ADVERTISEMENT

ಜೋಡಿ ಮಾರ್ಗಕ್ಕೆ ಅಸ್ತು

ಹುಟಗಿ, ಗದಗ ಮಧ್ಯೆ: ₹ 2,058 ಕೋಟಿ ವೆಚ್ಚ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2015, 19:30 IST
Last Updated 16 ಸೆಪ್ಟೆಂಬರ್ 2015, 19:30 IST

ನವದೆಹಲಿ (ಪಿಟಿಐ): ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು  ಹುಟಗಿ–ಕೂಡಗಿ–ಗದಗ ಜೋಡಿ ರೈಲು ಮಾರ್ಗ ನಿರ್ಮಾಣಕ್ಕೆ  ಬುಧವಾರ ಹಸಿರು ನಿಶಾನೆ ತೋರಿಸಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ  ಸಂಪುಟ ಸಮಿತಿಯು ಮುಂಬೈ ಮತ್ತು ಬೆಂಗಳೂರು ರೈಲು ಮಾರ್ಗಗಳ ಮಧ್ಯೆ ಸಂಪರ್ಕ ಕಲ್ಪಿಸುವ ₹ 2,058 ಕೋಟಿ  ಅಂದಾಜು ವೆಚ್ಚದ ಮಹತ್ವದ ಯೋಜನೆಗೆ ಒಪ್ಪಿಗೆ ನೀಡಿದೆ.

ಬೆಂಗಳೂರು–ಗುಂತಕಲ್–ಪುಣೆ–ಮುಂಬೈ ಹಾಗೂ ಹೊಸಪೇಟೆ–ಹುಬ್ಬಳ್ಳಿ–ಗೋವಾ ರೈಲು ಮಾರ್ಗಗಳ ಮಧ್ಯೆ ಸಂಪರ್ಕ ಕಲ್ಪಿಸುವ   ಏಕೈಕ ರೈಲು ಮಾರ್ಗವಾದ ಹುಟಗಿ–ಕೂಡಗಿ–ಗದಗ ಮಾರ್ಗದಲ್ಲಿ  ಸದ್ಯ ಒಂದೇ ರೈಲು ಮಾರ್ಗವಿದೆ.

ಕೈಗಾರಿಕೆಗಳಿಗೆ ಶುಕ್ರದೆಸೆ: ಹುಟಗಿ–ಗದಗ ಮಾರ್ಗದಲ್ಲಿ ಭಾರಿ ಪ್ರಮಾಣದಲ್ಲಿ ತಲೆ ಎತ್ತಿರುವ ಉಕ್ಕು, ಕಬ್ಬಿಣ, ಸಿಮೆಂಟ್‌ ಹಾಗೂ ವಿದ್ಯುತ್ ಉತ್ಪಾದನಾ ಉದ್ಯಮಗಳ ಬೆಳವಣಿಗೆಗೆ ಈ ಯೋಜನೆ ನಾಂದಿ ಹಾಡಲಿದೆ.

ಒಂದು ವೇಳೆ ಉದ್ದೇಶಿತ ಜೋಡಿ ರೈಲು ಮಾರ್ಗ ಕಾರ್ಯಾರಂಭ ಮಾಡಿದ ಲ್ಲಿ ಈ ಭಾಗದಲ್ಲಿ ಸರಕು ಸಾಗಣೆ ರೈಲುಗಳ ಓಡಾಟ ಹೆಚ್ಚಾಗಲಿದ್ದು, ಸಹಜವಾಗಿ ಉದ್ಯಮಗಳ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಕೇಂದ್ರ ಸರ್ಕಾರದ ಪ್ರಕಟಣೆ ಹೇಳಿದೆ.

ಆ ಭಾಗದಲ್ಲಿ  ಕೈಗಾರಿಕಾ ಚಟುವಟಿಕೆ ಹೆಚ್ಚಾಗಿದ್ದರಿಂದ ಹೆಚ್ಚುವರಿಯಾಗಿ ಸರಕು ಸಾಗಣೆ ರೈಲುಗಳನ್ನು ಓಡಿಸುವಂತೆ ಉದ್ಯಮದ ಒತ್ತಡವೂ ಹೆಚ್ಚಿತ್ತು.  ಜೋಡಿ ರೈಲು ಮಾರ್ಗ ನಿರ್ಮಾಣದೊಂದಿಗೆ ಆ ಭಾಗದ ಕೈಗಾರಿಕೋದ್ಯಮಗಳ ಬಹು ದಿನದ ಬೇಡಿಕೆ ಈಡೇರುತ್ತದೆ. ಹೊಸ ಅವಕಾಶ ತೆರೆದುಕೊಳ್ಳುತ್ತವೆ.

ಕೂಡಗಿ ವಿದ್ಯುತ್‌ ಸ್ಥಾವರಕ್ಕೆ ಅನುಕೂಲ: ಹುಟಗಿ–ಕೂಡಗಿ ಮಧ್ಯೆ 134 ಕಿ.ಮೀ ಜೋಡಿ ರೈಲು ಮಾರ್ಗ ನಿರ್ಮಾಣಕ್ಕೆ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್‌ ನಿಗಮ (ಎನ್‌ಟಿಪಿಸಿ) ಈಗಾಗಲೇ ಸರ್ಕಾರಕ್ಕೆ ₹ 946 ಕೋಟಿ  ಪಾವತಿಸಿದೆ.

ಕೂಡಗಿಯಲ್ಲಿ ಎನ್‌ಟಿಪಿಸಿಯ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ ನಿರ್ಮಾಣ ಯೋಜನೆ ಚಾಲನೆಯಲ್ಲಿದ್ದು, ರೈಲುಮಾರ್ಗ ಮೇಲ್ದರ್ಜೆಗೆ ಏರಿಸುವುದರಿಂದ ಕಲ್ಲಿದ್ದಲು ಸಾಗಾಣಿಕೆಗೆ ಸಾಕಷ್ಟು ಅನುಕೂಲವಾಗಲಿದೆ.

ಯೋಜನೆಗೆ ತಗಲುವ ಒಟ್ಟು ವೆಚ್ಚದ ₹ 2,058 ಕೋಟಿಯಲ್ಲಿ ಉಳಿದ ಭಾಗವಾದ ₹ 1107.58 ಕೋಟಿ  ಹಣವನ್ನು ಸರ್ಕಾರ  ಬಜೆಟ್‌ನಲ್ಲಿ ತೆಗೆದಿರಿಸಿದೆ.

ಸಂತಸ: ಇದು ಅನೇಕ ವರ್ಷಗಳ ಬೇಡಿಕೆ. ಕೊನೆಗೂ ಮಂಜೂರಾತಿ ಸಿಕ್ಕಿದ್ದರಿಂದ ಸಂತಸವಾಗಿದೆ. ಈ ಭಾಗದಲ್ಲಿ            ವಹಿವಾಟಿಗೆ ಅನುಕೂಲವಾಗಲಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ವಸಂತ ಲದವಾ ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT