ADVERTISEMENT

ಗೊಂದಲದ ಗೂಡಾದ ಶಿಕ್ಷಕರ ಅರ್ಹತಾ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2014, 19:30 IST
Last Updated 22 ಏಪ್ರಿಲ್ 2014, 19:30 IST

ವಿಜಾಪುರ: ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (ಎನ್‌ಸಿಟಿಇ) ನಡೆಸುತ್ತಿರುವ ‘ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)’ ಗೊಂದಲದ ಗೂಡಾಗಿದೆ.

‘ಬಿ.ಪಿ.ಇಡಿ ಮತ್ತು ಹಿಂದಿ ಮಾಧ್ಯಮ­ದಲ್ಲಿ ಬಿ.ಇಡಿ ಪೂರೈಸಿದವರಿಗೆ ಪ್ರತ್ಯೇಕ ಪಠ್ಯಕ್ರಮ ಇಲ್ಲ. ಬಿ.ಇಡಿ ಅಭ್ಯರ್ಥಿಗಳು ಪಿಯುಸಿಯಲ್ಲಿ ಶೇ 50ರಷ್ಟು ಅಂಕ ಗಳಿಸಿರಬೇಕು ಎಂಬ ಷರತ್ತು ವಿಧಿಸಲಾಗಿದೆ. ಪರೀಕ್ಷೆಗೆ ರಾಜ್ಯ ಪಠ್ಯಕ್ರಮದ ಬದಲು ಕೇಂದ್ರ ಪಠ್ಯಕ್ರಮ ಅಳವಡಿಸಲಾಗಿದೆ. ಪರೀಕ್ಷಾ ಶುಲ್ಕ ಸಹ ದುಬಾರಿ’ ಎಂದು ಅಭ್ಯರ್ಥಿಗಳು ದೂರುತ್ತಿದ್ದಾರೆ.

‘ಡಿ.ಇಡಿ ಪೂರೈಸಿರುವವರು 1 ರಿಂದ 5ನೇ ತರಗತಿ ಹಾಗೂ ಬಿ.ಇಡಿ ಪೂರೈಸಿರುವವರು 6ರಿಂದ 8ನೇ ತರಗತಿಯ ಶಿಕ್ಷಕರಾಗಲು ಈ ಅರ್ಹತಾ ಪರೀಕ್ಷೆ ಎದುರಿಸಬೇಕು. ಇದರಿಂದಾಗಿ ಬಿ.ಇಡಿ ಪೂರೈಸಿ ಉದ್ಯೋಗಕ್ಕಾಗಿ ಕಾಯುತ್ತಿ­ರುವ ಸಾವಿರಾರು ಜನ ಅವಕಾಶದಿಂದ ವಂಚಿತ­ರಾಗಲಿದ್ದಾರೆ’ ಎಂಬುದು ಇಲ್ಲಿಯ ಚಾಣಕ್ಯ ಕರಿಯರ್‌ ಅಕಾಡೆಮಿ ನಿರ್ದೇಶಕ ಎನ್‌.ಎಂ. ಬಿರಾದಾರ ಅವರ ಆತಂಕ.

‘ಬಿ.ಇಡಿ ವ್ಯಾಸಂಗ ಮಾಡುವಾಗ ನಮ್ಮ ಪಿಯುಸಿ ಅಂಕಗಳನ್ನು ಪರಿಗಣಿಸಿಲ್ಲ. ಪದವಿ­ಯಲ್ಲಿ ಸಾಮಾನ್ಯ ಅಭ್ಯರ್ಥಿಗಳು ಶೇ 50ರಷ್ಟು, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಶೇ 45ರಷ್ಟು ಅಂಕ ಗಳಿಸಿದವರು ಬಿ.ಇಡಿ ವ್ಯಾಸಂಗಕ್ಕೆ ಅರ್ಹರು. ಈ ಅರ್ಹತೆ ಮೇಲೆಯೇ ಪಿಯುಸಿ­ಯಲ್ಲಿ ಕಡಿಮೆ ಅಂಕ ಗಳಿಸಿದವರೂ ಬಿ.ಇಡಿ ವ್ಯಾಸಂಗ ಮಾಡಿದ್ದಾರೆ.

