ADVERTISEMENT

ಘರ್ಷಣೆ: ವಾಹನ, ಅಂಗಡಿಗಳಿಗೆ ಬೆಂಕಿ

ಗಣೇಶ ಮೆರವಣಿಗೆ ವೇಳೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ, ರಾತ್ರಿಪೂರ್ತಿ ದಾಂದಲೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2015, 19:42 IST
Last Updated 24 ಸೆಪ್ಟೆಂಬರ್ 2015, 19:42 IST

ಮುಧೋಳ (ಬಾಗಲಕೋಟೆ):  ಗಲಭೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಜಮಖಂಡಿ ಉಪವಿಭಾಗದ ಡಿವಎಸ್‌ಪಿ ಎಚ್‌.ಡಿ. ಮುದರೆಡ್ಡಿ, ಮುಧೋಳದ ಇನ್ಸ್‌ಪೆಕ್ಟರ್‌ ಆರ್‌.ಕೆ. ಪಾಟೀಲ ಮತ್ತು ಸಬ್‌ಇನ್ಸ್‌ಪೆಕ್ಟರ್‌ ಡಿ.ಕೆ. ಪಾಟೀಲ ಸೇರಿದಂತೆ ಪೊಲೀಸ್‌ ಸಿಬ್ಬಂದಿ ಮೇಲೂ ಮೆರವಣಿಗೆಯಲ್ಲಿದ್ದವರು ಕಲ್ಲು ತೂರಿದ್ದರಿಂದ ಹಲವರಿಗೆ ಗಾಯಗಳಾಗಿವೆ.

‘ಲೋಕೋಪಯೋಗಿ ಇಲಾಖೆಯ ವಾಹನ ಚಾಲಕರೊಬ್ಬರ ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು ಅಡುಗೆ ಅನಿಲ ಸಿಲಿಂಡರ್‌, ವಾಷಿಂಗ್‌ಮಷಿನ್‌ ಮತ್ತಿತರರ ಬೆಲೆಬಾಳುವ ವಸ್ತುಗಳನ್ನು ಹೊತ್ತೊಯ್ದಿದ್ದಾರೆ. ಬಳಿಕ ಟೈರಿಗೆ ಬೆಂಕಿ ಹಚ್ಚಿ ಮನೆಯೊಳಗೆ ಎಸೆದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

‘ಮೈಮೇಲಿರುವ ಒಂದು ಜತೆ ಬಟ್ಟೆ ಬಿಟ್ಟರೆ ಇನ್ನೇನೂ ಉಳಿದಿಲ್ಲ. ಎಲ್ಲ ವಸ್ತುಗಳೂ ಸುಟ್ಟುಹೋಗಿವೆ. ಮಗಳ ಮದುವೆಗಾಗಿ ಖರೀದಿಸಿದ್ದ 11 ತೊಲ ಬಂಗಾರದ ಆಭರಣ, ಮಗನ ಪದವಿಯ ಪ್ರಮಾಣಪತ್ರಗಳು, ಮತ್ತಿತರರ ದಾಖಲೆಪತ್ರಗಳು ಸುಟ್ಟುಹೋಗಿವೆ’ ಎಂದು  ಸಂತ್ರಸ್ತ  ಮಹಿಳೆ ಕಣ್ಣೀರಿಟ್ಟಿರು.
ಬೆಂಕಿ ಆರಿಸಲು ಬಂದ ಅಗ್ನಿಶಾಮಕ ವಾಹನಗಳನ್ನು ತಡೆದು, ಸಿಬ್ಬಂದಿ ಮೇಲೆ ಕಲ್ಲು ತೂರಿ, ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಲಾಯಿತು. ಪೊಲೀಸರ ಮೇಲೂ ಕಲ್ಲು ತೂರಿದ್ದರಿಂದ ಅವರೂ ಅನಾಹುತ ತಡೆಯಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಜನತಾ ಕಾಲೋನಿಯಲ್ಲಿನ ದಾಂದಲೆ ನಂತರ ದುಷ್ಕರ್ಮಿಗಳು ರಾತ್ರಿಯಿಡೀ ಪಟ್ಟಣದ ವಿವಿಧೆಡೆ ದಾಂದಲೆ ನಡೆಸಿದ್ದಾರೆ. ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತ, ಬಸ್‌ ನಿಲ್ದಾಣ ಸಮೀಪದ ಉತ್ತೂರು ಗೇಟ್, ಗಾಂಧಿ ಚೌಕ್‌ ಮತ್ತು ಎಂ.ಜಿ. ರಸ್ತೆಯಲ್ಲಿರುವ ಮನೆ, ಅಂಗಡಿ, ಗ್ಯಾರೇಜ್‌, ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳು, ತಳ್ಳುಗಾಡಿಗಳಿಗೆ ಕಲ್ಲುತೂರಿ, ಬೆಂಕಿ ಹಚ್ಚಿದ್ದಾರೆ.

ಬಟ್ಟೆ ಅಂಗಡಿ ಭಸ್ಮ: ಎಂ.ಜಿ. ರಸ್ತೆಯಲ್ಲಿರುವ ನಾಲ್ಕು ಅಂತಸ್ತಿನ ಬೃಹತ್‌ ಬಟ್ಟೆ ಅಂಗಡಿಗೆ ಬೆಂಕಿ ಹಚ್ಚಿದ ಪರಿಣಾಮ ಅಂದಾಜು ₹1 ಕೋಟಿಗೂ ಅಧಿಕ ಮೌಲ್ಯದ ಬಟ್ಟೆಗಳು ಸುಟ್ಟು ಭಸ್ಮವಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ಗುರುವಾರ ಮಧ್ಯಾಹ್ನದವರೆಗೂ ಬೆಂಕಿ ಆರಿಸಲು ಹರಸಾಹಸ ಪಟ್ಟರು. ಆದರೆ ಇಡೀ ಕಟ್ಟಡಕ್ಕೆ ತೀವ್ರ ಹಾನಿಯಾಗಿದ್ದು ಯಾವುದೇ ಕ್ಷಣದಲ್ಲಿ ಬೀಳುವ ಸಾಧ್ಯತೆ ಇರುವುದರಿಂದ ಅಕ್ಕಪಕ್ಕದ ಅಂಗಡಿ, ಮನೆಗಳಿಗೂ ತೊಂದರೆಯಾಗುವ ಸಂಭವವಿದೆ ಎಂದು ಅಗ್ನಿ ಶಾಮಕ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪೊಲೀಸ್ ಭದ್ರತೆ: ‘ದುಷ್ಕೃತ್ಯದಿಂದ ನಲುಗಿಹೋಗಿರುವ ಮುಧೋಳ ಪಟ್ಟಣಕ್ಕೆ ಬಾಗಲಕೋಟೆ, ಗದಗ, ಬೆಳಗಾವಿ ಮತ್ತು ವಿಜಯಪುರದಿಂದ ಹೆಚ್ಚುವರಿ ಪೊಲೀಸರನ್ನು ಕರೆಯಿಸಲಾಗಿದ್ದು, ಪರಿಸ್ಥಿತಿ ಸದ್ಯ ನಿಯಂತ್ರಣದಲ್ಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಳಗಾವಿ ಉತ್ತರ ವಲಯ ಐಜಿಪಿ ಉಮೇಶ ಕುಮಾರ್‌, ಬಾಗಲಕೋಟೆ, ಗದಗ, ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು 300ಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿಯೊಂದಿಗೆ ಮುಧೋಳದಲ್ಲೇ ಬೀಡುಬಿಟ್ಟಿದ್ದಾರೆ. ಪಟ್ಟಣದಲ್ಲಿ ಗುರುವಾರ ಅಂಗಡಿ, ಮುಂಗಟ್ಟುಗಳು ಬಂದ್‌ ಆಗಿದ್ದವು. ಶಾಲಾ–ಕಾಲೇಜುಗಳೂ ತೆರೆಯಲಿಲ್ಲ. ಬಸ್‌ ಸೇರಿದಂತೆ ವಾಹನಗಳ ಸಂಚಾರ ಯಥಾಸ್ಥಿತಿಯಲ್ಲಿತ್ತು.

