ADVERTISEMENT

‘ಜಸ್ಟ್ ಆ್ಯಸ್ಕಿಂಗ್’ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2017, 19:30 IST
Last Updated 23 ನವೆಂಬರ್ 2017, 19:30 IST
ಸುದ್ದಿಗೋಷ್ಠಿಯಲ್ಲಿ ಪ್ರಕಾಶ್ ರೈ ಮಾತನಾಡಿದರು –ಪ್ರಜಾವಾಣಿ ಚಿತ್ರ
ಸುದ್ದಿಗೋಷ್ಠಿಯಲ್ಲಿ ಪ್ರಕಾಶ್ ರೈ ಮಾತನಾಡಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಾಮಾಜಿಕ ಮಾಧ್ಯಮಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಸಲುವಾಗಿ ನಡೆಯುವ ಟ್ರೋಲ್ ಗೂಂಡಾಗಿರಿ ವಿರೋಧಿಸಿ ಜಸ್ಟ್‌ ಆಸ್ಕಿಂಗ್ ಎಂಬ ಪ್ರತಿಭಟನಾ ಸ್ವರೂಪದ ಅಭಿಯಾನ ಆರಂಭಿಸಿದ್ದೇನೆ’ ಎಂದು ನಟ ಪ್ರಕಾಶ್‌ ರೈ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂದು ಸಾಮಾಜದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧದ ಭಯೋತ್ಪಾದನಾ ಶಕ್ತಿಯಾಗಿ ಟ್ರೋಲ್ ಬಳಕೆಯಾಗು ತ್ತಿದೆ. ಇದು ಸಮಾಜದ ಸಾಮರಸ್ಯ ನ್ನು ಕದಡುತ್ತಿದೆ.ದೇಶದ ಎಲ್ಲ ನಾಗರಿಕರಿಗೂ ಅವರ ಕೋಪ, ಆತಂಕ, ನೋವು, ನಲಿವುಗಳನ್ನು ಅಭಿವ್ಯಕ್ತಿಸುವ ಹಕ್ಕಿದೆ. ಈ ಹಕ್ಕಿಗೆ ಅಡ್ಡಿಯಾಗಿರುವ ಟ್ರೋಲ್ ಗೂಂಡಾಗಿರಿಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವ ಉದ್ದೇಶದಿಂದ ಅಭಿಯಾನ ಆರಂಭಿಸಿದ್ದೇನೆ’ ಎಂದರು.

‘ಅಭಿಯಾನದ ಆರಂಭಿಕ ಹಂತವಾಗಿ ನನ್ನ ವೈಯುಕ್ತಿಕ ಜೀವನವನ್ನು ತಿರುಚಿ, ಭಾವನೆಗಳಿಗೆ ನೋವುಂಟು ಮಾಡಿರುವ ಸಂಸದ ಪ್ರತಾಪ್ ಸಿಂಹ ಅವರಿಗೆ ಕಾನೂನಾತ್ಮಕ ನೋಟಿಸ್‌ ನೀಡಿದ್ದೇನೆ. ನಿಗದಿತ ಅವಧಿಯ ಒಳಗಾಗಿ ಅದಕ್ಕೆ ಸಮರ್ಪಕ ಉತ್ತರ ನೀಡದಿದ್ದಲ್ಲಿ ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ADVERTISEMENT

‘ಗೌರಿ ಲಂಕೇಶ್‌ ಹತ್ಯೆಯನ್ನು ಸಂಭ್ರಮಿಸುವವರ ವಿರುದ್ಧ ಪ್ರಧಾನಿಯ ಮೌನವನ್ನು ಪ್ರಶ್ನಿಸಿದ್ದಕ್ಕಾಗಿ ಪ್ರತಾಪ ಸಿಂಹ ಟ್ರೋಲ್ ಮಾಡಿದ್ದರು. ಮಗನ ಸಾವಿನ ದುಃಖದಲ್ಲಿದ್ದ ಹೆಂಡತಿಯನ್ನು ಬಿಟ್ಟು ಡ್ಯಾನ್ಸರ್‌ ಹಿಂದೆ ಓಡಿದ ರೈ ಅಂತಹವನು ಮೋದಿ ಹಾಗೂ ಯೋಗಿಗೆ ಹೇಳುವಷ್ಟು ಯೋಗ್ಯತೆಯಿರುವವನಾ? ಎಂದು ಟ್ವೀಟ್ ಮಾಡಿದ್ದರು. ನಿಜ ಜೀವನದಲ್ಲಿಯೂ ಖಳನಟನಾಗಿ ವರ್ತಿಸುತ್ತಿದ್ದೀರಾ ಎಂದು ಜರಿದಿದ್ದರು’ ಎಂದು ಅಸಮಧಾನ ವ್ಯಕ್ತಪಡಿಸಿದರು.