ಟಿಇಟಿಗೆ  ಅರ್ಜಿ ಸಲ್ಲಿಸ­ಬೇಕಾದರೆ ಬಿ.ಇಡಿ  ಪದವೀಧ­ರರು ಪಿಯುಸಿ­ಯಲ್ಲಿ ಶೇ 50ರಷ್ಟು ಅಂಕ ಪಡೆದಿರಬೇಕು ಎಂಬುದನ್ನು ಕಡ್ಡಾಯ­ಗೊಳಿಸಲಾಗಿದೆ. ಪಿಯುಸಿ­ಯಲ್ಲಿ ಶೇ 50ಕ್ಕಿಂತ ಕಡಿಮೆ ಅಂಕ ಪಡೆದ ಅಭ್ಯರ್ಥಿಗಳ ಅರ್ಜಿಯನ್ನು ಅಂತರ್ಜಾಲ  ತಾಣ ಸ್ವೀಕರಿಸುತ್ತಿಲ್ಲ. ಬಿ.ಇಡಿ  ಕಲಿಯುವಾಗ ಇಲ್ಲದ ಮಾನದಂಡ ಈಗೇಕೆ’ ಎಂಬುದು ಅಭ್ಯರ್ಥಿ ದಶರಥ ಮಾದರ ಪ್ರಶ್ನೆ.

‘ಕರ್ನಾಟಕದ ಪ್ರಾಥಮಿಕ ಶಾಲಾ ಶಿಕ್ಷಕರ ಈ ಅರ್ಹತಾ ಪರೀಕ್ಷೆಯ ಪಠ್ಯಕ್ರಮದಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಇತಿಹಾಸ, ಭೂಗೋಳ, ಸಂಸ್ಕೃತಿಯ ವಿಷಯವೇ ಇಲ್ಲ. ರಾಜ್ಯ ಪಠ್ಯಕ್ರಮದ ಬದಲು, ಸಂಪೂರ್ಣವಾಗಿ ಎನ್‌ಸಿಇಆರ್‌ಟಿ ಪಠ್ಯಕ್ರಮ ಅಳವಡಿಸ­ಲಾಗಿದೆ. ಈ ಪಠ್ಯಪುಸ್ತಕ­ಗಳು ಇಂಗ್ಲಿಷ್‌ ಮಾಧ್ಯಮದಲ್ಲಿದ್ದು, ಕನ್ನಡ ಮಾಧ್ಯಮ­ದವರಿಗೆ ತೊಂದರೆಯಾಗುತ್ತದೆ’ ಎಂದು ಶ್ರೀನಿವಾಸ ಡೋಣೂರ ಹೇಳಿದರು.

‘ಇದು ನೇಮಕಾತಿ ಪರೀಕ್ಷೆ ಅಲ್ಲ. ಬರೀ ಅರ್ಹತಾ ಪರೀಕ್ಷೆ. ಸಾಮಾನ್ಯ ಅಭ್ಯರ್ಥಿಗಳಿಗೆ ಈ ಪರೀಕ್ಷೆಯ ಒಂದು ಪತ್ರಿಕೆಗೆ ₨500, ಎರಡೂ ಪತ್ರಿಕೆಗೆ ₨800 ಶುಲ್ಕ ನಿಗದಿ ಪಡಿಸಲಾಗಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಪ್ರಮಾಣ ಪತ್ರ ಪಡೆಯಲು ಮತ್ತೆ ₨200 ಪಾವತಿಸಬೇಕು. ಶುಲ್ಕ ಸಹ ದುಬಾರಿ’ ಎಂಬುದು ಅವರ ಆಕ್ಷೇಪ.


