ADVERTISEMENT

ಜಾತಿ ಪಟ್ಟಿ ವಿವಾದ

ವಿಜಯ್ ಜೋಷಿ
Published 16 ಜನವರಿ 2015, 20:13 IST
Last Updated 16 ಜನವರಿ 2015, 20:13 IST

ಬೆಂಗಳೂರು: ‘ಬ್ರಾಹ್ಮಣ ಕ್ರಿಶ್ಚಿಯನ್’ ಎಂಬ ಜಾತಿ ಇದೆಯೇ? ಇದ್ದರೆ ಆ ಜಾತಿಯವರ ಆಚರಣೆಗಳು ಏನು? ‘ಮಡಿವಾಳ ಕ್ರಿಶ್ಚಿಯನ್’ ಜಾತಿ ಎಂದರೆ ಏನು? ಅಥವಾ ಕ್ರಿಶ್ಚಿಯನ್ ಧರ್ಮದಲ್ಲಿ ಬ್ರಾಹ್ಮಣ, ಮಡಿವಾಳ ಎಂಬ ಜಾತಿಗಳು ಇವೆಯೇ?

ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ರಾಜ್ಯದಲ್ಲಿ ಜಾತಿ ಸಮೀಕ್ಷೆ ನಡೆಸಲು ಜಾತಿಗಳ ಪಟ್ಟಿಯನ್ನು ಸಿದ್ಧಪಡಿಸಿದ ನಂತರ ಈ ಬಗೆಯ ಪ್ರಶ್ನೆ­ಗಳು ಸಾಮಾಜಿಕ ಜಾಲತಾಣ­ಗಳಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿವೆ. ರಾಜಕೀಯ ವಾಗ್ವಾದಕ್ಕೂ ಆಹಾರ­ವಾಗಿದೆ. ಆಯೋಗ ಸಿದ್ಧಪಡಿಸಿದ ಜಾತಿ ಪಟ್ಟಿಯಲ್ಲಿ ಇಂಥ ಹೆಸರುಗಳು ಇರು­ವುದು ಈ ಚರ್ಚೆಗೆ ಮೂಲ.

ಸಾರ್ವಜನಿಕರಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣ­ವಾಗಿರುವ ಜಾತಿ ಪಟ್ಟಿ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್. ಕಾಂತರಾಜ ಅವರು,  ‘ಪಟ್ಟಿಯಲ್ಲಿ ಇರುವಷ್ಟು ಜಾತಿಗಳು ಮಾತ್ರ ರಾಜ್ಯದಲ್ಲಿವೆ ಎಂದು ಭಾವಿಸ­ಬೇಕಿಲ್ಲ. ಪಟ್ಟಿಯಲ್ಲಿ ಇಲ್ಲದ ಜಾತಿ­ಗಳನ್ನೂ ಸಮೀಕ್ಷೆಯಲ್ಲಿ ಪರಿಗಣಿಸ­ಲಾಗುತ್ತದೆ. ಸರ್ಕಾರದ ಬಳಿ ಇದ್ದ ಹಿಂದಿನ ಮೀಸಲಾತಿ ಪಟ್ಟಿ, ತಮ್ಮ ಜಾತಿ­ಯನ್ನು ಸೇರಿಸಿ ಎಂದು ಸಾರ್ವಜನಿ­ಕರಿಂದ, ಸಂಘ–ಸಂಸ್ಥೆಗಳಿಂದ ಬಂದ ಮನವಿ ಮತ್ತಿತರ ಮೂಲಗಳನ್ನು ಆಧರಿಸಿ ಈ ಜಾತಿ ಪಟ್ಟಿ ಸಿದ್ಧಪಡಿಸಲಾಗಿದೆ’ ಎಂದರು.

