ADVERTISEMENT

ಜಂತಕಲ್ ಪ್ರಕರಣ: ‘ಸುಪ್ರೀಂ’ಗೆ ಎಸ್ಐಟಿ ವರದಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST
ಜಂತಕಲ್ ಪ್ರಕರಣ: ‘ಸುಪ್ರೀಂ’ಗೆ ಎಸ್ಐಟಿ ವರದಿ
ಜಂತಕಲ್ ಪ್ರಕರಣ: ‘ಸುಪ್ರೀಂ’ಗೆ ಎಸ್ಐಟಿ ವರದಿ   

ಬೆಂಗಳೂರು: ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣದ ಸಂಬಂಧ ತನಿಖೆಯ ಪ್ರಗತಿ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ವಿಶೇಷ ತನಿಖಾ ತಂಡ(ಎಸ್‌ಐಟಿ) ಸಲ್ಲಿಸಿದೆ.

‘ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್‌ ನೀಡಿದ್ದ ಮೂರು ತಿಂಗಳ ಅವಧಿ ಇದೇ 29ಕ್ಕೆ ಅಂತ್ಯವಾಗಲಿದೆ. ಈವರೆಗೆ ಆಗಿರುವ ತನಿಖೆಯ ಪ್ರಗತಿ ಕುರಿತು ವರದಿ ಸಲ್ಲಿಸಲಾಗಿದೆ. ತನಿಖೆ ಪೂರ್ಣಗೊಳಿಸಲು ಇನ್ನೂ ಮೂರರಿಂದ ಆರು ತಿಂಗಳು ಕಾಲಾವಕಾಶ ಬೇಕೆಂದು  ಕೋರ ಲಾಗಿದೆ’ ಎಂದು ಎಸ್‌ಐಟಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಐಎಎಸ್‌ ಅಧಿಕಾರಿ ಗಂಗಾರಾಂ ಬಡೇರಿಯಾ ಬಂಧನ, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ, ಐಎಎಸ್‌ ಅಧಿಕಾರಿಗಳಾದ ಮಹೇಂದ್ರ ಜೈನ್‌, ಪೆರುಮಾಳ್‌, ನಿವೃತ್ತ ಅಧಿಕಾರಿ ಬಸಪ್ಪರೆಡ್ಡಿ, ಮೈಸೂರು ಮಿನರಲ್ಸ್‌ನ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಶಂಕರಲಿಂಗಯ್ಯ, ಕೆ. ಶ್ರೀನಿವಾಸ್, ‘ಜಂತಕಲ್‌ ಎಂಟರ್‌ ಪ್ರೈಸಸ್‌’ನ ಮಾಲೀಕ ವಿನೋಧ ಗೋಯಲ್‌  ಅವರನ್ನು ವಿಚಾರಣೆ ಮಾಡಿ ಸಂಗ್ರಹಿಸಿರುವ ಮಾಹಿತಿಯನ್ನು ವರದಿಯಲ್ಲಿ   ಉ್ಲಲೇಖಿಸಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ನಿವೃತ್ತ ಐಪಿಎಸ್ ಅಧಿಕಾರಿ ಜೀಜಾ ಮಾಧವನ್ ಹರಿಸಿಂಗ್‌ ಅವರಿಗೂ ನೋಟಿಸ್‌ ನೀಡಿ ವಿಚಾರಣೆ ನಡೆಸಲಾಗುವುದು ಎಂದೂ ವರದಿಯಲ್ಲಿ ತಿಳಿಸಲಾಗಿದೆ’ ಎಂದು ಅವರು ವಿವರಿಸಿದರು.

ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಸಂತೋಷ ಹೆಗ್ಡೆ  ಅವರ ನೇತೃತ್ವದಲ್ಲಿ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆದಿತ್ತು. ಭಾಗ–2ರ ವರದಿಯಲ್ಲಿ ಗಣಿ ಉದ್ಯಮಿ ವಿನೋದ್‌ ಗೋಯಲ್ ಮಾಲೀಕತ್ವದ ಜಂತಕಲ್‌ ಎಂಟರ್‌ಪ್ರೈಸಸ್‌ ನಡೆಸಿದ ಅಕ್ರಮ ಅದಿರು ಸಾಗಣೆ ಕುರಿತು ಉಲ್ಲೇಖಿಸಲಾಗಿತ್ತು.  ಈ ವರದಿ ಕುರಿತು ತನಿಖೆ ನಡೆಸುವಂತೆ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಗಗನ್‌  ನಾಪತ್ತೆ
ಐಎಎಸ್‌ ಅಧಿಕಾರಿ ಗಂಗಾರಾಂ ಬಡೇರಿಯಾ ಪುತ್ರ ಗಗನ್‌ ತಲೆಮರೆಸಿಕೊಂಡಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ. ಆದರೂ ವಿಚಾರಣೆಗೆ ಹಾಜರಾಗಿಲ್ಲ. ಬರದಿದ್ದರೆ ಹುಡುಕಿ ವಶಕ್ಕೆ ಪಡೆಯುತ್ತೇವೆ’ ಎಂದು ಹೇಳಿದರು.

ನಿರೀಕ್ಷಣಾ ಜಾಮೀನಿಗೆ ಜೈನ್‌ ಅರ್ಜಿ
ಬೆಂಗಳೂರು: ‘ಮೈಸೂರು ಮಿನರಲ್ಸ್ ಕಂಪೆನಿಗೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ (ಎಂ.ಡಿ) ಅವಧಿಯಲ್ಲಿ ಸರ್ಕಾರದ ಬೊಕ್ಕಸಕ್ಕೆ ₹ ಅಂದಾಜು 300 ಕೋಟಿ ನಷ್ಟ ಉಂಟಾಗಲು ಕಾರಣರಾಗಿದ್ದಾರೆ’ ಎಂದು ಆರೋಪಿಸಿ ಲೋಕಾಯುಕ್ತ ವಿಶೇಷ ತನಿಖಾ ತಂಡ  (ಎಸ್‌ಐಟಿ) ದಾಖಲಿಸಿರುವ ಪ್ರಕರಣದಲ್ಲಿ ಐಎಎಸ್‌ ಅಧಿಕಾರಿ ಮಹೇಂದ್ರ ಜೈನ್‌ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಈ ಕುರಿತ ಅರ್ಜಿಯನ್ನು ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿ ಪ್ರತಿವಾದಿ ಎಸ್‌ಐಟಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿತು.

ಅರ್ಜಿದಾರರ ವಕೀಲ ಪಿ.ಪ್ರಸನ್ನ ಕುಮಾರ, ‘ಜೈನ್‌ ಅವರು ಕಂಪೆನಿಗೆ ಯಾವುದೇ ನಷ್ಟ ಉಂಟು ಮಾಡಿದ್ದಾಗಲೀ ಅಥವಾ ವೈಯಕ್ತಿಕವಾಗಿ ಯಾವುದೇ ಹಣಕಾಸಿನ ಲಾಭ ಪಡೆದಿದ್ದಾರೆ ಎಂಬ ಆರೋಪಕ್ಕೆ ದಾಖಲೆ ಇಲ್ಲ ಎಂಬುದನ್ನು ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ತಮ್ಮ ವರದಿಯಲ್ಲಿ ದಾಖಲಿಸಿದ್ದಾರೆ’ ಎಂದರು.

‘ಅರ್ಜಿದಾರರು 2007ರಿಂದ 2008ರ ಅವಧಿಯಲ್ಲಿ ಎಂಎಂಎಲ್‌ಗೆ ಎಂ.ಡಿ ಆಗಿದ್ದರು.  ಈ ಪ್ರಕರಣದಲ್ಲಿ ಅವರು ಸಂಪೂರ್ಣ ಅಮಾಯಕರಾಗಿದ್ದಾರೆ.  ಈಗಾಗಲೇ ನಾಲ್ಕಕ್ಕೂ ಹೆಚ್ಚು ಬಾರಿ ಎಸ್‌ಐಟಿ ಮುಂದೆ ಹಾಜರಾಗಿದ್ದಾರೆ’ ಎಂದರು.

‘ಅಧೀನ ನ್ಯಾಯಾಲಯ ಇವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಆದರೆ ಇದೇ ಪ್ರಕರಣದಲ್ಲಿ ಮೂರನೇ ಆರೋಪಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜಾಮೀನು ನೀಡಲಾಗಿದೆ’ ಎಂಬ ಅಂಶವನ್ನು ಗಮನಕ್ಕೆ ತಂದರು. ಆಕ್ಷೇಪಣೆ ಸಲ್ಲಿಸುವಂತೆ ಎಸ್‌ಐಟಿ ಪರ ಪ್ರಾಸಿಕ್ಯೂಟರ್‌ ಪಿ.ಗೋವಿಂದನ್‌ ಅವರಿಗೆ ಸೂಚಿಸಿದ ನ್ಯಾಯಪೀಠ ಇದೇ 23ಕ್ಕೆ ವಿಚಾರಣೆ ಮುಂದೂಡಿದೆ.

ಮಹೇಂದ್ರ ಜೈನ್‌ ಅವರು ಸದ್ಯ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.