾರೆ ಕೆಲಸ. ಅಪ್ಪನದ್ದು ಕಾರ್ಪೆಂಟರ್ ವೃತ್ತಿ. ಅನಾರೋಗ್ಯದಿಂದ ಅಪ್ಪ ಈಚೆಗೆ ಕೆಲಸ ಮಾಡುತ್ತಿಲ್ಲ. ನಮ್ಮದು ಬಡ ಕುಟುಂಬ. ವೈದ್ಯನಾಗಬೇಕು ಎಂಬ ಹಂಬಲದಿಂದ ಓದಿದೆ. ಉಪನ್ಯಾಕರ ಸಹಕಾರ, ಮಾರ್ಗದರ್ಶನವೇ ಇಷ್ಟೊಂದು ಅಂಕಗಳಿಸಲು ಸಾಧ್ಯವಾಯಿತು ಎಂದು 8ನೇ ರ್‍ಯಾಂಕ್ ಪಡೆದ ಯತೀಶ್  ‘ಪ್ರಜಾವಾಣಿ’ ಜತೆ ತಮ್ಮ ಹರ್ಷ ಹಂಚಿಕೊಂಡರು.

ನಮ್ಮೂರು ತುಮಕೂರು ತಾಲ್ಲೂಕಿನ ಕೋಳಿಹಳ್ಳಿ. ಗ್ರಾಮಕ್ಕೆ ಬಸ್ ಇಲ್ಲ. ಪಂಡಿತನಹಳ್ಳಿಗೆ ಬಂದು ಬಸ್ ಹತ್ತಬೇಕು. ಪಂಡಿತಹಳ್ಳಿಯಿಂದ ನಮ್ಮ ಗ್ರಾಮ 3 ಕಿ.ಮೀ ದೂರವಿದೆ. ನಿತ್ಯ ಹೋಗುವುದು ಬರುವುದು ಸೇರಿ 6 ಕಿ.ಮೀ ನಡೆದುಕೊಂಡೆ ಬರುತ್ತಿದೆ. ಬಸ್‌ನಲ್ಲಿ ತುಮಕೂರಿಗೆ ಬಂದು ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದೆ. ಇದ್ಯಾವುದು ಕಷ್ಟವಾಗಲಿಲ್ಲ. ನಾನು ವೈದ್ಯನಾಗಬೇಕು ಎಂಬುದು ಅಪ್ಪ, ಅಮ್ಮನ ಆಸೆಯಲ್ಲ. ಅದು ನನ್ನ ಹಂಬಲ. ತಂದೆ, ತಾಯಿ ಕಷ್ಟಪಡುತ್ತಾರೆ. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಆಶಯದಿಂದ ಓದಿದೆ. ಕನಿಷ್ಠ ಐದಾರು ಗಂಟೆ ಓದುತ್ತಿದ್ದೆ ಎಂದು ವಿವರಿಸಿದರು.

ಎಸ್ಎಸ್ಎಲ್‌ಸಿಯಲ್ಲಿ ಶೇ 93 ಅಂಕಗಳಿಸಿದ್ದೆ. ಸರ್ವೋದಯ ಕಾಲೇಜಿನಲ್ಲಿ ವಿಜ್ಞಾನ ವಿಷಯ ಪ್ರವೇಶ ಪಡೆದೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಯಾಗಿದ್ದರಿಂದ ಆರಂಭದಲ್ಲಿ ವಿಷಯ ಅರ್ಥ ಮಾಡಿಕೊಳ್ಳಲು ಕಷ್ಟವಾಯಿತು. ನಂತರ ಉಪನ್ಯಾಸಕರ ಮಾರ್ಗದರ್ಶನ, ನಿರಂತರ ಓದಿನಿಂದ ವಿಷಯ ಮನದಟ್ಟಯಾಯಿತು. ನನ್ನ ನೆನಪಿನ ಶಕ್ತಿ ಚೆನ್ನಾಗಿದೆ. ಇದೂ ಉತ್ತಮ ಅಂಕ ಗಳಿಸಲು ಸಹಾಯವಾಯಿತು ಎಂದು ವಿವರಣೆ ನೀಡಿದರು.

ಕೇಬಲ್ ಕಟ್‌:  ಮಗ ಓದುವುದು ನೋಡಿಯೇ ಅಚ್ಚರಿಯಾಗುತ್ತಿತ್ತು. ಬಾಲ್ಯದಿಂದಲೂ ಓದಿನಲ್ಲಿ ಮುಂದು. ಇಷ್ಟೊಂದು ಓದಬೇಡ ಎಂದು ಹೇಳುತ್ತಿದ್ದೆ. ವ್ಯಾಸಂಗಕ್ಕೆ ಅಡ್ಡಿಯಾಗುತ್ತದೆಂದು ಟಿ.ವಿ ಕೇಬಲ್ ತೆಗೆಸಿದ್ದೆ. ಒಂದುವರೆ ಎಕರೆ ಜಮೀನಿದೆ. ಎಷ್ಟು ಓದಿಸಲು ಸಾಧ್ಯವೊ ಅಷ್ಟು ಓದಿಸುತ್ತೇನೆ. ಹೆಂಡತಿ ಗಾರೆ ಕೆಲಸ ಮಾಡುತ್ತಾಳೆ. ಆಕೆಯಿಂದಲೇ ಕುಟುಂಬ ನಡೆಯುತ್ತಿದೆ. ಕಾರ್ಪೆಂಟರ್ ಆಗಿದ್ದ ನನ್ನ ಕೈಯಲ್ಲಿ ಈಗ ಅಶಕ್ತತೆ ಕಂಡು ಬಂದಿದೆ. ಹೀಗಾಗಿ ಕೆಲಸ ನಿಲ್ಲಿಸಿದ್ದೇನೆ ಎಂದು ಯತೀಶ್ ತಂದೆ ಪಾಪಯ್ಯ ಮಗನ ಸಾಧನೆ ಬಗ್ಗೆ ಹೆಮ್ಮೆಯಿಂದ ನುಡಿದರು.

ಮಗನ ಸಾಧನೆ ಕಂಡ ಯತೀಶ್ ತಾಯಿ ‘ಧನಲಕ್ಷ್ಮಿ’ ಅವರ ಆನಂದ ಬಾಷ್ಪಗಳೇ ಪ್ರತಿಕ್ರಿಯೆಯಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.