ADVERTISEMENT

ಡಿನೋಟಿಫೈ ವಿವಾದ ನ್ಯಾಯಾಂಗ ತನಿಖೆಗೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2014, 7:49 IST
Last Updated 29 ಜುಲೈ 2014, 7:49 IST
ಡಿನೋಟಿಫೈ ವಿವಾದ ನ್ಯಾಯಾಂಗ ತನಿಖೆಗೆ
ಡಿನೋಟಿಫೈ ವಿವಾದ ನ್ಯಾಯಾಂಗ ತನಿಖೆಗೆ   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇಲ್ಲಿನ ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿದ್ದ 541 ಎಕರೆ ಜಮೀನನ್ನು ಅಧಿಸೂಚನೆಯಿಂದ ಕೈಬಿಟ್ಟಿರುವ (ಡಿನೋಟಿಫಿಕೇಶನ್) ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.

ಬಿಡಿಎ ಜಮೀನು ಡಿನೋಟಿಫಿಕೇಶನ್ ಪ್ರಕರಣ ಸೋಮವಾರವೂ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಸದನದ ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷರ ಪೀಠದ ಎದುರು ಧರಣಿ ಆರಂಭಿಸಿದ ಬಿಜೆಪಿ ಸದಸ್ಯರು, ಪ್ರಕರಣ ಕುರಿತು ಸಿಬಿಐ ತನಿಖೆಗೆ ಆದೇಶಿಸುವಂತೆ ಒತ್ತಾಯಿಸಿ ಘೋಷಣೆ ಕೂಗಲಾರಂಭಿಸಿದರು. ನಂತರ, ಇಡೀ ದಿನ ಧರಣಿ ಮುಂದುವರಿಸಿದರು.

ಗದ್ದಲದ ನಡುವೆಯೇ ಉತ್ತರ ನೀಡಿದ ಮುಖ್ಯ­ಮಂತ್ರಿ­ಯವರು, ‘ಹೈಕೋರ್ಟ್‌ ನಿವೃತ್ತ ನ್ಯಾಯ­ಮೂರ್ತಿ­ಯವರಿಂದ ಈ ಪ್ರಕರಣದ ಬಗ್ಗೆ ತನಿಖೆ ನಡೆ­ಸಲು ಸರ್ಕಾರ ತೀರ್ಮಾನಿಸಿದೆ’ ಎಂದು ಪ್ರಕಟಿಸಿದರು. ‘ಐದು ವರ್ಷ ಅವರು (ಬಿಜೆಪಿ)

ಅಧಿಕಾರದ­ಲ್ಲಿ  ಇದ್ದರು. ಆಗ ವಿರೋಧ ಪಕ್ಷದ ಸಾಲಿನಲ್ಲಿದ್ದ ನಾವು ಎಷ್ಟೋ ಪ್ರಕರಣಗಳ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸುವಂತೆ ಒತ್ತಾಯಿಸಿದ್ದೆವು. ಒಂದು ಸಲವೂ ಅವರು ಒಪ್ಪಿ­ಕೊಂಡಿ­ರಲಿಲ್ಲ. ಹೈಕೋರ್ಟ್‌ ತೀರ್ಪಿನ ಪಾಲನೆಗಾಗಿ ಅರ್ಕಾವತಿ ಬಡಾವಣೆಗೆ ಸಂಬಂಧಿಸಿದ ಭೂಸ್ವಾಧೀನ ಯೋಜನೆ­ಯನ್ನು ಪರಿಷ್ಕರಣೆ ಮಾಡಿದ್ದೇವೆ. ಇದರಲ್ಲಿ ಯಾವುದೇ ತಪ್ಪು ಮಾಡಿಲ್ಲ. ಸಿಬಿಐ ತನಿಖೆಗೆ ಒಪ್ಪಿಸುವ ಪ್ರಶ್ನೆಯೇ ಇಲ್ಲ’ ಎಂದು ಏರಿದ ದನಿಯಲ್ಲಿ ಹೇಳಿದರು.

