ADVERTISEMENT

‘ಡಿಜಿಟಲ್‌ ಮೌಲ್ಯಮಾಪನ’ಕ್ಕೆ ನಿಯಮ ಮೀರಿ ಟೆಂಡರ್‌

ತಾಂತ್ರಿಕವಾಗಿ ಮೊದಲಿದ್ದ ಸಂಸ್ಥೆಯಿಂದ ನಾಲ್ಕು ತಿಂಗಳು ಮೌಲ್ಯಮಾಪನ ತಡ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 19:30 IST
Last Updated 24 ಮಾರ್ಚ್ 2017, 19:30 IST

ಬೆಂಗಳೂರು: ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಿಯಮ ಉಲ್ಲಂಘಿಸಿ ‘ಡಿಜಿಟಲ್‌ ಮೌಲ್ಯಮಾಪನ’ದ ಗುತ್ತಿಗೆ ನೀಡಲಾಗಿದೆ.

ಯಾವುದೇ ಗುತ್ತಿಗೆಯನ್ನು   ಟೆಂಡರ್‌ನಲ್ಲಿ ಕಡಿಮೆ ಮೊತ್ತದ ಬಿಡ್‌ ಮಾಡಿದವರಿಗೆ ನೀಡಲಾಗುತ್ತದೆ. ಆದರೆ, ಇಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್‌ ಮಾಡಿದ ‘ಮೆರಿಟ್ರ್ಯಾಕ್‌ ಸರ್ವೀಸ್‌ ಪ್ರೈ.ಲಿ’ ಕಂಪೆನಿಗೆ ವಹಿಸಲಾಗಿದೆ.

‘ಟೆಂಡರ್‌ ಪ್ರಕ್ರಿಯೆ 2016ರ ಅಕ್ಟೋಬರ್‌ನಲ್ಲಿ ಪೂರ್ಣಗೊಂಡು ನವೆಂಬರ್‌ನಲ್ಲಿ ಕಾರ್ಯಾದೇಶ ನೀಡಲಾಗಿದೆ. ಆದರೆ, ಟೆಂಡರ್‌ ಪಡೆದ ಸಂಸ್ಥೆ ತಾಂತ್ರಿಕವಾಗಿ ವಿಫಲವಾಗಿದ್ದು, ಗುತ್ತಿಗೆ ಪಡೆದು ನಾಲ್ಕು ತಿಂಗಳಾದರೂ ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್‌ ಮತ್ತು ಡಿಜಿಟಲ್‌ ಮೌಲ್ಯಮಾಪನಕ್ಕೆ ಪೂರಕವಾದ ವ್ಯವಸ್ಥೆ ಕಲ್ಪಿಸಲು ವಿಫಲವಾಗಿದೆ’ ಎಂಬ ಆರೋಪ ಕೇಳಿಬಂದಿದೆ.

ADVERTISEMENT

ಈ ಸಂಬಂಧ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಅವರು ಮೆರಿಟ್ರ್ಯಾಕ್‌ ಸಂಸ್ಥೆಗೆ ಕಳೆದ ಜನವರಿ 25ರಂದು ಬರೆದಿರುವ ಪತ್ರದಲ್ಲಿ ‘ಡಿಜಿಟಲ್‌ ಮೌಲ್ಯಮಾಪನದಲ್ಲಿ ಸಾಕಷ್ಟು ತೊಂದರೆಗಳಾಗುತ್ತಿವೆ. ಅಲ್ಲದೆ, ಉತ್ತರ ಪತ್ರಿಕೆಗಳನ್ನು ತಪ್ಪಾದ ಕೋಡ್‌ ಸಂಖ್ಯೆಗಳಿಗೆ ಜೋಡಿಸಲಾಗುತ್ತಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

‘2016ರ ಅಕ್ಟೋಬರ್‌, ನವೆಂಬರ್‌, ಡಿಸೆಂಬರ್‌ನಲ್ಲಿ ಪೂರ್ಣಗೊಂಡ ನರ್ಸಿಂಗ್‌, ಹೋಮಿಯೋಪತಿ ಮುಂತಾದ ಪರೀಕ್ಷೆಗಳ ಉತ್ತರ ಪತ್ರಿಕೆ ಸ್ಕ್ಯಾನಿಂಗ್‌ ಸರಿಯಾಗಿ ಆಗಿರಲಿಲ್ಲ. ಇದರಿಂದ ಫಲಿತಾಂಶವೂ ವಿಳಂಬ ಆಗಿದೆ’ ಎಂಬ ಆರೋಪ ಕೇಳಿಬಂದಿದೆ. ತಾಂತ್ರಿಕವಾಗಿಯೂ ಮೊದಲಿತ್ತು: ಮೆರಿಟ್ರ್ಯಾಕ್‌ ಸರ್ವೀಸ್‌ ಹೆಚ್ಚಿನ ದರ ನಿಗದಿ ಮಾಡಿದ್ದರೂ, ತಾಂತ್ರಿಕ ಪರಿಶೀಲನೆ ಸಂದರ್ಭದಲ್ಲಿ ಹೆಚ್ಚಿನ ಅಂಕ ಗಳಿಸಿದೆ ಎಂಬ ಕಾರಣಕ್ಕೆ ಟೆಂಡರ್‌ ನೀಡಲಾಗಿತ್ತು. ಈಗ ಅದೇ ಸಂಸ್ಥೆ ತಾಂತ್ರಿಕವಾಗಿ ವಿಫಲ ಆಗಿರುವುದನ್ನು ತೋರಿಸುತ್ತಿದೆ.

ತೊಂದರೆ ಸರಿಯಾಗಿದೆ: ‘ಹೊಸ ಕಂಪೆನಿಯೊಂದಕ್ಕೆ ಗುತ್ತಿಗೆ ನೀಡಿದಾಗ ಆರಂಭದಲ್ಲಿ ಕೆಲ ತಾಂತ್ರಿಕ ತೊಂದರೆಗಳು ಕಂಡುಬಂದಿದ್ದವು. ಆದರೆ ಈಗ ಎಲ್ಲವೂ ಸರಿಯಾಗಿದೆ’ ಎಂದು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಮೌಲ್ಯಮಾಪನ ಡಾ.ಎಂ. ಕೆ. ರಮೇಶ್‌ ಹೇಳಿದರು.

‘2016ರ ವರ್ಷಾಂತ್ಯದಲ್ಲಿ ಫಾರ್ಮಸಿ, ಆಯುರ್ವೇದ ಕೋರ್ಸ್‌ಗಳ ಮೌಲ್ಯಮಾಪನ ಸ್ವಲ್ಪ ವಿಳಂಬ ಆಗಿತ್ತು. ಈಗ ಫಲಿತಾಂಶ ಪ್ರಕಟಿಸಲಾಗಿದೆ. ಉಳಿದೆಲ್ಲ ಪರೀಕ್ಷೆಗಳ ಮೌಲ್ಯಮಾಪನ ಮತ್ತು ಫಲಿತಾಂಶ ನಿಗದಿತ ವೇಳೆಗೆ ಪ್ರಕಟಿಸಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದರು.

ಏನಿದು ಡಿಜಿಟಲ್‌ ಮೌಲ್ಯಮಾಪನ?
ರಾಜೀವ್‌ಗಾಂಧಿ ವಿಶ್ವವಿದ್ಯಾಲಯದಿಂದ ನಡೆಸುವ ಎಲ್ಲ ಕೋರ್ಸ್‌ಗಳ ಪರೀಕ್ಷೆಗಳ 52 ಪುಟದ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್‌ ಮಾಡಲಾಗುತ್ತದೆ. ನಂತರ ಅವುಗಳನ್ನು ಸರ್ವರ್‌ಗೆ ಅಪ್‌ಲೋಡ್‌ ಮಾಡಲಾಗುತ್ತದೆ.

ರಾಜ್ಯದ ವಿವಿಧೆಡೆ ಇರುವ ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪಕರು ತಮ್ಮ ಲಾಗಿನ್‌ ಐಡಿ ಬಳಸಿದಾಗ ಅವರಿಗೆ ಸ್ಕ್ಯಾನ್‌ ಮಾಡಿದ ಉತ್ತರ ಪತ್ರಿಕೆ ಲಭ್ಯ ಆಗುತ್ತದೆ. ಕಂಪ್ಯೂಟರ್‌ನಲ್ಲಿಯೇ ಮೌಲ್ಯಮಾಪನ ಮಾಡಿ ಅಂಕವನ್ನೂ ನಮೂದಿಸುತ್ತಾರೆ. ಯಾವ ಮೌಲ್ಯಮಾಪಕರಿಗೆ ಯಾವ ವಿದ್ಯಾರ್ಥಿಯ ಉತ್ತರ ಪತ್ರಿಕೆ ಹೋಗಿದೆ ಎಂಬುದು ತಿಳಿಯುವುದಿಲ್ಲ.

ಫಲಿತಾಂಶಪ್ರಕಟಿಸುವುದಕ್ಕೂ ಕೆಲವು ನಿಮಿಷಗಳ ಮುನ್ನ ಎಲ್ಲ ಉತ್ತರ ಪತ್ರಿಕೆಗಳನ್ನು  ಕ್ರೋಡೀಕರಿಸಿ ಪಟ್ಟಿ ಪ್ರಕಟಿಸಲಾಗುತ್ತದೆ.
ವಿವಿಧ ಕೋರ್ಸ್‌ಗಳು ಸೇರಿ ವರ್ಷಕ್ಕೆ 12 ಲಕ್ಷ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್‌ ಮಾಡಬೇಕಾಗುತ್ತದೆ. ಪ್ರತಿ ಪತ್ರಿಕೆಗೆ ₹ 24.90ರಂತೆ 2.98 ಕೋಟಿಗೆ ಟೆಂಡರ್‌ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.