‘ಈ ಪರೀಕ್ಷೆಯನ್ನು ತರಾತುರಿಯಲ್ಲಿ ನಡೆಸ­ಲಾ­ಗು­ತ್ತಿದೆ. ನಮಗೆ ಸಿದ್ಧತೆಗೆ ಸಮಯಾವ­ಕಾ­ಶ­ವನ್ನೂ ನೀಡಿಲ್ಲ. ಜಾತಿ ಪ್ರಮಾಣ ಪತ್ರ ಪಡೆದು ಸಲ್ಲಿಸಲು ಕಾಲಾವಕಾಶ ಸಹ ಇಲ್ಲ’ ಎನ್ನುತ್ತಾರೆ ಇರ್ಫಾನ್‌ ಜಹಗೀರದಾರ.

‘ಬಿ.ಇಡಿ ಪೂರೈಸಿರುವ ಅಭ್ಯರ್ಥಿಗಳಿಗೆ ದ್ವಿತೀಯ ಪತ್ರಿಕೆಯಲ್ಲಿ ಶಿಶು ಮನೋವಿಜ್ಞಾನ ಮತ್ತು ವಿಕಸನ, ಕನ್ನಡ, ಇಂಗ್ಲಿಷ್‌, ಗಣಿತ, ಪರಿಸರ ಅಧ್ಯಯನ ವಿಷಯಗಳಿವೆ. ಆದರೆ, ಬಿ.ಪಿ.ಇಡಿ ಮತ್ತು ಹಿಂದಿಯಲ್ಲಿ ಬಿ.ಇಡಿ ಪೂರೈಸಿದವರಿಗೆ ಈ ಪರೀಕ್ಷೆಯಲ್ಲಿ ಆಯ್ಕೆಯ ವಿಷಯಗಳೇ ಇಲ್ಲ’ ಎಂದು ಇರ್ಫಾನ್‌ ಹೇಳಿದರು.

‘ಈ ಟಿಇಟಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ, ಪ್ರವರ್ಗ–1ರ ಅಭ್ಯರ್ಥಿಗಳು ಕನಿಷ್ಠ ಶೇ 55ರಷ್ಟು ಅಂಕ, ಉಳಿದವರು ಶೇ 60 ಅಂಕ ಪಡೆದರೆ ಅವರು ಶಿಕ್ಷಕರಾಗಲು ಅರ್ಹತೆ ಪಡೆಯಲಿದ್ದಾರೆ ಎಂದು ತಿಳಿಸಲಾಗಿದೆ. ಇಲ್ಲಿ ಅಂಕಗಳ ವಿಷಯದಲ್ಲಿ ಇತರೆ ಹಿಂದುಳಿದ ವರ್ಗಗಳವರಿಗೆ ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಒಂದೇ ಮಾನದಂಡ ಅನುಸರಿಸಿ­ರುವುದು ತಪ್ಪು’ ಎಂಬುದು ಅಭ್ಯರ್ಥಿ ವೆಂಕಟೇಶ ಬಿರಾದಾರ ಅವರ ಅಭಿಪ್ರಾಯ.

‘ಟಿಇಟಿ ಸಂಪೂರ್ಣ ಗೊಂದಲದಿಂದ ಕೂಡಿದೆ. ಪಿಯುಸಿಯಲ್ಲಿ ಕನಿಷ್ಠ ಅಂಕ ಪಡೆದಿರಬೇಕು ಎಂಬ ಷರತ್ತು ತೆಗೆದುಹಾಕಿ ಬಿ.ಇಡಿ ಪೂರೈಸಿರುವ ಎಲ್ಲರೂ ಈ ಅರ್ಹತಾ ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಬೇಕು. ಕನ್ನಡದಲ್ಲಿ ಮಾಹಿತಿ ಕೈಪಿಡಿ ನೀಡಿ,
ರಾಜ್ಯ ಸರ್ಕಾರದ ಪಠ್ಯಕ್ರಮದ ಅನ್ವಯವೇ ಪರೀಕ್ಷೆ ನಡೆಸಬೇಕು. ಇಲ್ಲದಿದ್ದರೆ ಅಭ್ಯರ್ಥಿಗಳೊಂದಿಗೆ ಹೋರಾಟ­ಕ್ಕಿಳಿಯುವುದು ಅನಿವಾರ್ಯ­ವಾಗು­ತ್ತದೆ’ ಎಂದು ಎನ್‌.ಎಂ. ಬಿರಾದಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT