ADVERTISEMENT

ಡಾ.ಸಿ.ಎನ್.ಆರ್‌, ಅಣತಿ ಅವರಿಗೆ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2016, 19:46 IST
Last Updated 23 ಏಪ್ರಿಲ್ 2016, 19:46 IST
ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಪ್ರೊ.ತೀ.ನಂ. ಶ್ರೀಕಂಠಯ್ಯ ಸಾಹಿತ್ಯ ವಿಮರ್ಶೆ ಪ್ರಶಸ್ತಿಯನ್ನು ಡಾ.ಸಿ.ಎನ್.ರಾಮಚಂದ್ರನ್ ಹಾಗೂ ಡಾ. ಬೇಂದ್ರೆ ಕಾವ್ಯ ಪ್ರಶಸ್ತಿಯನ್ನು ಸತ್ಯನಾರಾಯಣ ರಾವ್ ಅಣತಿ ಅವರಿಗೆ ಪ್ರದಾನ ಮಾಡಲಾಯಿತು
ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಪ್ರೊ.ತೀ.ನಂ. ಶ್ರೀಕಂಠಯ್ಯ ಸಾಹಿತ್ಯ ವಿಮರ್ಶೆ ಪ್ರಶಸ್ತಿಯನ್ನು ಡಾ.ಸಿ.ಎನ್.ರಾಮಚಂದ್ರನ್ ಹಾಗೂ ಡಾ. ಬೇಂದ್ರೆ ಕಾವ್ಯ ಪ್ರಶಸ್ತಿಯನ್ನು ಸತ್ಯನಾರಾಯಣ ರಾವ್ ಅಣತಿ ಅವರಿಗೆ ಪ್ರದಾನ ಮಾಡಲಾಯಿತು   

ಶಿವಮೊಗ್ಗ: ಡಾ.ಸಿ.ಎನ್. ರಾಮಚಂದ್ರನ್‌ ಅವರ ವಿಮರ್ಶೆಯಲ್ಲಿ ಸಾಹಿತ್ಯ ಮೀಮಾಂಸೆಯ ಆಳವಾದ ಅಧ್ಯಯನವನ್ನು ಕಾಣಬಹುದು ಎಂದು ಮೈಸೂರಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಯು.ಎಚ್.ಗಣೇಶ್ ಹೇಳಿದರು.

ನಗರದ ಕರ್ನಾಟಕ ಸಂಘದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರ ಬಗ್ಗೆ ಅವರು ಮಾತನಾಡಿದರು. ‘ಸಾಹಿತ್ಯದ ಲಿಖಿತ ಪರಂಪರೆ ಬಗ್ಗೆ ನಾವು ಗಮನಿಸಿದ್ದೇವೆ. ಆದರೆ, ಅನುವಾದ ಸಂದರ್ಭದಲ್ಲಿ ಮೌಖಿಕ ಸಾಹಿತ್ಯ ಪರಂಪರೆಯ ಕಾಲದಲ್ಲಿ ಹೇಗೆ ಉತ್ಕೃಷ್ಟ ಸಾಹಿತ್ಯದ ಲಕ್ಷಣಗಳಿವೆ ಎಂಬುದನ್ನು ರಾಮಚಂದ್ರನ್ ಅವರ ವಿಮರ್ಶೆಗಳಲ್ಲಿ ನೋಡಬಹುದು’ ಎಂದರು.

ವಿಮರ್ಶಕ ಪ್ರೊ.ಟಿ.ಪಿ. ಅಶೋಕ ಮಾತನಾಡಿ, ಸತ್ಯನಾರಾಯಣ ಆಣತಿ ಅವರ ಕಾವ್ಯದಲ್ಲಿ ಅಡಿಗರು ಮತ್ತು ಬೇಂದ್ರೆ ಅವರ ಪ್ರಭಾವ ಕಂಡರೆ, ಗದ್ಯದಲ್ಲಿ ಅನಂತಮೂರ್ತಿಯವರ ನೆರಳಿದೆ. ಇದರ ಮಧ್ಯೆಯೂ ಆಣತಿ ಅವರು ಆರೋಗ್ಯಕರವಾಗಿ ತಮ್ಮದೇ ಆದ ಹಾದಿಯನ್ನು ಕಷ್ಟದಿಂದ ರೂಢಿಸಿಕೊಂಡಿರುವುದನ್ನು ಕಾಣಬಹುದು ಎಂದು ಅಭಿಪ್ರಾಯಪಟ್ಟರು.

ಆಣತಿ ಅವರ ನಾಟಕದಲ್ಲಿ ಕಾಗೋಡು ಸತ್ಯಾಗ್ರಹವನ್ನು ನೋಡುವ ಬಗೆಯನ್ನು ಮತ್ತು ಕಾನೂನು ಕ್ರಮವನ್ನು ಎದುರಿಸುವುದನ್ನು ತುಂಬಾ ಸೂಕ್ಷ್ಮವಾಗಿ ಉಲ್ಲೇಖಿಸಿದ್ದಾರೆ ಎಂದರು.

ನಗರದ ಕರ್ನಾಟಕ ಸಂಘದ ವತಿಯಿಂದ ನೀಡಲಾಗುವ ಜೀವಮಾನ ಸಾಧನೆಗಾಗಿ ಪ್ರೊ.ತೀ.ನಂ. ಶ್ರೀಕಂಠಯ್ಯ ಸಾಹಿತ್ಯ ವಿಮರ್ಶೆ ಪ್ರಶಸ್ತಿಯನ್ನು ವಿಮರ್ಶಕ ಡಾ.ಸಿ.ಎನ್. ರಾಮಚಂದ್ರನ್‌ರಿಗೆ, ಡಾ. ಬೇಂದ್ರೆ ಕಾವ್ಯ ಪ್ರಶಸ್ತಿಯನ್ನು ಕವಿ, ನಾಟಕಕಾರ ಪ್ರೊ. ಸತ್ಯನಾರಾಯಣ ರಾವ್ ಅಣತಿ ಅವರಿಗೆ ಪ್ರದಾನ ಮಾಡಲಾಯಿತು. ಸಂಘದ ಅಧ್ಯಕ್ಷ ಪ್ರೊ.ಡಿ.ಎಸ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವ ಕಾರ್ಯದರ್ಶಿ ಡಾ.ಎಚ್.ಎಸ್. ನಾಗಭೂಷಣ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.