ADVERTISEMENT

ಚುನಾವಣೆ: ಹೆಚ್ಚುವರಿ ಸಿಕ್ಕಿದ್ದು ಬರೀ 23 ದಿನ

ಬಿಬಿಎಂಪಿ: ಆಗಸ್ಟ್‌ 28ರವರೆಗಷ್ಟೇ ಕಾಲಾವಕಾಶ

​ಪ್ರಜಾವಾಣಿ ವಾರ್ತೆ
Published 4 ಜುಲೈ 2015, 20:22 IST
Last Updated 4 ಜುಲೈ 2015, 20:22 IST

ಬೆಂಗಳೂರು/ ನವದೆಹಲಿ: ಬಿಬಿಎಂಪಿ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್‌, ಕರ್ನಾಟಕ ಸರ್ಕಾರಕ್ಕೆ ಜುಲೈ 3 ರಿಂದ ಅನ್ವಯವಾಗುವಂತೆ ಎಂಟು ವಾರಗಳ ಕಾಲಾವಕಾಶ ನೀಡಿದೆ. ಹೀಗಾಗಿ ಆಗಸ್ಟ್‌ 28ರೊಳಗೆ ಚುನಾವಣೆ ನಡೆಸಲೇ  ಬೇಕಿದೆ.

ಅದು ಈ ಮುನ್ನ  ಮೇ 5ರಂದು ನೀಡಿದ ತೀರ್ಪಿನಲ್ಲಿ  ಆಗಸ್ಟ್‌ 5ರ ಒಳಗೆ  ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಿತ್ತು. ಈಗಿನ ಆದೇಶದ ಪ್ರಕಾರ  ಹೆಚ್ಚುವರಿಯಾಗಿ ಬರೀ 23 ದಿನ  ಕಾಲಾವಕಾಶ ಸಿಕ್ಕಂತೆ ಆಗಿದೆ. ಆದರೆ, ಚುನಾವಣೆಗೆ ಇನ್ನೂ ಮೂರು ತಿಂಗಳು ಸಮಯಾವಕಾಶ ವಿಸ್ತರಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿತ್ತು.

ಮುಖ್ಯ ನ್ಯಾಯಮೂರ್ತಿ ಎಚ್‌.ಎಲ್‌. ದತ್ತು ನೇತೃತ್ವದ ತ್ರಿಸದಸ್ಯ ಪೀಠ ನೀಡಿದ ಎಂಟು ವಾರದ ಕಾಲಾವಕಾಶ ಶುಕ್ರವಾರದಿಂದಲೇ ಜಾರಿಗೆ ಬಂದಿದೆ. 2011ರ ಜನಗಣತಿ ಅನ್ವಯ ವಾರ್ಡುಗಳನ್ನು ಪುನರ್‌ ವಿಂಗಡಿಸಿ, ಮೀಸಲಾತಿ ನಿಗದಿ ಪಡಿಸಲು ಹೆಚ್ಚುವರಿ ಸಮಯಾವಕಾಶದ ಅಗತ್ಯವಿದೆ ಎಂಬ ರಾಜ್ಯ ಸರ್ಕಾರದ ಕೋರಿಕೆಯನ್ನು ಪೀಠ ತಳ್ಳಿ ಹಾಕಿದೆ. ವಾರ್ಡುಗಳ ಪುನರ್‌ವಿಂಗಡಣೆ ಮಾಡುವಂತಿಲ್ಲ ಎಂದು ನಿರ್ದೇಶನ ನೀಡಿದೆ.

ವೇಳಾಪಟ್ಟಿ ವಾಪಸ್‌: ಈ ನಡುವೆ,   ರಾಜ್ಯ ಚುನಾವಣಾ ಆಯೋಗವು ಪಾಲಿಕೆ ಚುನಾವಣೆಗಾಗಿ ಹೊರಡಿಸಿದ್ದ ವೇಳಾಪಟ್ಟಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದಿದೆ.  ಅಂತೆಯೇ ಮಾದರಿ ನೀತಿ ಸಂಹಿತೆಯನ್ನು ಸಹ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿದೆ. ಕೋರ್ಟ್‌ನ ತೀರ್ಪಿನ ಪ್ರಕಾರ ನಿಗದಿಪಡಿಸಿದ ಕಾಲಮಿತಿಯೊಳಗೆ ಚುನಾವಣೆ ನಡೆಸಲು ವೇಳಾಪಟ್ಟಿಯನ್ನು ನಂತರ ಹೊರಡಿಸಲಾಗುವುದು ಎಂದು ಆಯೋಗದ ಪ್ರಕಟಣೆ ತಿಳಿಸಿದೆ.