ಪೊಲೀಸ್‌ ವೈಫಲ್ಯ: ಗುಂಪು–ಘರ್ಷಣೆಗೆ ಪೊಲೀಸ್‌ ಇಲಾಖೆಯ ಅಸಮರ್ಥತೆ ಮತ್ತು ನಿಷ್ಕ್ರಿಯತೆಯೇ ಕಾರಣ ಎಂದು ಶಾಸಕ ಗೋವಿಂದ ಕಾರಜೋಳ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಶಿಫಾರಸಿನಿಂದ ಮುಧೋಳಕ್ಕೆ ಬಂದಿರುವ ಕೆಲ ಪೊಲೀಸ್‌ ಅಧಿಕಾರಿಗಳು ಸಮರ್ಥವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿಲ್ಲ ಎಂದು ದೂರಿದರು. ಯಾವುದೇ ರಾಜಕೀಯ ಶಿಫಾರಸನ್ನು ಪರಿಗಣಿಸದೆ ಸಮರ್ಥ ಅಧಿಕಾರಿಗಳನ್ನು ತುರ್ತಾಗಿ ನಿಯೋಜಿಸಿ, ಸಮಾಜದಲ್ಲಿ ಶಾಂತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ಅವರು ಆಗ್ರಹಿಸಿದರು. 

ಘಟನೆ ವಿವರ: ಮುಧೋಳ ಪಟ್ಟಣದಲ್ಲಿ ಕಳೆದ ಜುಲೈನಲ್ಲಿ ನಡೆದ ದ್ಯಾಮವ್ವ, ದುರ್ಗವ್ವ ಜಾತ್ರೆ ಮೆರವಣಿಗೆ ಸಂದರ್ಭದಲ್ಲಿ ಮೈಮೇಲೆ ಗುಲಾಲ್‌ ಎರಚಿದರು ಎಂಬ ಕಾರಣಕ್ಕೆ ಯುವಕನೊಬ್ಬನಿಗೆ ವ್ಯಕ್ತಿಯೊಬ್ಬ ಚೂರಿಯಿಂದ ಇರಿದುದರಿಂದ ಗಲಾಟೆ ನಡೆದಿತ್ತು. ಪೊಲೀಸರ ಮಧ್ಯಸ್ಥಿಕೆಯಲ್ಲಿ ಘಟನೆ ಅಲ್ಲಿಗೇ ಕೊನೆಗೊಂಡಿತ್ತು. ಇದೇ ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಗುಂಪೊಂದು ಬುಧವಾರ ಸೇಡು ತೀರಿಸಿಕೊಂಡಿದೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

ಜತೆಗೆ ಜನತಾ ಕಾಲೋನಿಯಲ್ಲಿರುವ ಪ್ರಾರ್ಥನಾ ಮಂದಿರದ ಸಮೀಪ ವಾರದ ಈಚೆಗೆ ಒಂದು ಗುಂಪಿನ ಕಾರ್ಯಕರ್ತರು ನಾಮಫಲಕವೊಂದನ್ನು ಅಳವಡಿಸಿದ್ದರು. ಇದಕ್ಕೆ ಪ್ರತಿಯಾಗಿ ಇನ್ನೊಂದು ಗುಂಪು  ಪ್ರತಿಯಾಗಿ ಮತ್ತೊಂದು ನಾಮಫಲಕವನ್ನು ಅಳವಡಿಸಿತ್ತು. ಈ ನಾಮಫಲಕ ಅಳವಡಿಕೆಯು ಎರಡು ಗುಂಪುಗಳಲ್ಲಿ ಸಾಕಷ್ಟು ವೈಷಮ್ಯಕ್ಕೆ ಕಾರಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇದರ ಜತೆಗೆ ಜನತಾ ಕಾಲೋನಿಯ ರಸ್ತೆಯಲ್ಲಿ ಸಂಚರಿಸುವ ಒಂದು ಗುಂಪಿನ ಯುವತಿಯರು ಮತ್ತು ಮಹಿಳೆಯರಿಗೆ ಮತ್ತೊಂದು ಗುಂಪಿನ  ಯುವಕರು ಚುಡಾಯಿಸುತ್ತಿದ್ದ ಕಾರಣವೂ ಬುಧವಾರದ ಘಟನೆಗೆ ಕಾರಣವಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.