ADVERTISEMENT

ಗ್ರಾಮ ಪಂಚಾಯ್ತಿ ಚುನಾವಣೆ

5844 ಗ್ರಾಮ ಪಂಚಾಯ್ತಿಗಳಿಗೆ ಎರಡು ಹಂತದ ಮತದಾನ, ಜೂನ್‌ 5ಕ್ಕೆ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 5 ಮೇ 2015, 20:09 IST
Last Updated 5 ಮೇ 2015, 20:09 IST

ಬೆಂಗಳೂರು: ರಾಜ್ಯದ 5,844 ಗ್ರಾಮ ಪಂಚಾಯ್ತಿಗಳಿಗೆ ಇದೇ 29 ಹಾಗೂ ಜೂನ್‌ 2ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ರಾಜ್ಯ ಚುನಾವಣಾ ಆಯುಕ್ತ ಪಿ.ಎನ್‌. ಶ್ರೀನಿವಾಸಾಚಾರಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಮತ ಎಣಿಕೆ ಜೂನ್‌ 5ರಂದು ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದೆ. ಈ ಚುನಾವಣೆ ಪಕ್ಷದ ಚಿಹ್ನೆ ಮೇಲೆ ನಡೆಯುವುದಿಲ್ಲ. ಬದಲಿಗೆ, ಸ್ಥಳೀಯವಾಗಿಯೇ ಅಭ್ಯರ್ಥಿಗಳು ತಮಗೆ ಬೇಕಾದ ಚಿಹ್ನೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇರುತ್ತದೆ.

ಒಟ್ಟು 94,458 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ 2.81 ಕೋಟಿ ಮತದಾರರು ಮತದಾನ ಮಾಡಲಿದ್ದಾರೆ ಎಂದು ಅವರು ವಿವರಿಸಿದರು.

ಕಡ್ಡಾಯ ಮತದಾನ: ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯ್ತಿ ಚುನಾವಣೆಗೆ ಮತದಾನ ಕಡ್ಡಾಯ ಮಾಡಲಾಗಿದೆ. ಹೊಸ ತಿದ್ದುಪಡಿ ಪ್ರಕಾರ ಮಹಿಳಾ ಮೀಸಲಾತಿಯನ್ನು ಶೇಕಡ 50 ಮೀರದಂತೆ ನೋಡಿಕೊಳ್ಳಲಾಗಿದೆ.

ಇದರಿಂದಾಗಿ ಮಹಿಳೆಯರಿಗೆ ಮೀಸಲಾದ ಸ್ಥಾನಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ‘ನೋಟಾ’ (ಯಾವ ಅಭ್ಯರ್ಥಿಗೂ ನನ್ನ ಮತ ಇಲ್ಲ) ಮತದಾನಕ್ಕೆ ಅವಕಾಶ ಇರುವುದಿಲ್ಲ ಎಂದು ವಿವರಿಸಿದರು.

ಬೀದರ್‌ ಜಿಲ್ಲೆಯಲ್ಲಿ ಈ ಚುನಾವಣೆಗೆ ಮೊದಲ ಬಾರಿ ಎಲೆಕ್ಟ್ರಾನಿಕ್‌ ಮತ ಯಂತ್ರ ಬಳಸಲಾಗುತ್ತಿದೆ. ಅದರ ಯಶಸ್ಸು ನೋಡಿಕೊಂಡು ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸುವ ಉದ್ದೇಶ ಇದೆ ಎಂದರು.

ಆಗಸ್ಟ್‌ ನಂತರ ಅವಧಿ ಮುಗಿಯುವ,  ಮೇಲ್ದರ್ಜೆಗೇರಿರುವ ಹಾಗೂ ನ್ಯಾಯಾಲಯದ ತಡೆಯಾಜ್ಞೆ ಇರುವ 229 ಗ್ರಾಮ ಪಂಚಾಯ್ತಿಗಳಿಗೆ ಈಗ ಚುನಾವಣೆ ನಡೆಯುವುದಿಲ್ಲ. ಈ ಕ್ಷೇತ್ರಗಳ ಒಟ್ಟು ಸ್ಥಾನಗಳ ಸಂಖ್ಯೆ 5,523.

ಭದ್ರತೆ: ‌ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ವಿಭಾಗಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಎಲ್ಲೆಡೆ ಸೂಕ್ತ ಭದ್ರತೆ ಕೈಗೊಳ್ಳಲು ಸೂಚಿಸಲಾಗಿದೆ. ಮತದಾನ  ಬೆಳಿಗ್ಗೆ 7ರಿಂದ ಸಂಜೆ  5 ವರೆಗೆ ನಡೆಯಲಿದೆ.

10ರಿಂದ ನೀತಿ ಸಂಹಿತೆ
ಇದೇ 10ರಿಂದ ಜೂನ್‌ 7ವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಇದು ಕೇವಲ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಚುನಾವಣಾ ಆಯುಕ್ತ ಶ್ರೀನಿವಾಸಾಚಾರಿ ತಿಳಿಸಿದ್ದಾರೆ.

ಈ ಅವಧಿಯಲ್ಲಿ ಸರ್ಕಾರ ಯಾವುದೇ ಯೋಜನೆಗಳನ್ನು ಘೋಷಣೆ ಮಾಡುವಂತಿಲ್ಲ. ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆ, ನಗರಪಾಲಿಕೆ ಮತ್ತು ಮಹಾನಗರಪಾಲಿಕೆ ಪ್ರದೇಶಗಳಿಗೆ ನೀತಿ ಸಂಹಿತೆ ಅನ್ವಯವಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.