ಒಂದೆಡೆ ಬಿಜೆಪಿ ಸದಸ್ಯರು ಧರಣಿ ಆರಂಭಿಸಿದರೆ, ಇನ್ನೊಂದೆಡೆ ಜೆಡಿ­ಎಸ್‌ನ ವೈ.ಎಸ್‌.ವಿ ದತ್ತ, ಬೆಳಗಾ­ವಿಯ ಯಳ್ಳೂರು ಗ್ರಾಮದಲ್ಲಿ ‘ಮಹಾ­ರಾಷ್ಟ್ರ ರಾಜ್ಯ’ ಎಂಬ ಹೆಸರಿನ ನಾಮಫಲಕ ತೆರವು ಸಂದರ್ಭ­ದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಸದ­ಸ್ಯರು ಪುಂಡಾಟ ನಡೆಸಿರುವ ಕುರಿತು ವಿಷಯ ಪ್ರಸ್ತಾಪಿಸಲು ಅವಕಾಶ ನೀಡುವಂತೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಮಾಡಿದರು.

ಈ ನಡುವೆಯೇ ಮಾತು ಆರಂಭಿ­ಸಿದ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ‘ಬಿಡಿಎ ಜಮೀನು ಡಿನೋಟಿಫಿಕೇಶನ್‌ ಪ್ರಕರಣದಲ್ಲಿ ತಮ್ಮ ಪಾತ್ರವೇ ಇಲ್ಲ; ಎಲ್ಲವನ್ನೂ ಅಧಿಕಾರಿಗಳು ಮಾಡಿದ್ದಾರೆ ಎಂದು ಮುಖ್ಯ­ಮಂತ್ರಿ ಸಿದ್ದರಾಮಯ್ಯ ಹೇಳಿ­ದ್ದರು. ಆದರೆ, ಈ ಪ್ರಕರಣಕ್ಕೆ ಸಂಬಂ­ಧಿಸಿ ಬಿಡಿಎ ಸಲ್ಲಿಸಿದ್ದ ಕಡತಕ್ಕೆ ಮಾರ್ಚ್ 31ರಂದು ಅವರು ಸಹಿ ಮಾಡಿ­ದ್ದಾರೆ. ಅಕ್ರಮವಾಗಿ ಜಮೀನು ಡಿನೋಟಿಫೈ ಮಾಡಿರುವುದರಲ್ಲಿ ಅವರು ನೇರವಾಗಿ ಭಾಗಿಯಾಗಿದ್ದಾರೆ’ ಎಂದು ದಾಖಲೆ ಪ್ರದರ್ಶಿಸಿದರು.

ಆಗ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಹೈಕೋರ್ಟ್‌ ಆದೇಶದಂತೆ ಪರಿಷ್ಕೃತ ಭೂಸ್ವಾಧೀನ ಯೋಜನೆಗೆ ಸಹಿ ಮಾಡಿ­ದ್ದೇನೆ. ಆದರೆ ಬಿಡಿಎ ಜಮೀನು ಡಿನೋ­ಟಿಫೈಗೆ ಜಗದೀಶ ಶೆಟ್ಟರ್ ಅವರೇ ಕಾರಣ. ನ್ಯಾಯಾಂಗ ತನಿಖೆ ನಡೆ­ದಾಗ ಇವರ ಬಣ್ಣ ಬಯಲಾ­ಗುತ್ತದೆ’ ಎಂದರು.

ರಾಜೀನಾಮೆಗೆ ಆಗ್ರಹ: ‘ಬಿಡಿಎ ಜಮೀನು ಡಿನೋಟಿಫಿಕೇಶನ್‌ನಲ್ಲಿ ಪಾತ್ರ­ವಿರುವ ಬಗ್ಗೆ ದಾಖಲೆ ಒದಗಿಸಿ­ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀ­ನಾಮೆ ನೀಡಿ, ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಹೇಳಿದ್ದಿರಿ. ಈಗ ನಾನು ದಾಖಲೆ ಹಾಜರುಪಡಿ­ಸಿದ್ದೇನೆ. ರಾಜೀನಾಮೆ ನೀಡಿ, ರಾಜಕೀ­ಯ­ದಿಂದ ನಿವೃತ್ತಿ ಪಡೆಯಿರಿ’ ಎಂದು ಶೆಟ್ಟರ್ ಆಗ್ರಹಿಸಿದರು.

