ADVERTISEMENT

ಚಾಕ್ಲೇಟ್‌ ತಯಾರಿಕೆಗೆ ಹಲಸಿನ ಬೀಜ

ಸಾವೊ ಪಾವ್ಲೊ ವಿ.ವಿಯ ಸಂಶೋಧನೆ

ಐಎಎನ್ಎಸ್
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST

ಬೆಂಗಳೂರು: ಚಾಕ್ಲೇಟ್‌ನಲ್ಲಿ ಪ್ರಮುಖವಾಗಿ ಬಳಸುವ ಕೋಕೊ ಬೀಜಗಳಿಗೆ ಹಲಸಿನ ಬೀಜ ಅತ್ಯಂತ ಅಗ್ಗದ ಪರ್ಯಾಯವಾಗಿದೆ ಎಂದು ಸಂಶೋಧನೆಯೊಂದು ಹೇಳಿದೆ.

ಜಗತ್ತಿನಾದ್ಯಂತ ಚಾಕ್ಲೇಟ್‌ಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಆದರೆ ಆ ಪ್ರಮಾಣದಲ್ಲಿ ಕೋಕೊ ಬೀಜದ ಉತ್ಪಾದನೆ ಹೆಚ್ಚುತ್ತಿಲ್ಲ. ಹಾಗಾಗಿ ಚಾಕ್ಲೇಟ್‌ಗೆ ಹಲಸಿನ ಬೀಜ ಬಳಸುವ ಬಗ್ಗೆ ಚಿಂತನೆ ನಡೆದಿದೆ.

ಉಷ್ಣವಲಯದ ದೇಶಗಳಲ್ಲಿ ಹಲಸಿನ ಮರಗಳು ಬೆಳೆಯುತ್ತವೆ. ಭಾರತ ಸೇರಿ ಹಲವು ದೇಶಗಳಲ್ಲಿ ಹಲಸಿನ ಬೀಜವನ್ನು ಬೇಯಿಸಿ ತಿನ್ನುವ ಅಭ್ಯಾಸ ಇದೆ. ಹಾಗಿದ್ದರೂ ಹಲಸಿನ ಬೀಜವನ್ನು ವ್ಯರ್ಥವಾಗಿ ಚೆಲ್ಲುವುದೇ ಹೆಚ್ಚು. ಕೋಕೊ ಬೀಜದಲ್ಲಿರುವ ಹಲವು ಅಂಶಗಳು ಹಲಸಿನ ಬೀಜದಲ್ಲಿಯೂ ಇವೆ. ಸಂಸ್ಕರಿಸಿದಾಗ ಕೋಕೊ ಬೀಜದ ರೀತಿಯ ಪರಿಮಳವನ್ನೇ ಹಲಸಿನ ಬೀಜವೂ ನೀಡುತ್ತದೆ ಎಂದು ಬ್ರೆಜಿಲ್‌ನ ಸಾವೊ ಪಾವ್ಲೊ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ.

ADVERTISEMENT

ಹಲಸಿನ ಹಣ್ಣಿನ ಬೀಜವನ್ನು ಆಮ್ಲೀಕರಿಸಿ, ಒಣಗಿಸಿ ನಂತರ ಹಲವು ಬಾರಿ ವಿವಿಧ ಉಷ್ಣತೆಯಲ್ಲಿ ಹುರಿಯಲಾಗಿದೆ. ಚಾಕ್ಲೇಟ್‌ ತಯಾರಿಕೆಗೆ ಬಳಸುವ ಕೋಕೊ ಬೀಜವನ್ನು ಸಂಸ್ಕರಿಸುವ ರೀತಿಯಲ್ಲಿಯೇ ಹಲಸಿನ ಬೀಜವನ್ನೂ ಸಂಸ್ಕರಿಸಲಾಗಿದೆ. ಎರಡರಲ್ಲೂ ಒಂದೇ ರೀತಿಯ ಫಲಿತಾಂಶ ಬಂದಿದೆ.

ಚಾಕ್ಲೇಟ್‌ಗೆ ವಿಶಿಷ್ಟ ರುಚಿ ಮತ್ತು ಪರಿಮಳ ನೀಡುವ ಕ್ಯಾರಮೆಲ್‌ ಮತ್ತು ಹಣ್ಣಿನ ಅಂಶಗಳು ಹಲಸಿನ ಬೀಜದಲ್ಲಿಯೂ ಇವೆ.
ವ್ಯರ್ಥವಾಗುವ ಹಲಸಿನ ಬೀಜವನ್ನು ಹಿಟ್ಟಾಗಿ ಪರಿವರ್ತಿಸಿ ಬಳಸುವ ಹಲವು ಪ್ರಯತ್ನಗಳು ನಡೆದಿವೆ. ಆದರೆ ಅದನ್ನು ಚಾಕ್ಲೇಟ್‌ ತಯಾರಿಸಲು ಬಳಸಬಹುದು ಎಂಬುದು ಹೊಸ ತಿಳಿವಳಿಕೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಭಾರಿ ಪ್ರಮಾಣದಲ್ಲಿ ಲಭ್ಯ ಇರುವ ಹಲಸಿನ ಹಣ್ಣಿನ ಬೀಜ ಕೋಕೊ ಬೀಜಕ್ಕೆ ಪರ್ಯಾಯವಾಗಿ ಬಳಕೆಯಾಗುವ ದಿನಗಳು ದೂರವಿಲ್ಲ ಎಂದು  ಹೇಳಿದ್ದಾರೆ.

ಅಂಕಿಅಂಶ ಕೋಟಿಗಳಲ್ಲಿ

* 3.7ಕ್ವಿಂಟಲ್‌ ಈಗಿನ ಕೋಕೊ ಉತ್ಪಾದನೆ

* 4.5ಕ್ವಿಂಟಲ್‌ 2020ರ ಹೊತ್ತಿಗೆ ಕೋಕೊ ಬೀಜದ ಬೇಡಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.