ನಿಂದನೆಯಾದೀತು: ‘ಚುನಾವಣೆ ನಡೆಸಲು ಮಾತ್ರ ರಾಜ್ಯ ಸರ್ಕಾರಕ್ಕೆ ಚುನಾವಣಾ ಆಯೋಗ ಕಾಲಾವಕಾಶ ನೀಡಿದೆ. ಅದು ಬಿಟ್ಟು ಬಿಬಿಎಂಪಿ ವಿಭಜನೆಗೆ ಅಲ್ಲ. ಒಂದು ವೇಳೆ ವಿಭಜನೆ ಪ್ರಕ್ರಿಯೆ ನಡೆಸಿದರೆ ನ್ಯಾಯಾಂಗದ ನಿಂದನೆ ಆಗುತ್ತದೆ’ ಎಂದು ಚುನಾವಣಾ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಸಂಸದ ರಾಜೀವ್‌ ಚಂದ್ರಶೇಖರ್‌ ಎಚ್ಚರಿಸಿದ್ದಾರೆ.

‘ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಕೆಲವು ಸಚಿವರ ವಿಭಜನೆ ಪ್ರಯತ್ನ ನೋಡಿದಾಗ ಅಚ್ಚರಿಯಾಗುತ್ತಿದೆ. ರಾಜಕೀಯ ಹಿತಾಸಕ್ತಿಗಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ರಾಜೀವ್‌ ಚಂದ್ರಶೇಖರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗ ನೀತಿ ಸಂಹಿತೆಯನ್ನು ವಾಪಸ್‌ ಪಡೆಯಬಾರದು. ಆದಷ್ಟು ಬೇಗನೆ ಹೊಸ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
*
ತೀರ್ಪಿನಿಂದ ಪ್ರಯೋಜನವಿಲ್ಲ
‘ಕೋರ್ಟ್‌ ತೀರ್ಪು ನೋಡಿ, ಆಗಸ್ಟ್‌ 5ರಿಂದ ಅನ್ವಯವಾಗುವಂತೆ  ಎರಡು ತಿಂಗಳ ಕಾಲಾವಕಾಶ ಸಿಕ್ಕಿದೆ ಎಂದು ನಾವೆಲ್ಲ ಭಾವಿಸಿದ್ದೆವು. ಈಗ ಹೆಚ್ಚುವರಿಯಾಗಿ ಒಂದು ತಿಂಗಳಷ್ಟೇ  ಸಿಕ್ಕಿದೆ. ಇದರಿಂದ ಏನು ಪ್ರಯೋಜನ? ಇದರ ಬದಲು ಚುನಾವಣೆಯನ್ನೇ  ನಡೆಸಬಹುದಿತ್ತು. ನಾವೆಲ್ಲ ಅದಕ್ಕೆ ಸಿದ್ಧವಾಗಿದ್ದೆವು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
*
ಸುಪ್ರೀಂ ಕೋರ್ಟ್‌ ಆದೇಶದ ಪ್ರತಿ ಶನಿವಾರ ಸಿಕ್ಕಿದೆ. ಅದರ ಪ್ರಕಾರ ಎಂಟು ವಾರಗಳಲ್ಲಿ ಚುನಾವಣೆ ನಡೆಸಬೇಕಿದೆ.
-ಪಿ.ಎನ್‌. ಶ್ರೀನಿವಾಸಾಚಾರಿ,
ರಾಜ್ಯ ಚುನಾವಣಾ ಆಯುಕ್ತ

*
ಬಿಬಿಎಂಪಿ ವಿಭಜನೆ ಸಂಬಂಧ ರಚಿಸಿರುವ ಇಬ್ಬರು ನಿವೃತ್ತ ಐಎಎಸ್‌ ಅಧಿಕಾರಿಗಳ ನೇತೃತ್ವದ ಸಮಿತಿ ಈ ತಿಂಗಳಲ್ಲಿ ವರದಿ ನೀಡಲಿದೆ, ನಂತರ ನಿರ್ಧರಿಸಲಾಗುವುದು
-ಸಿದ್ದರಾಮಯ್ಯ ,
ಮುಖ್ಯಮಂತ್ರಿ

*
ಮುಖ್ಯಾಂಶಗಳು
* ಮಾದರಿ ನೀತಿ ಸಂಹಿತೆ ತಕ್ಷಣದಿಂದ ರದ್ದು
* ಆಯೋಗ ಪ್ರಕಟಿಸಲಿದೆ ಹೊಸ ವೇಳಾಪಟ್ಟಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.