ADVERTISEMENT

ಗೆಳೆಯ ಧರ್ಮಸಿಂಗ್ ನೆನೆದು ಕಣ್ಣೀರಿಟ್ಟ ಖರ್ಗೆ; ಕುಟುಂಬದ ಸದಸ್ಯರಿಗೆ ಸಾಂತ್ವನ

​ಪ್ರಜಾವಾಣಿ ವಾರ್ತೆ
Published 28 ಜುಲೈ 2017, 5:39 IST
Last Updated 28 ಜುಲೈ 2017, 5:39 IST
ಗೆಳೆಯ ಧರ್ಮಸಿಂಗ್ ನೆನೆದು ಕಣ್ಣೀರಿಟ್ಟ ಖರ್ಗೆ; ಕುಟುಂಬದ ಸದಸ್ಯರಿಗೆ ಸಾಂತ್ವನ
ಗೆಳೆಯ ಧರ್ಮಸಿಂಗ್ ನೆನೆದು ಕಣ್ಣೀರಿಟ್ಟ ಖರ್ಗೆ; ಕುಟುಂಬದ ಸದಸ್ಯರಿಗೆ ಸಾಂತ್ವನ   

ಕಲಬುರ್ಗಿ: ಇಲ್ಲಿನ ನೂತನ ವಿದ್ಯಾಲಯ ಮೈದಾನದಲ್ಲಿ ಇರಿಸಿರುವ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಗೆಳೆಯನ ಅಗಲಿಕೆಗೆ ಕಣ್ಣೀರಿಟ್ಟರು.

ಖರ್ಗೆ ಹಾಗೂ ಧರ್ಮಸಿಂಗ್ ಅವರದ್ದು ಸುಮಾರು 50 ವರ್ಷಗಳ ಒಡನಾಟ. ಈ ಭಾಗದ ಜನರು ಅವರಿಬ್ಬರನ್ನೂ ಪ್ರೀತಿಯಿಂದ ಸಂಗ್ಯಾ-ಬಾಳ್ಯಾ ಎಂದು ಕರೆಯುತ್ತಿದ್ದರು.

ಧರ್ಮಸಿಂಗ್ ಅವರ ಪುತ್ರರಾದ ಅಜಯ್ ಸಿಂಗ್ ಮತ್ತು ವಿಜಯ್ ಸಿಂಗ್ ಅವರನ್ನು ಅಪ್ಪಿಕೊಂಡು ಕ್ಷಣ ಹೊತ್ತು ಭಾವುಕರಾದರು.

ADVERTISEMENT

ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಬಾಬುರಾವ್ ಚಿಂಚನಸೂರ ಅವರು ಅಂತಿಮ ನಮನ ಸಲ್ಲಿಸಿದರು.

ಗಣ್ಯರಿಂದ ಅಂತಿಮ ನಮನ: ಕಂಬನಿ
ಧರ್ಮಸಿಂಗ್ ಅವರ ಅಂತಿಮ ‌ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಇಂದು ಮಧ್ಯಾಹ್ನ 12ಗಂಟೆ ವರೆಗೆ ನೂತನ ವಿದ್ಯಾಲಯದ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಧರ್ಮಸಿಂಗ್ ಒಡನಾಡಿಗಳು, ಬಂಧುಗಳು, ಸಚಿವ ಯು.ಟಿ. ಖಾದರ್, ವಿವಿಧ ಪಕ್ಷಗಳ ಮುಖಂಡರು, ಮೇಯರ್, ಪಾಲಿಕೆ ಸದಸ್ಯರು ಅಂತಿಮ ನಮನ ಸಲ್ಲಿಸಿದರು.

ಕಾಂಗ್ರೆಸ್ ಸೇವಾ ದಳದ ಸದಸ್ಯರು ಗೌರವ ವಂದನೆ ಸಲ್ಲಿಸಿದರು. ಬಳಿಕ ಪಾರ್ಥಿವ ಶರೀರವನ್ನು ರಸ್ತೆ ಮೂಲಕ ಜೇವರ್ಗಿಗೆ ಕೊಂಡೊಯ್ಯಲಾಗುವುದು. ಜೇವರ್ಗಿಯ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ತದನಂತರ ಹುಟ್ಟೂರು ನೆಲೋಗಿಯ ಅವರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ರಜಪೂತರ ವಿಧಿ ವಿಧಾನದಂತೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಗಣ್ಯರು ಭಾಗಿ: ದಿಗ್ವಿಜಯ್ ಸಿಂಗ್, ಗುಲಾಮ್ ನಬಿ ಆಜಾದ್, ವೇಣುಗೋಪಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಅನೇಕ ಗಣ್ಯರು ನೆಲೋಗಿಯಲ್ಲಿ ನಡೆಯುವ ಅಂತ್ತಕ್ರಿಯಲ್ಲಿ ಪಾಲ್ಗೊಳ್ಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.