ಸ್ವಾತಂತ್ರ್ಯಾ ನಂತರ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ನಡೆಯಲಿರುವ ಜಾತಿ ಗಣತಿ ಏಪ್ರಿಲ್‌ 11ರಿಂದ ಆರಂಭವಾ­ಗಲಿದೆ. ಸಮೀಕ್ಷೆಗಾಗಿ 1,357 ಜಾತಿಗ­ಳನ್ನು ಗುರುತಿಸಲಾಗಿದೆ. ಇದಲ್ಲದೆ 101 ಪರಿಶಿಷ್ಟ ಜಾತಿಗಳನ್ನು, 50 ಪರಿಶಿಷ್ಟ ಪಂಗಡ­ಗಳನ್ನು ಪ್ರತ್ಯೇಕವಾಗಿ ಗುರುತಿ­ಸಲಾಗಿದೆ. ಪಟ್ಟಿಯಲ್ಲಿ ಇರುವ  ಒಟ್ಟು ಜಾತಿಗಳ ಸಂಖ್ಯೆ 1,508. ‘ಆದರೆ, ನಾವು ಸಿದ್ಧಪಡಿಸಿರುವುದು ರಾಜ್ಯದಲ್ಲಿ­ರುವ ಎಲ್ಲ ಜಾತಿಗಳ ಅಂತಿಮ ಪಟ್ಟಿ ಅಲ್ಲ, ಇದು ಅಧಿಕೃತ ಪಟ್ಟಿ ಎಂದೂ ಹೇಳುತ್ತಿಲ್ಲ. ಎಲ್ಲ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದಾಗಲೇ ಇಲ್ಲಿರುವ ಜಾತಿಗಳು ಎಷ್ಟು, ಅವು ಯಾವವು ಎಂಬ ನಿಖರ ಮಾಹಿತಿ ದೊರೆಯುತ್ತದೆ. ಈ ಪಟ್ಟಿಯಲ್ಲಿ ಹೆಸರಿ­ರುವ ಜಾತಿಗಳು ಮಾತ್ರ ರಾಜ್ಯದಲ್ಲಿ ಇವೆ, ಪಟ್ಟಿ­ಯಲ್ಲಿ ಇಲ್ಲದ ಜಾತಿಗಳು ಅಸ್ತಿತ್ವದಲ್ಲೇ ಇಲ್ಲ ಎಂಬ ವಾದ ನಮ್ಮದಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಭಯ ಬೇಡ: ಆಯೋಗ ಸಿದ್ಧಪಡಿಸಿರುವ ಪಟ್ಟಿ­ಯಲ್ಲಿ ವ್ಯಕ್ತಿಯೊಬ್ಬನ ಜಾತಿ ನಮೂದಾ­ಗಿ­ರದಿದ್ದರೆ ಆತಂಕಕ್ಕೆ ಒಳಗಾ­ಗುವ ಅವಶ್ಯಕತೆ ಇಲ್ಲ. ಆ ವ್ಯಕ್ತಿ ತನ್ನ ಜಾತಿ ಇಂಥದ್ದು ಎಂದು ಹೇಳಿದರೆ, ಸಮೀಕ್ಷೆಗೆ ಬಂದವರು ಅದನ್ನೇ ಬರೆದುಕೊಳ್ಳು­ತ್ತಾರೆ ಎಂದರು.

ವ್ಯಕ್ತಿಯೊಬ್ಬನ ಜಾತಿ ಇಂಥದ್ದು ಎಂಬುದನ್ನು ಘೋಷಿಸುವ ಮೊದಲು ಆ ವ್ಯಕ್ತಿಯ ಸಮ್ಮತಿ ದೊರೆ­ತಿರ­ಬೇಕು. ಪ್ರತಿ ಮನೆಗೆ ಭೇಟಿ ನೀಡಿ, ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ, ಅವರ ಜಾತಿ ಯಾವುದು ಎಂಬುದನ್ನು ದಾಖಲಿಸಿ ಸಹಿ ತೆಗೆದು­ಕೊಳ್ಳಲಾಗುತ್ತದೆ. ಸಹಿ ದೊರೆತ ನಂತರ ಆ ವ್ಯಕ್ತಿಯ ಜಾತಿ ಯಾವುದು ಎಂಬುದನ್ನು ಅಧಿಕೃತವಾಗಿ ಘೋಷಿಸ­ಬಹುದು ಎಂದು ವಿವರಿಸಿದರು.

‘ಬ್ರಾಹ್ಮಣ ಕ್ರಿಶ್ಚಿಯನ್’ ಸಮಸ್ಯೆ!
ಆಯೋಗದ ಜಾತಿ ಪಟ್ಟಿಯಲ್ಲಿ ‘ಬ್ರಾಹ್ಮಣ ಕ್ರಿಶ್ಚಿಯನ್’, ‘ಕುರುಬ ಕ್ರಿಶ್ಚಿಯನ್’, ‘ಬಿಲ್ಲವ ಕ್ರಿಶ್ಚಿಯನ್’ ಎಂಬೆಲ್ಲ ಹೆಸರುಗಳಿವೆ. ಜಾತಿಗಳನ್ನು ಈ ರೀತಿ ಗುರುತಿಸುವ ಮೂಲಕ ಮತಾಂತರ ಹೊಂದಿದವರಿಗೂ ಮೀಸಲಾತಿ ಕಲ್ಪಿ­ಸುವ ಹುನ್ನಾರವನ್ನು ರಾಜ್ಯ ಸರ್ಕಾರ ನಡೆಸುತ್ತಿದೆ ಎಂದು ವಿರೋಧ ಪಕ್ಷ ಬಿಜೆಪಿ ದೂರಿತ್ತು. ಇಂಥ ಹೆಸರು ಪಟ್ಟಿಯಲ್ಲಿ ಇರುವುದು ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಗೆ ಒಳಗಾಗಿತ್ತು.

ಆದರೆ, ಪ್ರತಿಪಕ್ಷದ ಆರೋಪವನ್ನು ಕಾಂತರಾಜ ಸ್ಪಷ್ಟವಾಗಿ ನಿರಾಕರಿಸಿದರು. ‘ಜಾತಿಗಳ ಹೆಸರು ಕೊಡಿ ಎಂದು ಆಯೋಗದ ವತಿಯಿಂದ ಕೇಳಲಾಗಿತ್ತು. ಆಗ ಕೆಲವರು ತಮ್ಮ ಧರ್ಮ ಮತ್ತು ಜಾತಿಗಳೆರಡನ್ನೂ ಸೇರಿಸಿ ಕೊಟ್ಟಿದ್ದಾರೆ. ಸಮೀಕ್ಷೆಯ ವೇಳೆ, ವ್ಯಕ್ತಿಯೊಬ್ಬ ತನ್ನ ಜಾತಿ ‘ಕ್ರಿಶ್ಚಿಯನ್ ಮಡಿವಾಳ’ ಎಂದು ಹೇಳಿದರೆ ನಾವು ಹಾಗೆಯೇ ದಾಖಲಿಸಿ­ಕೊಳ್ಳುತ್ತೇವೆ’ ಎಂದು ಹೇಳಿದರು.

‘ಆದರೆ, ಇಂಥ ವಿಚಾರಗಳಲ್ಲಿ ವ್ಯಕ್ತಿ ಹೇಳಿದ್ದೇ ಅಂತಿಮವಾಗುವುದಿಲ್ಲ. ಆತ ಹೇಳಿಕೊಂಡ ಜಾತಿ ರಾಜ್ಯದಲ್ಲಿ ಇದೆಯೇ, ಹಾಗೊಂದು ಜಾತಿ ಇರಲು ಸಾಧ್ಯವೇ ಎಂಬುದನ್ನು ಸಮೀಕ್ಷೆ ಪೂರ್ಣ­ಗೊಂಡ ನಂತರ ಪರಿಶೀಲಿಸುತ್ತೇವೆ. ಆ ಹೆಸರಿನ ಜಾತಿ ಸಂಘಟನೆಗಳ ಮುಖಂಡರ ಬಳಿ ಮಾಹಿತಿ ಪಡೆಯು­ತ್ತೇವೆ. ಪೂರಕ ದಾಖಲೆಗಳನ್ನು ಕೇಳುತ್ತೇವೆ. ಆತ ಹೇಳಿದ್ದು ಧರ್ಮವೋ, ಜಾತಿಯೋ ಎಂಬುದನ್ನು ನಾವು ತೀರ್ಮಾನಿಸುತ್ತೇವೆ’ ಎಂದು ಅವರು ವಿವರಿಸಿದರು.

‘ಕ್ರಿಶ್ಚಿಯನ್ ಮಡಿವಾಳ ಜಾತಿಗೆ ಸೇರಿದವ ತಾನು ಎಂದು ಹೇಳಿಕೊಂಡ ವ್ಯಕ್ತಿ ಮತಾಂತರಗೊಂಡವ ಆಗಿದ್ದರೆ, ಅದರ ಪ್ರಕ್ರಿಯೆ ಸರಿಯಾಗಿ ಆಗಿದೆಯೇ ಎಂಬುದನ್ನೂ ಖಚಿತಪಡಿಸಿಕೊಳ್ಳುತ್ತೇವೆ. ಮೀಸಲಾತಿ ಸಿಗುವುದು ಸಾಮಾಜಿಕ­ವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿ­ದವರಿಗೆ ಮಾತ್ರ. ಆತ ಒಂದು ಜಾತಿಯ ಹೆಸರು ಹೇಳಿಕೊಂಡ ಎಂಬ ಕಾರಣಕ್ಕೇ ಮೀಸಲಾತಿ ದೊರೆಯುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಪಟ್ಟಿ ಅಂತಿಮವಲ್ಲ
ವಿವಿಧ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ಆಯೋಗ ಸಿದ್ಧಪಡಿಸಿರುವ ಜಾತಿ ಪಟ್ಟಿ ಅಂತಿಮ ಅಲ್ಲ. ಅದು ಸಮೀಕ್ಷಾ ಉದ್ದೇಶಕ್ಕೆ ಸಿದ್ಧಪಡಿಸಿರುವ ಒಂದು ಸಲಕರಣೆ ಮಾತ್ರ.
– ಎಚ್. ಕಾಂತರಾಜ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT