ADVERTISEMENT

ಗೋ ಸಂರಕ್ಷಣೆ: ಸಮಾಜ ಜಾಗೃತಗೊಳ್ಳಲಿ

ಬೃಹತ್ ಗೋ ಸಮ್ಮೇಳನ ಉದ್ಘಾಟಿಸಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2015, 20:06 IST
Last Updated 4 ಅಕ್ಟೋಬರ್ 2015, 20:06 IST

ಉಡುಪಿ: ‘ಗೋ ಹತ್ಯೆ ನಿಷೇಧ ಕಾನೂನು ಜಾರಿಯಾಗುವುದರ ಜತೆಗೆ ಗೋ ಸಂರಕ್ಷಣೆಯ ಬಗ್ಗೆ ಸಮಾಜ ಜಾಗೃತವಾಗಬೇಕು’ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಕಾಣಿಯೂರು ಮಠದ ಆಶ್ರಯದಲ್ಲಿ ರಾಜಾಂಗಣದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಬೃಹತ್‌ ಗೋ ಸಮ್ಮೇಳನವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಎಲ್ಲಿ ಗೋ ಹತ್ಯೆ ನಡೆಯುತ್ತದೋ, ಅಲ್ಲಿ ಕಲಿ ಇದ್ದಾನೆ ಎಂದರ್ಥ. ಇವತ್ತು ಲಕ್ಷ ಲಕ್ಷ ಗೋವುಗಳ ಹತ್ಯೆ ನಡೆಯುತ್ತಿದ್ದು, ಕಲಿಗಳು ವಿಜೃಂಭಿಸುತ್ತಿದ್ದಾರೆ. ಕ್ರಿಮಿಕೀಟಗಳಿಗೂ ಬದುಕುವ ಹಕ್ಕಿದೆ ಎನ್ನುವ ಪರಿಸರ ತಜ್ಞರು, ಗೋವುಗಳ ನಿರಂತರ ಹತ್ಯೆ ನಡೆಯು
ತ್ತಿದ್ದರೂ ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಪರ್ಯಾಯ ಕಾಣಿಯೂರು ಮಠದ ವಿದ್ಯಾವಲ್ಲಭ ಸ್ವಾಮೀಜಿ ಮಾತನಾಡಿ, ಗೋ ಮಾತೆಯನ್ನು ಮನೆಯಲ್ಲಿ ಪೂಜಿಸುತ್ತೇವೆ. ಆದರೆ, ವಿದೇಶಗಳಿಗೆ ಗೋಮಾಂಸವನ್ನು ರಫ್ತು ಮಾಡಿ, ನಮ್ಮನ್ನು ನಾವು ಮೈಲಿಗೆ ಮಾಡಿಕೊಳ್ಳುತ್ತಿದ್ದೇವೆ.  ಇದು ಶೋಚನೀಯ ಸಂಗತಿ. ಕೇಸರೀಕರಣ ಮಾಡಲು ಅಥವಾ ಹಿಂದೂ ಸಮಾಜದ ಪ್ರತಿಬಿಂಬವಾಗಿ ಗೋ ಸಮ್ಮೇಳನವನ್ನು ಮಾಡಲಿಲ್ಲ. ಗೋ ಸಂರಕ್ಷಣೆ ಮಾಡುವ ಉದ್ದೇಶದಿಂದ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ ಮಾತನಾಡಿ, ಹಿಂದೆ ಕೂಡು ಕುಟುಂಬದ ಕಾಲದಲ್ಲಿ ಮನೆಗೊಂದರಂತೆ ಗೋವುಗಳನ್ನು ಸಾಕುತ್ತಿದ್ದರು. ಆದರೆ, ಇಂದು ಗೋವುಗಳ ಬಗ್ಗೆ ತೀರಾ ಅಸಡ್ಡೆ ಬೆಳೆದಿದೆ. ಮನೆಯೊಳಗೆ ದೇವರ ಮನೆ ಮತ್ತು ಹೊರಗೆ ದನದ ಕೊಟ್ಟಿಗೆ ಇದ್ದಾಗ ಮಾತ್ರ ಮನೆ ಪರಿಪೂರ್ಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕೃಷ್ಣಾಪುರ ಮಠದ ವಿದ್ಯಾಸಾಗರ ಸ್ವಾಮೀಜಿ ಮಾತನಾಡಿ, ಕ್ಷೀರ ಕಾಂತ್ರಿಯನ್ನು ಮಾಡುವ ನಿಟ್ಟಿನಲ್ಲಿ ನಮ್ಮ ದೇಶಿಯ ಗೋ ತಳಿಗಳ ವೈಶಿಷ್ಟ್ಯ ಮರೆಯಾಗುತ್ತಿದೆ. ಆದ್ದರಿಂದ ನಮ್ಮತನವನ್ನು ಬಿಟ್ಟುಕೊಡಬಾರದು ಎಂದು ತಿಳಿಸಿದರು.

ನಾಗಪುರ ಗೋವಿಜ್ಞಾನ ಅನುಸಂಧಾನ ಕೇಂದ್ರದ ನಿರ್ದೇಶಕ ಸುನಿಲ್‌ಮಾನ್‌ ಸಿಂಗ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.