ADVERTISEMENT

ಜನಸಾಗರದ ಅಶ್ರುತರ್ಪಣ

ಸಕಲ ಸೇನಾ ಗೌರವದೊಂದಿಗೆ ಬೆಟದೂರಿನಲ್ಲಿ ಯೋಧ ಹನುಮಂತಪ್ಪ ಕೊಪ್ಪದ ಅಂತಿಮಸಂಸ್ಕಾರ

ರಾಜೇಶ್ ರೈ ಚಟ್ಲ
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST
ಹುತಾತ್ಮಯೋಧ ಹನುಮಂತಪ್ಪ ರಾಮಪ್ಪ ಕೊಪ್ಪದ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸುತ್ತಿರುವ ಪತ್ನಿ ಮಹಾದೇವಿ
ಹುತಾತ್ಮಯೋಧ ಹನುಮಂತಪ್ಪ ರಾಮಪ್ಪ ಕೊಪ್ಪದ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸುತ್ತಿರುವ ಪತ್ನಿ ಮಹಾದೇವಿ   

ಬೆಟದೂರ (ಧಾರವಾಡ ಜಿಲ್ಲೆ): ಹುತಾತ್ಮ ಯೋಧ ಹನುಮಂತಪ್ಪ ರಾಮಪ್ಪ ಕೊಪ್ಪದ ಅವರ ಅಂತ್ಯಸಂಸ್ಕಾರ ಅವರ ಹುಟ್ಟೂರು, ಕುಂದಗೋಳ ತಾಲ್ಲೂಕಿನ ಬೆಟದೂರಿನಲ್ಲಿ ಸಕಲ ಸರ್ಕಾರಿ ಮತ್ತು ಮಿಲಿಟರಿ ಗೌರವಗಳೊಂದಿಗೆ ಶುಕ್ರವಾರ ಮಧ್ಯಾಹ್ನ ನಡೆಯಿತು. ಇದರೊಂದಿಗೆ ಹದಿಮೂರು ವರ್ಷಗಳ ಅವರ ದೇಶಸೇವೆಯ ಸಂಕಲ್ಪದ ಜೀವನ ಅಂತ್ಯ ಕಂಡಿತು.

ಸಿಯಾಚಿನ್‌ನಲ್ಲಿ ಸುಮಾರು 25 ಅಡಿ ಆಳದ ಹಿಮಗರ್ಭದಲ್ಲಿ ಆರು ದಿನ ಜೀವ ಹಿಡಿದು, ಸಾವನ್ನು ಗೆದ್ದು ಬಂದಿದ್ದ ಲ್ಯಾನ್ಸ್‌ ನಾಯಕ್‌ ಹನುಮಂತಪ್ಪ, ಮೂರು ದಿನಗಳ ಜೀವನ್ಮರಣ ಹೋರಾಟದಲ್ಲಿ ಸೋತು, ಗುರುವಾರ ಬೆಳಿಗ್ಗೆ 11.45ಕ್ಕೆ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಮೃತ್ಯುವಿಗೆ ಶರಣಾಗಿದ್ದರು.
ಬೆಟದೂರ ಗ್ರಾಮ ಪಂಚಾಯಿತಿ ಸಮೀಪದ ಕೆರೆಯ ದಂಡೆಯಲ್ಲಿ ಕುಟುಂಬ ವರ್ಗದವರ ಮುಗಿಲು ಮುಟ್ಟಿದ ಆಕ್ರಂದನ, 50 ಸಾವಿರಕ್ಕೂ ಹೆಚ್ಚು ಜನರ ಅಶ್ರುತರ್ಪಣದ ನಡುವೆ ಲಿಂಗಾಯತ ಧರ್ಮದ ವಿಧಿ–ವಿಧಾನಗಳೊಂದಿಗೆ ವೀರಯೋಧನಿಗೆ ಅಂತಿಮ ವಿದಾಯ ಹೇಳಲಾಯಿತು.

ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ನೀಲಗುಂದ ಗ್ರಾಮದ ಗುಡ್ಡದ ವಿರಕ್ತಮಠದ ಚೆನ್ನಬಸವ ಶಿವಯೋಗಿ ಸ್ವಾಮೀಜಿ ಸಾನಿಧ್ಯದಲ್ಲಿ, ಗ್ರಾಮದ ಪೂಜಾರಿ (ಅರ್ಚಕ) ಈರಯ್ಯ ಹಿರೇಮಠ ಅವರ ಮಾರ್ಗದರ್ಶನದಲ್ಲಿ ಅಂತ್ಯಕ್ರಿಯೆ ವಿಧಿ–ವಿಧಾನ ನಡೆದವು. ಕೊಪ್ಪದ ಅವರ ಅಣ್ಣ ಗೋವಿಂದಪ್ಪ  ಅಂತಿಮ ಸಂಸ್ಕಾರಗಳನ್ನು ನೆರವೇರಿಸಿದರು.

