ADVERTISEMENT

ಜೋರು ಮಳೆಗೆ ಮೂವರ ಬಲಿ

ಅಘನಾಶಿನಿಗೆ ಪ್ರವಾಹ: 190 ಕುಟುಂಬ ಸ್ಥಳಾಂತರ – ಗಂಜಿ ಕೇಂದ್ರ ಆರಂಭ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2014, 9:48 IST
Last Updated 1 ಆಗಸ್ಟ್ 2014, 9:48 IST

ಬೆಂಗಳೂರು/ಹುಬ್ಬಳ್ಳಿ/ಶಿವಮೊಗ್ಗ/ ಚಿಕ್ಕಮಗಳೂರು/ಮಡಿಕೇರಿ/ಬೆಳಗಾವಿ: ರಾಜ್ಯದ ಉತ್ತರಕನ್ನಡ, ಶಿವಮೊಗ್ಗ, ಬೆಳಗಾವಿ ಜಿಲ್ಲೆಗಳಲ್ಲಿ  ಸುರಿದ ಜೋರು ಮಳೆಗೆ ಮೂವರು ಬಲಿಯಾಗಿ­ದ್ದಾರೆ. ಲಿಂಗನಮಕ್ಕಿ, ತುಂಗಭದ್ರಾ, ಕೆಆರ್‌ಎಸ್‌ ಜಲಾಶಯಗಳ ಒಳಹರಿವು ಹೆಚ್ಚಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಚುರುಕುಗೊಂಡಿದ್ದು ಶೃಂಗೇರಿ, ಕೊಪ್ಪ ಹಾಗೂ ಎನ್‌.ಆರ್‌.ಪುರ ತಾಲ್ಲೂಕು­ಗಳ ಎಲ್ಲ ಶಾಲಾ ಕಾಲೇಜು­ಗಳಿಗೆ ಗುರುವಾರ ರಜೆ ನೀಡಲಾಗಿತ್ತು.

ಮೂಡಿಗೆರೆ  ಕಳಸ, ಹೊರನಾಡು ಹಾಗೂ ಕುದುರೆ­ಮುಖ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿಯೂ  ಬಿರುಸಿನ ಮಳೆಯಾಗಿದೆ. ಭಾಗಮಂಡಲ ಬಳಿ ಕಾವೇರಿ ನದಿ ನೀರಿನ ಹರಿವು ಹೆಚ್ಚಳವಾಗಿದೆ. ತ್ರಿವೇಣಿ ಸಂಗಮಕ್ಕೆ ಬಂದು ಸೇರುವ ಕನ್ನಿಕಾ ನದಿ ಕೂಡ ರಭಸದಿಂದ ಹರಿಯುತ್ತಿದೆ.

ಗೋಡೆ ಕುಸಿದು ಸಾವು: ಹಾವೇರಿ ಜಿಲ್ಲೆಯ ರಾಣೆಬೆನ್ನೂರಿ­ನಲ್ಲಿ  ಮನೆಯ ಮೇಲೆ ಆವರಣ ಗೋಡೆ ಕುಸಿದು ಎಕೆಜಿ ಕಾಲೊನಿಯ ರಸೂಲ್‌ಬೀ ಜಾಫರ್‌ಸಾಬ್‌ ಬೆಳವಿಗಿ (45) ಮತ್ತು ಅವರ ಪುತ್ರಿ ಫಾತೀಮಾಬೀ (2) ಮೃತಪಟ್ಟಿದ್ದಾರೆ. ಉ.ಕ. ಜಿಲ್ಲೆ ಮುಂಡಗೋಡ ತಾಲ್ಲೂಕಿನ  ಮೈನಳ್ಳಿ ಗ್ರಾಮದಲ್ಲಿ ಎಮ್ಮೆ ರಕ್ಷಿಸಲು ಹೋದ ದುಂಡು ಯಾನೆ ರೊಂಗು ಧೂಳು ಗಾವಡೆ (25) ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಎಲ್ಲ ನದಿಗಳು ತುಂಬಿ ಹರಿಯುತ್ತಿವೆ.

ಕುಮಟಾ ಬಳಿಯ ಅಘನಾಶಿನಿ ನದಿಗೆ ಪ್ರವಾಹ ಬಂದು ಕೆಲ ಗ್ರಾಮಗಳಿಗೆ ನುಗ್ಗಿ 190 ಕುಟುಂಬಗಳ ಸುಮಾರು 300 ಜನರನ್ನು  ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ದ್ವೀಪ ಗ್ರಾಮ ಐಗಳಕೂರ್ವೆ ಸಂಪೂರ್ಣ ಜಲಾವೃತ­ಗೊಂಡಿದೆ. ದೀವಗಿ. ಖೈರೆ, ಬೊಗರಿಬೈಲ್‌, ಹೆಗಡೆ ಗ್ರಾಮಗಳಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಚಂಡಿಕಾ ಹೊಳೆ ತುಂಬಿದ್ದ ರಿಂದ ಶಿರಸಿ–ಕುಮಟಾ ರಸ್ತೆಯಲ್ಲಿ ಬೆಳಿಗ್ಗೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸಿದ್ದಾಪುರದಲ್ಲಿ ಮಾಣಿ ಹೊಳೆ ತುಂಬಿ ಸೇತುವೆ ಮೇಲೆ ಹರಿದಿದ್ದರಿಂದ ಬುಧವಾರ ರಾತ್ರಿ ಶಿರಸಿ–ಸಿದ್ದಾಪುರ ರಸ್ತೆ ಸಂಚಾರ ನಿಂತಿತ್ತು. ವರದಾ ನದಿ ತುಂಬಿ ಹರಿಯುತ್ತಿ­ರುವುದರಿಂದ ಶಿರಸಿ ತಾಲ್ಲೂಕಿನ ಬನವಾಸಿ ಹಾಗೂ ಸಾಗರ ತಾಲ್ಲೂಕಿನ ತಾಳಗುಪ್ಪ ಬಳಿ 1000 ಎಕರೆಗೂ ಹೆಚ್ಚಿನ ಭತ್ತ, ಕಬ್ಬಿನ ಗದ್ದೆಗಳು ಜಲಾವೃತವಾಗಿವೆ.

6 ಸೇತುವೆ ಜಲಾವೃತ: ಮಹಾರಾಷ್ಟ್ರದಿಂದ ರಾಜ್ಯಕ್ಕೆ ಗುರುವಾರ 95,260 ಕ್ಯೂಸೆಕ್‌ ನೀರು ಬರುತ್ತಿದ್ದು  ಕೃಷ್ಣಾ ಮತ್ತು ಉಪನದಿಗಳ ಒಳ ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕೆಳಮಟ್ಟದ ಆರೂ ಸೇತುವೆ­ಗಳು ಮುಳುಗಡೆಯಾಗಿ ಸಂಚಾರಕ್ಕೆ ಅಡಚಣೆಯಾಗಿದೆ. ಇದೇ ಜಿಲ್ಲೆಯ ಖಾನಾಪೂರ ತಾಲ್ಲೂಕಿನಲ್ಲಿ ಮಲಪ್ರಭಾ, ಮಹಾದಾಯಿ, ಪಾಂಡರಿ ನದಿಗಳು ತುಂಬಿ ಹರಿಯುತ್ತಿವೆ.  ಗುರುವಾರ ಮಧ್ಯಾಹ್ನದವರೆಗೂ ಬೆಳಗಾವಿ–ಪಣಜಿ ರಾಷ್ಟ್ರೀಯ ಹೆದ್ದಾರಿ, ಜಾಂಬೋಟಿ– ಜತ್ತ ಹಾಗೂ ಸಿಂಧನೂರು –ಹೆಮ್ಮಡಗಾ ರಾಜ್ಯ ಹೆದ್ದಾರಿಗಳು ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ವಾಹನ ಸ್ಥಗಿತಗೊಂಡಿತ್ತು.

ಯಾತ್ರಿಕರ ಪರದಾಟ: ಹೊಸನಗರ ತಾಲ್ಲೂಕಿನ ಬಳಿ ಭಾರಿ ಗಾತ್ರದ ಮರವೊಂದು ಬಿದ್ದು ಶಿವಮೊಗ್ಗ– ಕೊಲ್ಲೂರು ರಸ್ತೆಯಲ್ಲಿ ಮಧ್ಯಾಹ್ನದವರೆಗೂ ಸಂಚಾರ ಬಂದ್ ಆಗಿತ್ತು. ಹೊಸನಗರ ಸಮೀಪದ ತೀರ್ಥಹಳ್ಳಿ ರಸ್ತೆ ಕುಸಿದ ಪರಿಣಾಮ ವಾಹನಗಳು ಬಳಸು ಮಾರ್ಗದಲ್ಲಿ ಸಂಚರಿಸುತ್ತಿವೆ. ಕೋಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿ.ಹಳ್ಳಿ ಕೆರೆ ಏರಿ ಒಡೆದು ಅಪಾರ ನೀರು ಪೋಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.