ADVERTISEMENT

ಜಲಾಶಯಗಳಲ್ಲಿ ನೀರಿನ ಭೋರ್ಗರೆತ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2014, 19:30 IST
Last Updated 1 ಆಗಸ್ಟ್ 2014, 19:30 IST

ಶಿವಮೊಗ್ಗ/ ಮಡಿಕೇರಿ/ ಹಾಸನ/ ಮಂಡ್ಯ/ ಹೊಸಪೇಟೆ: ರಾಜ್ಯದ ಮಲೆ­ನಾಡು ಮತ್ತು ಕರಾವಳಿ ಜಿಲ್ಲೆ­ಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಕೆಲವು ಜಲಾಶಯಗಳು ಈಗಾಗಲೇ ತುಂಬಿ­ದ್ದರೆ, ಇನ್ನು ಹಲವು ಜಲಾಶಯಗಳು ಇನ್ನೇನು ತುಂಬುವ ಹಂತ ತಲುಪಿವೆ.
ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1797.35 ಅಡಿಗಳಿಗೆ ಏರಿಕೆಯಾ­ಗಿದ್ದು, ಒಂದೇ ದಿನಲ್ಲಿ ಮತ್ತೆ 4 ಅಡಿ ಹೆಚ್ಚಾಗಿದೆ. ಒಳಹರಿವು 85,526 ಕ್ಯೂಸೆಕ್‌ ಇದೆ.

ಜಲ ವಿದ್ಯುತ್‌ ಉತ್ಪಾದನೆಗಾಗಿ ಇರುವ ಈ ಜಲಾಶಯದ ಗರಿಷ್ಠ ಮಟ್ಟ 1819 ಅಡಿ.

ನೀರಾವರಿ ಉದ್ದೇಶದ ಭದ್ರಾ ಜಲಾಶಯದ ನೀರಿನ ಮಟ್ಟ 177.30 ಅಡಿಗೆ ಏರಿಕೆಯಾಗಿದ್ದು, 8.70 ಅಡಿ ನೀರು ಸಂಗ್ರಹವಾದರೆ ಜಲಾಶಯ ಭರ್ತಿಯಾಗಲಿದೆ. ಒಳಹರಿವು 35,670 ಕ್ಯೂಸೆಕ್‌ಗೆ ಏರಿಕೆಯಾಗಿದೆ.

ಕೊಡಗು ಜಿಲ್ಲೆಯಲ್ಲಿ ಹಾರಂಗಿ ಜಲಾಶಯದಿಂದ 5,989 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ.
ಹಾಸನ ಜಿಲ್ಲೆಯಲ್ಲಿ ಮೂರು ದಿನಗಳಿಂದ ಉತ್ತಮ ಮಳೆಯಾಗು­ತ್ತಿದ್ದು, ಹೇಮಾವತಿ ಜಲಾಶಯಕ್ಕೆ ಹರಿದು­ಬರುವ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ.

ಪ್ರಸಕ್ತ ಜಲಾಶಯದ ನೀರಿನಮಟ್ಟ 2,918.41 ಅಡಿಗಳಷ್ಟಿದ್ದು, (ಗರಿಷ್ಠ ಮಟ್ಟ 2,922 ಅಡಿ) ಒಳಹರಿವಿನ ಪ್ರಮಾಣ 22 ಸಾವಿರ ಕ್ಯೂಸೆಕ್‌ಗೂ ಹೆಚ್ಚಿದೆ. ಶನಿವಾರ ಸಂಜೆಯೊಳಗೆ ಜಲಾ­ಶಯ ಭರ್ತಿಯಾಗುವ ಸಾಧ್ಯತೆ ಇದೆ.
ಮಂಡ್ಯ ಜಿಲ್ಲೆಯಲ್ಲಿ ಕೆಆರ್‌ಎಸ್‌ ಅಣೆಕಟ್ಟೆಯ ನೀರಿನಮಟ್ಟ 115.20 ಅಡಿಗೆ ತಲುಪಿದ್ದು, ಒಳಹರಿವಿನ ಪ್ರಮಾಣದಲ್ಲಿ 5 ಸಾವಿರ ಕ್ಯೂಸೆಕ್‌ನಷ್ಟು ಹೆಚ್ಚಾಗಿದೆ.

ಗುರುವಾರ 13,439 ಕ್ಯೂಸೆಕ್‌ ಇದ್ದ ಒಳಹರಿವಿನ ಪ್ರಮಾಣವು ಶುಕ್ರವಾರ 18,539 ಕ್ಯೂಸೆಕ್‌ಗೆ ಹೆಚ್ಚಾಗಿದೆ. 9,130 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಜಲಾಶಯ ಬಹುತೇಕ ಭರ್ತಿಯಾಗಿದ್ದು 1631.50 ಅಡಿ ತಲುಪಿದೆ. (ಗರಿಷ್ಠ 1633 ಅಡಿ). ಜಲಾಶಯದ ಒಳಹರಿವು ಒಂದು ಲಕ್ಷ ಕ್ಯೂಸೆಕ್‌ ಮೀರಿದ್ದು ಅಣೆಕಟ್ಟೆಯ 20 ಕ್ರೆಸ್ಟ್ ಗೇಟ್ ಗಳಿಂದ 65 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.