ADVERTISEMENT

ಜನಪ್ರತಿನಿಧಿಗಳಿಗೆ ಷ. ಶೆಟ್ಟರ್‌ ಚಾಟಿ

ಧಾರವಾಡದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2016, 19:30 IST
Last Updated 29 ಏಪ್ರಿಲ್ 2016, 19:30 IST
ಧಾರವಾಡದಲ್ಲಿ ಶುಕ್ರವಾರ ನಡೆದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರೊ. ಗಣೇಶ ಎನ್‌.ದೇವಿ, ಪ್ರೊ. ಮಾಲತಿ ಪಟ್ಟಣಶೆಟ್ಟಿ,  ಪ್ರೊ.ಷ.ಶೆಟ್ಟರ್‌, ಸುಬ್ರಾಯ ಚೊಕ್ಕಾಡಿ, ಪ್ರೊ.ಸುಕನ್ಯಾ , ಸವಿತಾ ನಾಗಭೂಷಣ, ಡಾ.ಪಾಟೀಲ ಪುಟ್ಟಪ್ಪ, ಡಾ.ವಿಜಯಾ ಅವರೊಂದಿಗೆ ಪುಸ್ತಕ ಬಹುಮಾನ ಪುರಸ್ಕೃತರು
ಧಾರವಾಡದಲ್ಲಿ ಶುಕ್ರವಾರ ನಡೆದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರೊ. ಗಣೇಶ ಎನ್‌.ದೇವಿ, ಪ್ರೊ. ಮಾಲತಿ ಪಟ್ಟಣಶೆಟ್ಟಿ, ಪ್ರೊ.ಷ.ಶೆಟ್ಟರ್‌, ಸುಬ್ರಾಯ ಚೊಕ್ಕಾಡಿ, ಪ್ರೊ.ಸುಕನ್ಯಾ , ಸವಿತಾ ನಾಗಭೂಷಣ, ಡಾ.ಪಾಟೀಲ ಪುಟ್ಟಪ್ಪ, ಡಾ.ವಿಜಯಾ ಅವರೊಂದಿಗೆ ಪುಸ್ತಕ ಬಹುಮಾನ ಪುರಸ್ಕೃತರು   

ಧಾರವಾಡ: ‘ಸಾಹಿತ್ಯ ಕ್ಷೇತ್ರದ ಪ್ರಾಜ್ಞ ವಲಯವನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪುರಸೊತ್ತಿಲ್ಲದ ಸಂಸ್ಕೃತಿ ಸಚಿವರು ಮತ್ತು ಜನಪ್ರತಿನಿಧಿಗಳು, ಜ್ಞಾನ ಪಡೆಯುವ ಹಾಗೂ ತಾವು ಸುಂಸ್ಕೃತರು ಎಂದು ತೋರಿಸಿಕೊಳ್ಳುವ ಅವಕಾಶದಿಂದ ವಂಚಿತರಾದರು’ ಎಂದು ಹಿರಿಯ ಇತಿಹಾಸಕಾರ ಪ್ರೊ.ಷ.ಶೆಟ್ಟರ್ ಚಾಟಿ ಬೀಸಿದರು.

ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಶುಕ್ರವಾರ ನಡೆದ ಕರ್ನಾಟಕ ಸಾಹಿತ್ಯ ಅಕಾಡೆಮಿ 2014ರ ಗೌರವ ಪ್ರಶಸ್ತಿ ಹಾಗೂ 2013ರ ಪುಸ್ತಕ ಬಹುಮಾನ ಪ್ರದಾನ ಸಮಾರಂಭದಲ್ಲಿ, ಗೌರವ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ₹ 390 ಕೋಟಿ ಅನುದಾನವಿದೆ. ಅದನ್ನು ಕೇವಲ ಒಬ್ಬ ವ್ಯಕ್ತಿ ನಿರ್ವಹಿಸುತ್ತಾನೆ. ಅದಕ್ಕೊಂದು ಸಲಹಾ ಮಂಡಳಿಯಾಗಲಿ, ವಿಮರ್ಶಾ ಮಂಡಳಿಯಾಗಲಿ ಇಲ್ಲ. ಒಂದು ವರ್ಷದ ಅವಧಿಯಲ್ಲಿ ಆರು ಪ್ರಧಾನ ಕಾರ್ಯದರ್ಶಿಗಳು ಬದಲಾಗಿದ್ದಾರೆ.

