ADVERTISEMENT

ಚಿನ್ನದ ನಾಣ್ಯ ವಿಜೇತರಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 19:30 IST
Last Updated 20 ಜುಲೈ 2017, 19:30 IST
ಚಿನ್ನದ ನಾಣ್ಯ ವಿಜೇತರಿಗೆ ಅಭಿನಂದನೆ
ಚಿನ್ನದ ನಾಣ್ಯ ವಿಜೇತರಿಗೆ ಅಭಿನಂದನೆ   

ಬೆಂಗಳೂರು: ‘ಪ್ರಜಾವಾಣಿ’ ಬಳಗದಿಂದ ನಡೆಸಿದ ‘ಯಾರಿವರು, ಹೇಳಿ ಗೆಲ್ಲಿ ಚಿನ್ನದ ನಾಣ್ಯ’ ಸ್ಪರ್ಧೆಗೆ ಓದುಗರಿಂದ ಅತ್ಯದ್ಭುತ ಎನ್ನುವಂತಹ ಪ್ರತಿಕ್ರಿಯೆಯೇ ಸಿಕ್ಕಿದೆ. ಸಾಹಿತ್ಯ, ಕಲೆ, ಕ್ರೀಡೆ, ಸಿನಿಮಾ ಇವೇ ಮೊದಲಾದ ಕ್ಷೇತ್ರಗಳ ಸಾಧಕರನ್ನು ಗುರುತಿಸುವ ಸವಾಲು ಹೊಂದಿದ್ದ ಈ ಸ್ಪರ್ಧೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರ ಸಾವಿರ ಸಂಖ್ಯೆಯಲ್ಲಿ ಜನ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.

ಬಹುತೇಕ ಓದುಗರು ಸರಿಯಾದ ಉತ್ತರವನ್ನೇ ನೀಡಿ ಜಾಣತನ ಮೆರೆದಿದ್ದರೂ ಅದೃಷ್ಟ ಒಲಿದಿದ್ದು 101 ಜನರಿಗೆ. ಅವರಲ್ಲಿ ನೂರು ಜನರಿಗೆ ತಲಾ ಒಂದು ಗ್ರಾಂ ತೂಕದ ಚಿನ್ನದ ನಾಣ್ಯ ಸಿಕ್ಕರೆ, ಶಿವಮೊಗ್ಗ ಜಿಲ್ಲೆಯ ಹೊಸನಗರದ ಪೂರ್ಣಿಮಾ ಗುರುದೇವ್‌ ಭಂಡಾರಕರ್‌ ಅವರಿಗೆ 10 ಗ್ರಾಂ ತೂಕದ ಚಿನ್ನದ ನಾಣ್ಯ ಬಂಪರ್‌ ಬಹುಮಾನವಾಗಿ ಒಲಿದಿದೆ. ಎಲ್ಲ ವಿಜೇತರಿಗೂ ‘ಪ್ರಜಾವಾಣಿ’  ಬಳಗದಿಂದ ಹೃತ್ಪೂರ್ವಕ ಅಭಿನಂದನೆಗಳು.

ಬಂಪರ್‌ ಬಹುಮಾನ ಗೆದ್ದ ಪೂರ್ಣಿಮಾ ಅವರು ಕೆನರಾ ಬ್ಯಾಂಕ್‌ನ ಹೊಸನಗರ ಶಾಖೆಯಲ್ಲಿ ಉದ್ಯೋಗಿ. ‘ಪ್ರಜಾವಾಣಿ’ ಓದುತ್ತಲೇ ನಾನು ಬೆಳೆದಿರುವೆ. ಇದೇ ಪತ್ರಿಕಾ ಬಳಗದ ‘ಮಯೂರ’, ‘ಸುಧಾ’ ಕೂಡ ನಮ್ಮ ಮನೆಯ ಕಾಯಂ ಅತಿಥಿಗಳು. ಇಂಟರ್ನೆಟ್‌ನ ಪರಿಚಯವೇ ಇಲ್ಲದಿದ್ದ ದಿನಗಳಿಂದಲೂ ನಮ್ಮ ಅರಿವನ್ನು ವಿಸ್ತರಿಸುತ್ತಾ ಬಂದಿದ್ದು ಈ ಪತ್ರಿಕೆ’ ಎಂದು ಅವರು ಹೇಳುತ್ತಾರೆ. ನೆಚ್ಚಿನ ಪತ್ರಿಕೆಯಿಂದ ಚಿನ್ನದ ನಾಣ್ಯ ಸಿಕ್ಕ ಖುಷಿ ಅವರಲ್ಲಿ ತುಂಬಿದೆ.

ADVERTISEMENT

‘ಜೂನ್‌ 15 ರಿಂದ ಜುಲೈ 10ರವರೆಗೆ ನಡೆದ ಈ ಸ್ಪರ್ಧೆಯಲ್ಲಿ ನಾನು ಕುತೂಹಲದಿಂದ ಪಾಲ್ಗೊಂಡಿದ್ದೆ’ ಎಂದು ಅವರು ಸಂತಸದಿಂದ ಹೇಳಿದರು.