‘ನಾನು ಪ್ರಶ್ನಿಸಿದ್ದು ನನ್ನ ದೇಶದ ಪ್ರಧಾನ ಮಂತ್ರಿಯನ್ನೇ ಹೊರತು ಪ್ರತಾಪ ಸಿಂಹ ಅವರ ನಾಯಕನನ್ನಲ್ಲ. ಆಡಳಿತ ನಡೆಸುವವರನ್ನು ಪ್ರಶ್ನಿಸುವ ಹಕ್ಕು ಸಂವಿಧಾನ ನೀಡಿದೆ. ಅದಕ್ಕೆ ಉತ್ತರಿಸುವುದು ಅವರ ಕರ್ತವ್ಯ. ಅದನ್ನು ಬಿಟ್ಟು ಪ್ರಶ್ನಿಸುವವರನ್ನೇ ಮರು ಪ್ರಶ್ನಿಸುವುದಲ್ಲ’ ಎಂದು ಕಿಡಿಕಾರಿದರು.

‘ನೋಟಿಸ್‌ ನೀಡಿರುವುದು ಯಾವುದೇ ರಾಜಕೀಯ ಪಕ್ಷದ ವಿರುದ್ಧದ ಹೋರಾಟ ಅಲ್ಲ. ವೈಯುಕ್ತಿಕವಾಗಿ ಪ್ರತಾಪ ಸಿಂಹ ಅವರು ಮಾಡಿ
ರುವ ಟ್ರೋಲ್ ವಿರುದ್ಧದ ಅಭಿಯಾನ’ ಎಂದು ಅವರು ಸ್ಪಷ್ಟಪಡಿಸಿದರು.

‘ಪ್ರತಾಪ ಸಿಂಹ ಅವರು, ಅವರು ನಂಬಿರುವ ಸಿದ್ಧಾಂತಗಳಿಗೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸುವವರ ವಿರುದ್ಧ ಟ್ರೋಲ್ ಗೂಂಡಾಗಿರಿ ಮಾಡುವುದು ಇದೇ ಮೊದಲಲ್ಲ. ಹಿಂದೆ ಸಾಹಿತಿ ಅನಂತಮೂರ್ತಿ ಹಾಗೂ ಸಚಿವೆ ಎಂ.ಸಿ. ಮೋಹನಕುಮಾರಿ ವಿರುದ್ಧವೂ ಇಂತಹದೇ ಅಸಂಬದ್ಧ ಹೇಳಿಕೆಗಳನ್ನು ನೀಡಿದ್ದರು’ ಎಂದು ಉಲ್ಲೇಖಿಸಿದರು.

‘ಪ್ರತಿಬಾರಿಯೂ ತಪ್ಪು ಹೇಳಿಕೆಗಳನ್ನು ನೀಡಿ ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳಬಹುದು ಎಂದು ಅವರು ಭಾವಿಸಿದಂತಿದೆ. ಆದರೆ, ಈ ಬಾರಿ ಹಾಗಾಗುವುದಿಲ್ಲ. ನಾನು ಕೇವಲ ಹೇಳಿಕೆ ನೀಡುವವನಲ್ಲ. ಅದಕ್ಕಾಗಿ ಹೋರಾಡುವವನು. ನನ್ನ ನೋಟಿಸ್‌ಗೆ ಸರಿಯಾದ ಉತ್ತರ ನೀಡಬೇಕು. ಇಲ್ಲವೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.

‘ನಿನ್ನೆಯವರೆಗೂ ರಾಜ್ಯದ ಹೆಮ್ಮೆಯ ನಟನಾಗಿದ್ದ ನಾನು, ಆಡಳಿತ ವ್ಯವಸ್ಥೆಯ ವಿರುದ್ಧ ನನ್ನ ಅಭಿಪ್ರಾಯ ತಿಳಿಸಿದಾಗ ತಮಿಳುನಾಡಿಗೆ ಹೋಗು, ಪಾಕಿಸ್ತಾನಕ್ಕೆ ಹೋಗು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸುವುದು ಗಮನಿಸಿದರೆ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿರುವ ಅವಕಾಶ ಸ್ಪಷ್ಟವಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.