ನೇಮಕಗೊಂಡವರು ಅಲ್ಲಿ ಅನಿವಾರ್ಯವಾಗಿ ಕೆಲಸ ಮಾಡುತ್ತಿದ್ದಾರೆ. ಇಂಥ ಇಲಾಖೆ, ಅದರ ಮುಖ್ಯಸ್ಥರು ಮತ್ತು ಜನಪ್ರತಿನಿಧಿಗಳಿಂದ ಏನು ಅಪೇಕ್ಷಿಸಲು ಸಾಧ್ಯ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರದ ಧೋರಣೆ ಖಂಡಿಸಿ ಡಾ.ಜಿ. ರಾಮಕೃಷ್ಣ  ಪ್ರಶಸ್ತಿ ನಿರಾಕರಿಸಿದ್ದಾರೆ. ಸಾಹಿತ್ಯ, ಸಂಸ್ಕೃತಿ ನಿರ್ವಹಣೆಗೆ ಅಗತ್ಯ ಮಾರ್ಗಸೂಚಿ ನೀಡಿದ ವರದಿಯನ್ನು ಸರ್ಕಾರ ಉಪೇಕ್ಷಿಸಿದ್ದು ಅವರಿಗೆ ಬೇಸರ ತರಿಸಿದೆ. ಈ ಬಗ್ಗೆ ನಮಗೂ ಬೇಸರವಿದೆ’ ಎಂದರು. 

ಸುಬ್ರಾಯ ಚೊಕ್ಕಾಡಿ, ಪ್ರೊ.ಸುಕನ್ಯಾ  ಹಾಗೂ ಸವಿತಾ ನಾಗಭೂಷಣ ಅವರಿಗೆ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ನಿರಾಕರಿಸಿದ್ದ ಡಾ. ಜಿ.ರಾಮಕೃಷ್ಣ ಕಾರ್ಯಕ್ರಮಕ್ಕೆ ಗೈರು ಆಗಿದ್ದರು.

ಪುಸ್ತಕ ಬಹುಮಾನವನ್ನು ಸುಬ್ಬು ಹೊಲೆಯಾರ್, ರಜನಿ ನರಹಳ್ಳಿ, ಎಂ.ಎಸ್‌.ಶ್ರೀರಾಮ್, ಡಾ.ಕೆ.ವೈ.ನಾರಾಯಣಸ್ವಾಮಿ, ಎಂ.ಡಿ.ಗೋಗೇರಿ, ಡಾ.ಎಚ್‌.ಎಸ್‌.ಅನುಪಮಾ, ಕುಪ್ಪೆ ನಾಗರಾಜ, ಪ್ರಭಾಕರ ಆಚಾರ್ಯ, ಹ.ಸ.ಬ್ಯಾಕೋಡ, ಟಿ.ಎಸ್‌.ಗೋಪಾಲ್, ಎನ್‌.ಜಗದೀಶ ಕೊಪ್ಪ, ಡಾ.ಬಸವರಾಜ ಕಲ್ಗುಡಿ, ಡಾ.ಆರ್‌.ಲಕ್ಷ್ಮೀನಾರಾಯಣ, ಡಾ.ಬಿ.ಸುಜ್ಞಾನಮೂರ್ತಿ, ಲಕ್ಷ್ಮೀಶತೋಳ್ಪಾಡಿ, ಬಿ.ಎಸ್‌.ಶ್ರುತಿ ಅವರಿಗೆ ನೀಡಲಾಯಿತು.

ಅಕಾಡೆಮಿ ಅಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ.ವಿಜಯಾ, ಡಾ.ಗಣೇಶ ಎನ್‌.ದೇವಿ, ಡಾ.ಪಾಟೀಲ ಪುಟ್ಟಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.