ಅದಕ್ಕೂ ಮೊದಲು ಬ್ರಿಗೇಡಿಯರ್‌ ಪ್ರವೀಣ್‌ ಶಿಂಧೆ ಹಾಗೂ ಇತರ ಸೇನಾಧಿಕಾರಿಗಳು ಮತ್ತು ಪೊಲೀಸ್‌ ಅಧಿಕಾರಿಗಳು ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛವಿಟ್ಟು ಗೌರವ ವಂದನೆ ಸಲ್ಲಿಸಿದರು. ಶವ ಪೆಟ್ಟಿಗೆಯ ಮೇಲೆ ಹೊದಿಸಿದ್ದ ರಾಷ್ಟ್ರಧ್ವಜ, ಯೋಧನ ಬೆಲ್ಟ್‌ ಮತ್ತು ಟೋಪಿಯನ್ನು ತಾಯಿ ಬಸವ್ವ ಅವರಿಗೆ ನೀಡಿದರು. ಸೇನಾ ಸಂಪ್ರದಾಯದಂತೆ ಬೆಳಗಾವಿಯ ಮರಾಠಾ ಇನ್‌ಫಂಟ್ರಿ ರೆಜಿಮೆಂಟ್‌ನ 12 ಸೈನಿಕರು ಆಕಾಶದತ್ತ ಮೂರು ಸುತ್ತಿನ ಗುಂಡು ಹಾರಿಸಿ, ಗೌರವ ವಂದನೆ ಸಲ್ಲಿಸಿದರು.

ನಂತರ ಅಂತ್ಯಕ್ರಿಯೆಗೆ ಅನುವು ಮಾಡಿಕೊಟ್ಟರು.

ಕುಸಿದುಬಿದ್ದ ಪತ್ನಿ
ಮೈದಾನದಿಂದ ಶವಪೆಟ್ಟಿಗೆಯನ್ನು ಎತ್ತಿ ಸೇನಾ ವಾಹನದತ್ತ ತರುತ್ತಿದ್ದಂತೆಯೇ ಅತ್ತು ಅತ್ತು ಸುಸ್ತಾಗಿದ್ದ ಹನುಮಂತಪ್ಪ ಅವರ ಪತ್ನಿ ಮಹಾದೇವಿ ಕುಸಿದುಬಿದ್ದರು. ಕೂಡಲೇ ಅವರ ನೆರವಿಗೆ ಧಾವಿಸಿದ ಮಿಲಿಟರಿ ಸಿಬ್ಬಂದಿ ಅವರನ್ನು ಸಂತೈಸಿದರು.

ಆ ಬಳಿಕ ಕುಟುಂಬದವರು ಅವರನ್ನು ಶವಸಂಸ್ಕಾರ
ನಡೆಯುವ ಸ್ಥಳದತ್ತ
ಕರೆದೊಯ್ದರು.

ಅಮರನಾದ ಹನುಮಂತಪ್ಪ
*   ಫೆ. 3: ಸಿಯಾಚಿನ್‌ನಲ್ಲಿ ಹನುಮಂತಪ್ಪ ಕೊಪ್ಪದ ಕಣ್ಮರೆ
* ಫೆ. 9: ಹಿಮದಡಿಯಲ್ಲಿ ಪತ್ತೆ
* ಫೆ.11: ಬೆ.11.45ಕ್ಕೆ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಸಾವು
* ಫೆ. 11: ರಾತ್ರಿ 10.25ಕ್ಕೆ ಹುಬ್ಬಳ್ಳಿ ತಲುಪಿದ ಮೃತದೇಹ
* ಫೆ. 12: ಬೆ.10.10ರವರೆಗೆ ಹುಬ್ಬಳ್ಳಿಯಲ್ಲಿ ಸಾರ್ವಜನಿಕ ದರ್ಶನ
* ಫೆ. 12: ಬೆಳಿಗ್ಗೆ 11ಕ್ಕೆ ಬೆಟದೂರ ತಲುಪಿದ ಮೃತದೇಹ
* ಫೆ. 12: ಮಧ್ಯಾಹ್ನ 1.10ಕ್ಕೆ ಅಂತ್ಯಕ್ರಿಯೆ

ಯೋಧರ ದೇಹ ತರಲು ಪ್ರತಿಕೂಲ ಹವಾಮಾನ ಅಡ್ಡಿ
ಉಧಂಪುರ (ಪಿಟಿಐ):
ಸಿಯಾಚಿನ್‌ ನೀರ್ಗಲ್ಲು ಪ್ರದೇಶದಲ್ಲಿ   ಪ್ರತಿಕೂಲ ಹವಾಮಾನ ಪರಿಸ್ಥಿತಿ ಮುಂದುವರಿದಿದೆ. ಹಾಗಾಗಿ ಹಿಮ ಕುಸಿತಕ್ಕೆ ಸಿಲುಕಿ ಮೃತಪಟ್ಟ ಒಂಬತ್ತು ಯೋಧರ ಮೃತದೇಹಗಳನ್ನು ಬೇಸ್‌ಕ್ಯಾಂಪ್‌ಗೆ ತರುವುದಕ್ಕೆ ಶುಕ್ರವಾರವೂ ಸಾಧ್ಯವಾಗಿಲ್ಲ.

‘ಒಂದು ತಾಸಿನಷ್ಟು ಸಮಯ ಹಿಮಪಾತ ನಿಂತರೂ ತಕ್ಷಣವೇ ಹೆಲಿಕಾಪ್ಟರ್‌ಗಳನ್ನು ಕಳುಹಿಸಿ ಯೋಧರ ದೇಹಗಳನ್ನು ತರಲಾಗುವುದು’ ಎಂದು ಉತ್ತರ ಕಮಾಂಡ್‌ನ ಮುಖ್ಯಸ್ಥ ಲೆ. ಜ. ಡಿ.ಎಸ್‌. ಹೂಡಾ ತಿಳಿಸಿದ್ದಾರೆ. 

ಶುಕ್ರವಾರವೂ ಹೆಲಿಕಾಪ್ಟರ್‌ಗಳು ಸೋನಮ್‌ ಪ್ರದೇಶಕ್ಕೆ ಹಾರಾಟ ನಡೆಸಿವೆ. ಆದರೆ ಅಲ್ಲಿ ಇಳಿಯುವುದಕ್ಕೆ ಸಾಧ್ಯವಾಗದೆ ಮರಳಿವೆ. ಹೆಲಿಕಾಪ್ಟರ್‌ಗಳು ಸನ್ನದ್ಧವಾಗಿದ್ದು, ಹವಾಮಾನ ಉತ್ತಮಗೊಳ್ಳುವುದಕ್ಕೆ ಕಾಯುತ್ತಿವೆ ಎಂದು ಉತ್ತರ ಕಮಾಂಡ್‌ನ ಹೇಳಿಕೆ ತಿಳಿಸಿದೆ.  ‘ಮೃತ ಯೋಧರ ಕುಟುಂಬದ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರನ್ನು ದೆಹಲಿಗೆ ಕರೆತರಲು ಎಲ್ಲ ಸಿದ್ಧತೆಗಳನ್ನೂ ಮಾಡಲಾಗಿದೆ. ದುರದೃಷ್ಟವಶಾತ್‌ ಪ್ರತಿಕೂಲ ಹವಾಮಾನ ದೇಹಗಳನ್ನು ತರುವ ಕಾರ್ಯಾಚರಣೆಗೆ ಅಡ್ಡಿಯಾಗಿದೆ’ ಎಂದು  ಹೂಡಾ ಹೇಳಿದ್ದಾರೆ.

ಕೊಪ್ಪದ ಅವರನ್ನು ಜೀವಂತವಾಗಿ ಹೊರ ತೆಗೆದ ದಿನವೇ ಹಿಮಪಾತ ಆರಂಭವಾಗಿತ್ತು. ಅವರ ಪರಿಸ್ಥಿತಿ ಗಂಭೀರವಾಗಿ ಇದ್ದುದರಿಂದ ಪ್ರತಿಕೂಲ ಹವಾಮಾನವನ್ನೂ ಲೆಕ್ಕಿಸದೆ ಅವರನ್ನು ಹೆಲಿಕಾಪ್ಟರ್‌ನಲ್ಲಿ ಕರೆತಂದು ಆಸ್ಪತ್ರೆಗೆ ದಾಖಲಿಸಲಾಯಿತು. ಹಿಮಕುಸಿತಕ್ಕೆ ಸಿಕ್ಕ ಪ್ರದೇಶದಿಂದ ಎಲ್ಲ 9 ದೇಹಗಳನ್ನು ಹೊರತೆಗೆಯಲಾಗಿದೆ. ಈ ದೇಹಗಳನ್ನು ಸೋನಮ್‌ ಪ್ರದೇಶದ ಹೆಲಿಪ್ಯಾಡ್‌ ಇರುವ ವಿಶಾಲ ಪ್ರದೇಶದಲ್ಲಿ ಇರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.