ADVERTISEMENT

ಗ್ರಾಮ ದೇವತೆ ಜಾತ್ರೆ ನಿಲ್ಲಿಸಿದ ಗ್ರಾಮಸ್ಥರು!

ಕೊತ್ತಿಹಳ್ಳಿ; ದೇವರಿಗೆ ತಾವೇ ಪೂಜೆ ಮಾಡುವ ಅವಕಾಶಕ್ಕೆ ದಲಿತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ದಲಿತ ಕಾಲೊನಿ ನಿವಾಸಿಗಳು ತಹಶೀಲ್ದಾರ್ ಅವರಿಗೆ ವಿವರಣೆ ನೀಡಿದರು
ದಲಿತ ಕಾಲೊನಿ ನಿವಾಸಿಗಳು ತಹಶೀಲ್ದಾರ್ ಅವರಿಗೆ ವಿವರಣೆ ನೀಡಿದರು   
ತುಮಕೂರು:  ತಾಲ್ಲೂಕಿನ ಮಲ್ಲಸಂದ್ರ ಸಮೀಪದ ಕೊತ್ತಿಹಳ್ಳಿಯಲ್ಲಿ ಗ್ರಾಮ ದೇವತೆ ಕುಚ್ಚಂಗಿಯಮ್ಮ ಜಾತ್ರೆ ಸಂದರ್ಭದಲ್ಲಿ ದಲಿತ ಸಮುದಾಯದ ಕೆಲವರು ತಾವೇ ದೇವರಿಗೆ ಪೂಜೆ ಸಲ್ಲಿಸಲು ಮುಂದಾಗಿದ್ದಕ್ಕೆ ಜಾತ್ರೆಯನ್ನೇ ನಿಲ್ಲಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ದೇವಸ್ಥಾನಕ್ಕೆ ಬೀಗ ಹಾಕಿದ್ದು, ಆವರಣ ಭಣಗುಡುತ್ತಿದೆ.
 
‘ಇದೇ 19ರಿಂದ 21ರವರೆಗೆ ಜಾತ್ರೆ ನಡೆಯಬೇಕಿತ್ತು. 20 ರಂದು ಸಂಜೆ ಪೂಜೆ ಸಲ್ಲಿಸಲು ಹೋದಾಗ ಅರ್ಚಕ ಚಿಕ್ಕಣ್ಣ ದೇವಸ್ಥಾನದಿಂದ ಹೊರನಡೆದರು. ಇದನ್ನು ನಾವು ಪ್ರಶ್ನಿಸಿದೆವು. ಆಗ ಅಲ್ಲಿದ್ದ ಉಳಿದ ಸಮುದಾಯದ ಜನರೂ ಹೊರಟು ಹೋದರು.
 
ಸ್ವಲ್ಪ ಹೊತ್ತಿನ ಬಳಿಕ ದೇವಸ್ಥಾನಕ್ಕೆ ಹಾಕಿದ್ದ ವಿದ್ಯುತ್ ದೀಪಗಳು, ಧ್ವನಿವರ್ಧಕಗಳನ್ನು ತೆಗೆದರು. ಬಳಿಕ ಜಾತ್ರೆ ನಡೆಯಲಿಲ್ಲ’ ಎಂದು ದಲಿತ ಕಾಲೊನಿ ನಿವಾಸಿಗಳು ಗುರುವಾರ ಗ್ರಾಮಕ್ಕೆ ಭೇಟಿ ನೀಡಿದ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡಕ್ಕೆ ವಿವರಿಸಿದರು.
 
‘ಪ್ರತಿ ವರ್ಷದಂತೆ ಈ ವರ್ಷ ಹೊರಗಡೆ ನಿಂತು ಪೂಜೆ ಸಲ್ಲಿಸುವುದಿಲ್ಲ. ನಾವೇ ಪೂಜೆ ಮಾಡುತ್ತೇವೆ. ನಮ್ಮ ಓಣಿಯಲ್ಲೂ ಉತ್ಸವ ಮೂರ್ತಿ ಸಾಗಬೇಕು. ಮೆರವಣಿಗೆ, ಪೂಜೆಗೆ ತಗಲುವ ವೆಚ್ಚವನ್ನೂ ಭರಿಸುತ್ತೇವೆ ಎಂದು ಜಾತ್ರೆಗೆ ಮುನ್ನ ಡಿವೈಎಸ್ಪಿ ನಾಗರಾಜ್ ಅವರ ಸಮ್ಮುಖದಲ್ಲಿ ನಡೆದ ಶಾಂತಿ ಸಭೆಯಲ್ಲಿ ಹೇಳಿದ್ದೆವು.
 
ಇದಕ್ಕೆ ಗ್ರಾಮದ ಇತರ ಸಮುದಾಯದವರೂ ಒಪ್ಪಿದ್ದರು. ಸಹಕಾರ ನೀಡುವುದಾಗಿ ಸಹಿಯನ್ನೂ ಹಾಕಿದ್ದರು’ ಎಂದು ದಲಿತರು ಹೇಳುತ್ತಿದ್ದಾರೆ.
‘ಪೂಜೆಗೆ ಅವಕಾಶ ಮಾಡಿಕೊಡಬೇಕು ಎಂದು ದಲಿತರು ಹೇಳಿದಾಗ ನಾನೇ ಮೊದಲು ಒಪ್ಪಿ ಸಹಿ ಹಾಕಿದ್ದೆ.
 
ಮೊದಲ ದಿನ ಸರಿ ಇತ್ತು. ಎರಡನೇ  ದಿನ ಇದ್ದಕ್ಕಿದ್ದಂತೆ ಈ ಪರಿಸ್ಥಿತಿ ಸೃಷ್ಟಿಯಾಗಿಬಿಟ್ಟಿತು. ಕೆಲ ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳು ಇದಕ್ಕೆ ಕಾರಣ ಆಗಿರಬಹುದು’ ಎಂದು ಗ್ರಾಮದ ಮಾಗಡಿ ಮಂಜು ‘ಪ್ರಜಾವಾಣಿ’ ಜತೆ ಸಂಶಯ ವ್ಯಕ್ತಪಡಿಸಿದರು.
 
ಗ್ರಾಮದಲ್ಲಿ ದಲಿತರ (ಆದಿ ದ್ರಾವಿಡ) 45 ಕುಟುಂಬಗಳಿವೆ. ಒಕ್ಕಲಿಗರು, ಲಿಂಗಾಯಿತರು ಸೇರಿ ಇತರೆ ಸಮುದಾಯದ ಕುಟುಂಬಗಳು 150 ಇವೆ.
 
29ರಂದು ಗ್ರಾಮದಲ್ಲಿ ಶಾಂತಿ ಸಭೆ: ‘ಗ್ರಾಮದಲ್ಲಿ ಶಾಂತಿ ಇದೆ. ಮಾತುಕತೆ ಮೂಲಕ ಪರಸ್ಪರ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಮೇ 29ರಂದು ಶಾಂತಿ ಸಭೆ ನಡೆಸಲು ಉದ್ದೇಶಿಸಲಾಗಿದೆ’ ಎಂದು ತಹಶೀಲ್ದಾರ್ ರಂಗೇಗೌಡ ಮತ್ತು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ದೇವರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.