ADVERTISEMENT

ಜೆಡಿಎಸ್‌ನಲ್ಲಿ ತೀವ್ರ ತಳಮಳ

ಮೇಲ್ಮನೆ ಚುನಾವಣೆ: ಮುಖಂಡರ ಅಸ್ಥಿರ ನಿಲುವು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2015, 19:39 IST
Last Updated 28 ನವೆಂಬರ್ 2015, 19:39 IST

ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ, ಜಾತ್ಯತೀತ ಜನತಾದಳ (ಜೆಡಿಎಸ್‌) ಪಕ್ಷದಲ್ಲಿ ತಳಮಳ ಉಂಟಾಗಿದೆ.
ನಿಲುವು ಬದಲಾಯಿಸಿದ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ  ಅವರು, ‘ಕಾಂಗ್ರೆಸ್‌ ಜೊತೆ ಮೈತ್ರಿ ಇಲ್ಲವೇ ಇಲ್ಲ’ ಎಂದು ಖಡಾಖಂಡಿತವಾಗಿ ಹೇಳಿರುವುದು ಕೆಲವು ಶಾಸಕರಿಗೆ ಬೇಸರ ಉಂಟು ಮಾಡಿದೆ. 

‘ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಳ್ಳಬೇಕು ಎಂಬ ಆಸೆ ಪಕ್ಷದ ದೊಡ್ಡವರಿಗೆ (ದೇವೇಗೌಡ) ಇತ್ತು. ಅದರೆ ಚಿಕ್ಕವರಿಗೆ (ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ) ಬೇಕಿರಲಿಲ್ಲ’ ಎಂದು ಪಕ್ಷದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೈತ್ರಿ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್‌  ಜೊತೆ ಮಾತುಕತೆ ನಡೆಸಲು ದೇವೇಗೌಡರೇ ಒಪ್ಪಿಗೆ ಸೂಚಿಸಿದ್ದರು. ಆದರೆ ನಂತರ ಮೈತ್ರಿ ಬೇಡವೆಂದು ಅವರೇ ಹೇಳಿಬಿಟ್ಟರು’ ಎಂದು ಈ ಮುಖಂಡರು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್‌ ಜೊತೆ ಮೈತ್ರಿ ಬಗ್ಗೆ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆಯಲ್ಲೂ ಚರ್ಚೆಯಾಗಿತ್ತು ಎನ್ನಲಾಗಿದೆ.

ಎಚ್‌ಡಿಕೆಗೆ ಸಿಟ್ಟೇಕೆ?: ದಿಗ್ವಿಜಯ್‌ ಸಿಂಗ್‌ ಜೊತೆ ಮಾತುಕತೆ ನಡೆಸುವಂತೆ ಶಾಸಕ ಜಮೀರ್‌ ಅಹಮದ್‌ ಖಾನ್‌ ಅವರಿಗೆ ದೇವೇಗೌಡರು ಸೂಚಿಸಿದ್ದು ನಿಜ. ಆದರೆ, ‘ನಾನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ. ನನ್ನ ಗಮನಕ್ಕೆ ತರದೇ ಮಾತುಕತೆಗೆ ಮುಂದಾಗಿದ್ದು ಹೇಗೆ’ ಎಂಬ ಪ್ರಶ್ನೆಯನ್ನು ಕುಮಾರಸ್ವಾಮಿ ಮುಂದಿಟ್ಟಿದ್ದಾರೆ. ಅವರಿಗೆ ಹೇಳದೆ ಮೈತ್ರಿ ಮಾತುಕತೆ ನಡೆಸಿದ್ದು ಕುಮಾರಸ್ವಾಮಿ ಸಿಟ್ಟಿಗೆ ಒಂದು ಕಾರಣ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅಪ್ಪ, ಮಗನ ನಡುವೆ ಶುಕ್ರವಾರ ರಾತ್ರಿ ನಡೆದ ಮಾತುಕತೆಯಲ್ಲೂ ಈ ವಿಚಾರ ಪ್ರಸ್ತಾಪ ಆಗಿದೆ. ‘ಮಾತುಕತೆ ಬೇಡ ಎಂದು ನಾನು ಹೇಳಿದ್ದೆ’ ಎಂದು ಕುಮಾರಸ್ವಾಮಿ ದೇವೇಗೌಡರಿಗೆ ಸ್ಪಷ್ಟಪಡಿಸಿದ್ದಾರೆ. ‘ನೀನು ಬೇಡ ಎಂದಿದ್ದು ನನಗೆ ಗೊತ್ತಾಗಿರಲಿಲ್ಲ’ ಎಂದು ದೇವೇಗೌಡರು ಹೇಳಿದ್ದಾರೆ ಎನ್ನಲಾಗಿದೆ.

‘ಪಕ್ಷ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡರೆ ಕೈಕಟ್ಟಿಸಿಕೊಂಡಂತೆ ಆಗುತ್ತದೆ. ಸ್ವತಂತ್ರವಾಗಿ ಸ್ಪರ್ಧಿಸಿದರೆ ಪಕ್ಷದ ಸಂಘಟನೆ ಗಟ್ಟಿ ಮಾಡಿಕೊಳ್ಳಲಿಕ್ಕೂ ಸಾಧ್ಯ, ಹೆಚ್ಚಿನ ಸ್ಥಾನ ಗೆಲ್ಲುವ ಅವಕಾಶವೂ ಇರುತ್ತದೆ. ಈ ಹಂತದಲ್ಲಿ ಬೇರೆ ವಿಚಾರಗಳನ್ನೆಲ್ಲ ಪಕ್ಕಕ್ಕಿಟ್ಟು, ಪಕ್ಷದ ಸಂಘಟನೆ ಬಲಪಡಿಸುವತ್ತ ಗಮನ ಹರಿಸಬೇಕು’ ಎಂಬ ತೀರ್ಮಾನಕ್ಕೆ ಇಬ್ಬರೂ ಬಂದಿದ್ದಾರೆ ಎನ್ನಲಾಗಿದೆ.

ಸಿ.ಎಂ ಬಳಿ ವಿಷಾದ: ಇದೇ ವೇಳೆ ಜೆಡಿಎಸ್‌ ಶಾಸಕರಾದ ಜಮೀರ್‌, ಎನ್‌. ಚೆಲುವರಾಯಸ್ವಾಮಿ ಮತ್ತು ಅಖಂಡ ಶ್ರೀನಿವಾಸ ಮೂರ್ತಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶನಿವಾರ ಭೇಟಿ ಮಾಡಿ, ಪಕ್ಷದೊಳಗಿನ ವಿರೋಧದ ಕಾರಣ ಮೈತ್ರಿ ಮಾತುಕತೆಯಿಂದ ಹಿಂದೆ ಸರಿಯುವಂತಾಗಿದೆ ಎಂದು ತಿಳಿಸಿದ್ದಾರೆ.

‘ರಾಜಕೀಯ, ಚುನಾವಣಾ ಮೈತ್ರಿ ಬಗ್ಗೆ ಚರ್ಚಿಸಿಯೇ ಇಲ್ಲ’ ಎಂದು ಶ್ರೀನಿವಾಸಮೂರ್ತಿ ಮತ್ತು ಜಮೀರ್‌ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು. ಆದರೆ, ಮೈತ್ರಿ ಸಾಧ್ಯವಾಗದ ಬಗ್ಗೆ  ಜೆಡಿಎಸ್‌ ಶಾಸಕರು ಸಿ.ಎಂ ಬಳಿ ವಿಷಾದ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.
*
ಚೆಲುವರಾಯಸ್ವಾಮಿ ಗರಂ
ಬೆಂಗಳೂರು:
‘ಚೆಲುವರಾಯಸ್ವಾಮಿ ಯಾವ ಪಕ್ಷದ ಏಜೆಂಟ್‌ ಎಂಬುದು ಗೊತ್ತಾಗುತ್ತಿಲ್ಲ’ ಎಂದು ಕುಮಾರಸ್ವಾಮಿ ಮೈಸೂರಿನಲ್ಲಿ ಆಡಿದ ಮಾತಿಗೆ ಚೆಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ನಾನೂ ಪಕ್ಷಕ್ಕಾಗಿ ದುಡಿದಿದ್ದೇನೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದವರು ಇಂಥ ಮಾತುಗಳನ್ನು ಆಡಬಾರದಿತ್ತು’ ಎಂದು ಅವರು ಟಿ.ವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.