ಮುಖ್ಯಮಂತ್ರಿಯವರ ಬಳಿ ಇರುವ ಹಣಕಾಸು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಸೇರಿದಂತೆ 17 ಇಲಾಖೆಗಳ ಬೇಡಿಕೆಗಳ ಮೇಲೆ ಸೋಮವಾರ ಸದನದಲ್ಲಿ ಚರ್ಚೆ ನಡೆಯಬೇಕಿತ್ತು. ಆದರೆ, ಆರಂಭದಿಂದಲೇ ಗದ್ದಲ ಹೆಚ್ಚಾದ ಕಾರಣದಿಂದ ತಮ್ಮ ಬಳಿ ಇರುವ ಇಲಾಖೆಗಳಿಗೆ ಸಂಬಂಧಿಸಿದಂತೆ ಉತ್ತರ ನೀಡಲು ಸಿದ್ದರಾಮಯ್ಯ ಪ್ರಯತ್ನಿಸಿದರು.

‘ಮುಖ್ಯಮಂತ್ರಿಯವರು ಸದನಕ್ಕೆ ಉತ್ತರ ನೀಡುವ ನೈತಿಕತೆ ಕಳೆದು­ಕೊಂಡಿದ್ದಾರೆ. ಬಜೆಟ್‌ ಮತ್ತು ಪೂರಕ ಅಂದಾಜಿಗೆ ಒಪ್ಪಿಗೆ ಕೋರುವ ನೈತಿಕ­ತೆಯೂ ಅವರಿಗೆ ಇಲ್ಲ’ ಎಂದು ಶೆಟ್ಟರ್ ರೇಗಿಸಿದರು. ಆಗ ಬಿಜೆಪಿ ಸದಸ್ಯರು, ‘ಸಿಬಿಐ ತನಿಖೆ ಆಗಲಿ’, ‘ಭ್ರಷ್ಟ ಸರ್ಕಾ­ರಕ್ಕೆ ಧಿಕ್ಕಾರ’ ಎಂಬ ಘೋಷಣೆ ಕೂಗ­ಲಾ­ರಂಭಿಸಿದರು. ಅತ್ತ ಕಾಂಗ್ರೆಸ್‌ ಸದಸ್ಯರು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಸದನದಲ್ಲಿ ಕೋಲಾಹ­ಲದ ವಾತಾವರಣ ನಿರ್ಮಾಣ ಆಯಿತು.

ಉತ್ತರ ಮಂಡನೆ: ಗದ್ದಲದ ನಡು­ವೆಯೇ ಮಾತನಾಡಿದ ಸಿದ್ದರಾಮಯ್ಯ, ‘ಈ ಅಧಿವೇಶನದಲ್ಲಿ ಕೆಲವು ಇಲಾಖೆ­ಗಳ ಬಗ್ಗೆ ಅತ್ಯುತ್ತಮ ಚರ್ಚೆ ನಡೆದಿದೆ. ನನ್ನ ಬಳಿ ಇರುವ ಇಲಾಖೆಗಳು ಸೇರಿ­ದಂತೆ ಹಲವು ಇಲಾಖೆಗಳ ಬಗ್ಗೆ ಚರ್ಚೆಯೇ ನಡೆದಿಲ್ಲ. ಹಣಕಾಸು ಸೇರಿ­ದಂತೆ ನನ್ನ ಬಳಿ ಇರುವ ಇಲಾಖೆಗಳ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತದೆ ಎಂದು ನಿರೀಕ್ಷಿಸಿದ್ದೆ. ಆದರೆ, ಬಿಜೆಪಿಯ­ವರಿಗೆ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಬೇಕಿಲ್ಲ. ಅದಕ್ಕಾಗಿಯೇ ಗದ್ದಲ ಮಾಡು­ತ್ತಿ­ದ್ದಾರೆ’ ಎಂದರು.

‘ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ 541 ಎಕರೆ ಜಮೀನನ್ನು ಕೈಬಿಟ್ಟು ಪರಿ­ಷ್ಕೃತ ಭೂಸ್ವಾಧೀನ ಯೋಜನೆ ಸಿದ್ಧಪ­ಡಿಸಲು ಜಗದೀಶ ಶೆಟ್ಟರ್‌ ಅವರೇ ಕಾರಣ. ಈಗ ತಮ್ಮ ತಪ್ಪನ್ನು ಮುಚ್ಚಿ­ಕೊಳ್ಳಲು ಗದ್ದಲ ಮಾಡುತ್ತಿದ್ದಾರೆ. ನ್ಯಾಯಾಂಗ ತನಿಖೆಯಲ್ಲಿ ಎಲ್ಲವೂ ಬಯಲಿಗೆ ಬರುತ್ತದೆ. ಈಗ ಉತ್ತರ ನೀಡಲು ಸಾಧ್ಯವಾಗದ ಸ್ಥಿತಿ ಇದೆ. ಅದಕ್ಕಾಗಿ ನನ್ನ ಉತ್ತರವನ್ನು ಸದನ­ದಲ್ಲಿ ಮಂಡಿಸುತ್ತಿದ್ದೇನೆ’ ಎಂದು ಹೇಳಿ, ಆಸೀನರಾದರು.

ಶೆಟ್ಟರ್‌ ಅವಧಿಯಲ್ಲಿ ಡಿನೋಟಿಫೈ
2013ರ ಫೆಬ್ರುವರಿ 12ರಂದು ನಡೆದ ಬೆಂಗಳೂರು ಅಭಿವೃದ್ಧಿ ಪ್ರಾಧಿ­ಕಾರದ ಆಡಳಿತ ಮಂಡಳಿಯ ಸಭೆಯಲ್ಲೇ ಅರ್ಕಾವತಿ ಬಡಾವ­ಣೆಯ 423 ಎಕರೆ 13 ಗುಂಟೆ ಜಮೀ­ನನ್ನು ಡಿನೋಟಿಫೈ ಮಾಡಲು ತೀರ್ಮಾನಿಸಲಾಗಿತ್ತು ಎಂದು ಮುಖ್ಯ­ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಆ ಸಂದರ್ಭದಲ್ಲಿ ಜಗದೀಶ ಶೆಟ್ಟರ್‌ ಅವರು ಈ ರಾಜ್ಯದ ಮುಖ್ಯ­ಮಂತ್ರಿಯಾಗಿದ್ದರು. ಅಂದು ತೆಗೆದುಕೊಂಡ ತೀರ್ಮಾನವನ್ನು ಹೈಕೋರ್ಟ್‌ ಸೇರಿದಂತೆ ವಿವಿಧ ನ್ಯಾಯಾಲಯಗಳ ತೀರ್ಪಿನ ಪ್ರಕಾರ ನಗರಾಭಿವೃದ್ಧಿ ಇಲಾಖೆ ಪರಿಷ್ಕೃತ ಯೋಜನೆಗೆ ಒಪ್ಪಿಗೆ ಸೂಚಿಸಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ ಸೂಚನೆ ಪ್ರಕಾರ ಅಡ್ವೊ­ಕೇಟ್‌ ಜನರಲ್‌ ಅವರ ಅಭಿಪ್ರಾಯ ಪಡೆದು ಗ್ರಾಮವಾರು ಪೂರ್ಣ ಮಾಹಿತಿಯನ್ನೊಳಗೊಂಡ ಪರಿಷ್ಕೃತ ಯೋಜನೆಯನ್ನು ಸಿದ್ಧಪ­ಡಿಸಿ ಸರ್ಕಾರಕ್ಕೆ ಸಲ್ಲಿಸಲು ಶೆಟ್ಟರ್‌ ಅವಧಿಯಲ್ಲೇ ಆದೇಶಿಸಲಾಗಿತ್ತು ಎಂಬುದನ್ನೂ ಅವರು ವಿವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.