‘ನನಗೆ ಗೊತ್ತಿರುವ ಬಹುತೇಕ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗುವ ಸಲುವಾಗಿ  ‘ಪ್ರಜಾವಾಣಿ’ಯನ್ನು ತಪ್ಪದೇ ಓದುತ್ತಾರೆ. ನನ್ನ ಮಗಳು ನಿಖಿತಾ ಸಹ ಇದೇ ಪತ್ರಿಕೆ ಓದಿ ಬೆಳೆದವಳು. ಅವಳಿಗೆ ಹಲವು ಪ್ರಶಸ್ತಿಗಳು ಬಂದಿವೆ. ಅವಳ ಯಶಸ್ಸಿನಲ್ಲಿ ಪತ್ರಿಕೆಯ ಓದಿನದ್ದೇ ಸಿಂಹಪಾಲು’ ಎಂದು ವಿವರಿಸುತ್ತಾರೆ.

‘ಈಗಿನ ದಿನಗಳಲ್ಲಿ ಜಗತ್ತಿನ ವಿದ್ಯಮಾನವೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಆ ಕ್ಷಣವೇ ಚರ್ಚೆಯಾಗುತ್ತಿದ್ದರೂ ಟಿ.ವಿ. ಪ್ರಭಾವ ಹೆಚ್ಚಾಗಿದ್ದರೂ ನೋಡಿದ್ದು, ಕೇಳಿದ್ದರಲ್ಲಿ ನಿಜ ಎಷ್ಟು ಎಂಬುದನ್ನು ಅರಿಯಲು ಪತ್ರಿಕೆ ಬೇಕೇಬೇಕು. ನಾವು ಬೇರೆ ಮೂಲಗಳಿಂದ ಪಡೆದ ಮಾಹಿತಿಗೆ ‘ಹೌದು, ಅದು ಅಧಿಕೃತ’ ಎಂಬ ಮೊಹರು ಒತ್ತುವುದು ಪತ್ರಿಕೆಯ ವರದಿಗಳು’ ಎಂದು ವಿಶ್ಲೇಷಿಸುತ್ತಾರೆ. ‘ಹೊಸ ಪೀಳಿಗೆ ಓದುವ ಪ್ರಕ್ರಿಯೆಯಲ್ಲಿ ಹೆಚ್ಚೆಚ್ಚು ತೊಡಗಿಕೊಳ್ಳಬೇಕು’ ಎಂದೂ ಅಪೇಕ್ಷಿಸುತ್ತಾರೆ. ಹೌದು, ಇದು ಪೂರ್ಣಿಮಾ ಅವರೊಬ್ಬರ ಅಭಿಪ್ರಾಯ ಮಾತ್ರವಾಗಿರದೆ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲರ ಅಭಿಮತವೂ ಆಗಿದೆ ಎನ್ನುವುದು ನಮಗೆ ಗೊತ್ತು.

ಅಂದಹಾಗೆ, ವಿಜೇತರಿಗೆಲ್ಲ ಪ್ರಶ್ನೆಯೊಂದು ಕಾಡುತ್ತಿದೆ. ‘ಚಿನ್ನದ ನಾಣ್ಯ ನಮಗೆ ಯಾವಾಗ ಮತ್ತು ಎಲ್ಲಿ ಸಿಗಲಿದೆ’ ಎನ್ನುವುದೇ ಆ ಪ್ರಶ್ನೆ. ಚಿಂತೆಬೇಡ, ಸದ್ಯದಲ್ಲೇ ‘ಪ್ರಜಾವಾಣಿ’ ಬಳಗದಿಂದ ನಿಮಗೆಲ್ಲ ಆ ಮಾಹಿತಿ ನೀಡಲು ಕರೆ ಬರಲಿದೆ.

ಪ್ರಜಾವಾಣಿಯು ಇನ್ನೂ ಹೆಚ್ಚು ಸ್ಪರ್ಧೆಗಳನ್ನು ಏರ್ಪಡಿಸುವ ಸಾಧ್ಯತೆ ಇದೆ. ಓದುಗರು ಇದರಲ್ಲಿ ಪಾಲ್ಗೊಂಡು ಅದೃಷ್ಟಶಾಲಿಗಳಾಗಬಹುದು.
‘ಯಾರಿವರು, ಹೇಳಿ ಗೆಲ್ಲಿ ಚಿನ್ನದ ನಾಣ್ಯ’ ಸ್ಪರ್ಧೆಯಲ್ಲಿ ಪಾಲ್ಗೊಂಡವರಿಗೂ ವಿಜೇತರಿಗೂ ಮತ್ತೊಮ್ಮೆ ಅಭಿನಂದನೆಗಳು. ಪತ್ರಿಕೆ ಮೇಲಿನ ನಿಮ್ಮ ಪ್ರೀತಿ ಹೀಗೇ ಇರಲಿ ಎಂಬುದು ನಮ್ಮ ಮನವಿ.

ಪೂರ್ಣಿಮಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.