ADVERTISEMENT

ಡಿಡಿಪಿಐ, ಬಿಇಒಗೆ ಸ್ವಂತ ಜಿಲ್ಲೆ ಇಲ್ಲ

ಸಚಿವ ಕಿಮ್ಮನೆ ರತ್ನಾಕರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2014, 19:30 IST
Last Updated 19 ಅಕ್ಟೋಬರ್ 2014, 19:30 IST

ಶಿವಮೊಗ್ಗ: ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇನ್ನು ಮುಂದೆ ಅವರ ಸ್ವಂತ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶವಿಲ್ಲ ಎಂಬ ಕಾಯ್ದೆ ರೂಪಿ ಸಲು ಸರ್ಕಾರ ಚಿಂತನೆ ನಡೆಸಿದ್ದು, ಈ ಸಂಬಂಧ ಶೀಘ್ರವೇ ಸುಗ್ರೀವಾಜ್ಞೆ ಹೊರಬೀಳಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.

ತಾಲ್ಲೂಕಿನ ಸೋಗಾನೆ ಗ್ರಾಮದಲ್ಲಿ ಭಾನುವಾರ ನಡೆದ ರಸ್ತೆ ಕಾಮ ಗಾರಿಯ ಶಂಕುಸ್ಥಾಪನಾ ಸಮಾರಂಭ ದಲ್ಲಿ ಅವರು ಮಾತನಾಡಿದರು.

ಹತ್ತು ವರ್ಷಗಳಿಂದ ಒಂದೇ ಊರಿನಲ್ಲಿ ಡಿಡಿಪಿಐ ಹಾಗೂ ಬಿಇಒಗಳು ಠಿಕಾಣಿ ಹೊಡೆದಿದ್ದಾರೆ. ಇನ್ನು ಮುಂದೆ ಸ್ವಂತ ಜಿಲ್ಲೆಯಲ್ಲಿ ಕರ್ತವ್ಯಕ್ಕೆ ಅವಕಾಶ ನೀಡುವುದಿಲ್ಲ. ಜೊತೆಗೆ, ಶಿಕ್ಷಣ ಇಲಾಖೆಯ ಆಡಳಿತಾತ್ಮಕ ಹುದ್ದೆಯಲ್ಲಿರುವ ಡಿಡಿಪಿಐಗೆ ಒಂದು ಜಿಲ್ಲೆ ಯಲ್ಲಿ ಎರಡು ವರ್ಷ, ಬಿಇಒಗಳಿಗೆ ಮೂರು ವರ್ಷ ಮಾತ್ರ ಸೇವೆ ಸಲ್ಲಿಸಲು ಅವಕಾಶ ನೀಡ ಲಾಗುವುದು ಎಂದು ಹೇಳಿದರು.

‘ನಿಯಮ ರೂಪಿಸಿದರೆ ಲಾಬಿ ಮಾಡಿಕೊಂಡು ಅದೇ ಜಿಲ್ಲೆಯಲ್ಲಿ ಉಳಿದುಬಿಡುತ್ತಾರೆ. ಅದನ್ನು ಕಾಯ್ದೆ­ಯಾಗಿ ರೂಪಿಸಿದರೆ ಬದಲಾವಣೆ ಮಾಡಲು ಅಸಾಧ್ಯ. ಇದರಿಂದ ಶಿಕ್ಷಣದ ಗುಣಮಟ್ಟವನ್ನು ಸುಧಾ ರಿಸಲು ಸಾಧ್ಯ ಎಂದ ಅವರು, ಈ ಸಂಬಂಧ ರಾಜ್ಯಪಾಲರ ಜೊತೆಗೂ ಚರ್ಚೆ ನಡೆಸಲಾಗಿದೆ. ಶೀಘ್ರವೇ ಈ ಪ್ರಸ್ತಾವ ಸಚಿವ ಸಂಪುಟದ ಮುಂದೆ ಬರಲಿದೆ’ ಎಂದು ಮಾಹಿತಿ ನೀಡಿದರು.

ಶಿಕ್ಷಣ ವಾರ್ತೆಯಲ್ಲಿ ಫೋಟೊ:
ರಾಜ್ಯದ ವಿವಿಧ ಶೈಕ್ಷಣಿಕ ಜಿಲ್ಲೆಗಳ ಶಿಕ್ಷಕರ ವಿಷಯವಾರು ಪ್ರಗತಿಯ ಬಗ್ಗೆ ಮಾಹಿತಿ ತೆಗೆದುಕೊಳ್ಳುವಂತೆ ಇಲಾ ಖೆಯ ಅಧಿಕಾರಿಗಳಿಗೆ ಸೂಚಿಸಿ ದ್ದೇನೆ. ಪ್ರಗತಿ ಕುಂಠಿತವಾದ ಶಿಕ್ಷಕರ ಫೋಟೊ, ಶಾಲೆ ಹಾಗೂ ಮೊಬೈಲ್‌ ನಂಬರ್‌ ಅನ್ನು ಶಿಕ್ಷಣ ವಾರ್ತೆಯಲ್ಲಿ ಪ್ರಕಟಿಸುವಂತೆ ಆದೇಶಿಸಿದ್ದೇನೆ ಎಂದ ಅವರು, ಶಿಕ್ಷಕರು ಎಲ್‌ಐಸಿ ಏಜೆಂಟ್‌ ಹಾಗೂ ಫೈನಾನ್ಸ್‌ ನಡೆಸುತ್ತಿರುವ ಬಗ್ಗೆ ದೂರುಗಳು ಬಂದಿವೆ ಅವರ ವಿರು ದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

‘ಒಂದನೇ ತರಗತಿಯಿಂದ ಎಸ್ಸೆಸ್ಸೆಲ್ಸಿಯ ತನಕ ಯಾವುದೇ ಪಬ್ಲಿಕ್‌ ಪರೀಕ್ಷೆಗಳು ಇಲ್ಲ. ಇದರಿಂದ ಗುಣಮಟ್ಟ ಹಾಳಾಗುತ್ತಿದೆ. ಮಧ್ಯ ದಲ್ಲಿ ಒಂದು ಪಬ್ಲಿಕ್‌ ಪರೀಕ್ಷೆ ನಡೆಸುವ ಸಂಬಂಧ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಬಳಿ ಚರ್ಚೆ ನಡೆಸಿದ್ದು, ಪೂರಕವಾಗಿ ಸ್ಪಂದಿಸಿದ್ದಾರೆ. ಪೋಷಕರ ಅಭಿಪ್ರಾಯ ಸಂಗ್ರಹಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. 7ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ನಡೆಸುವ ಚಿಂತನೆಯಿದ್ದು, ಉತ್ತೀರ್ಣ– ಅನುತ್ತೀರ್ಣ ಎಂಬು ದಕ್ಕಿಂತ ಮಕ್ಕಳ ಕಲಿಕಾಮಟ್ಟ ಅಳೆ ಯಲು ಸಾಧ್ಯವಾಗಲಿದೆ’ ಎಂದು ಹೇಳಿದರು.

ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಶಿಕ್ಷಕರಿಗೆ ವಿಮರ್ಶೆ, ಕಾದಂಬರಿಗಳ ಬಗ್ಗೆ ಅರಿವಿಲ್ಲ. ಆದ್ದರಿಂದ, ಶಿಕ್ಷಕರಿಗೂ ಆಂತರಿಕ ಮೌಲ್ಯಮಾಪನ ನಡೆಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.