ADVERTISEMENT

ತಂಗಿ ಸೇರಿ ಮೂವರ ಬಂಧನ

ಕಾರ್ತಿಕ್‌ ರಾಜ್‌ ಕೊಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 19:55 IST
Last Updated 29 ಏಪ್ರಿಲ್ 2017, 19:55 IST

ಮಂಗಳೂರು: 2016ರ ಅಕ್ಟೋಬರ್‌ 22ರ ನಸುಕಿನಲ್ಲಿ ಕೊಣಾಜೆಯಲ್ಲಿ ನಡೆದಿದ್ದ ಬಿಜೆಪಿ ಮುಖಂಡ ಉಮೇಶ್‌ ಅವರ ಪುತ್ರ ಕಾರ್ತಿಕ್‌ ರಾಜ್‌ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ಮೃತನ ತಂಗಿ ಕಾವ್ಯಶ್ರೀ (25) ಸೇರಿದಂತೆ ಮೂವರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸ್‌ ವಿಶೇಷ ತನಿಖಾ ತಂಡ ಶನಿವಾರ ಬೆಳಿಗ್ಗೆ ಬಂಧಿಸಿದೆ.

ಈ ಕುರಿತು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಎಂ.ಚಂದ್ರಶೇಖರ್, ‘ಮೃತ ಯುವಕ ಪಜೀರು ಗ್ರಾಮದ ವಾಸಿಯಾಗಿದ್ದು, ಕೆನರಾ ಸ್ಪ್ರಿಂಗ್ಸ್‌ ಎಂಬ ಸಂಸ್ಥೆಯ ಉದ್ಯೋಗಿ. ಕುಟುಂಬದೊಳಗಿನ ವೈಷಮ್ಯದ ಕಾರಣದಿಂದ ಈ ಕೊಲೆ ನಡೆದಿದೆ. ಕಾರ್ತಿಕ್‌ನ ತಂಗಿ ಕಾವ್ಯಶ್ರೀ, ಆಕೆಯ ಸಹೋದ್ಯೋಗಿ ಕುತ್ತಾರ್‌ನ ಸಂತೋಷ್‌ ನಗರದ ನಿವಾಸಿ ಗೌತಮ್‌ (25) ಮತ್ತು ಆತನ ತಮ್ಮ ಗೌರವ್‌ (19) ಎಂಬುವವರನ್ನು ಸಿಸಿಆರ್‌ಬಿ ಘಟಕದ ಎಸಿಪಿ ವೆಲೆಂಟೈನ್‌ ಡಿಸೋಜ ನೇತೃತ್ವದ ತನಿಖಾ ತಂಡ ತೊಕ್ಕೊಟ್ಟು ಬಳಿ ಬಂಧಿಸಿದೆ’ ಎಂದು ತಿಳಿಸಿದರು.

‘ದೇರಳಕಟ್ಟೆಯ ಕಣಚೂರು ಆಸ್ಪತ್ರೆಯ ಉದ್ಯೋಗಿಯಾಗಿದ್ದ ಕಾವ್ಯಾ ವಿವಾಹಿತೆಯಾಗಿದ್ದು, ಗಂಡ ದುಬೈನಲ್ಲಿದ್ದಾರೆ. ಕೌಟುಂಬಿಕ ಕಲಹದ ಕಾರಣದಿಂದ ಮನೆಯಿಂದ ದೂರ ಉಳಿದಿದ್ದಳು. ಗೌತಮ್‌ ಕೂಡ ಕಣಚೂರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರೂ ಆತ್ಮೀಯರಾಗಿದ್ದರು. ಕಾವ್ಯಾ ಮತ್ತು ಕಾರ್ತಿಕ್‌ ನಡುವೆ ದ್ವೇಷ ಬೆಳೆದಿತ್ತು. ಈ ಕಾರಣಕ್ಕಾಗಿ ಅಣ್ಣನನ್ನು ಕೊಲೆ ಮಾಡುವಂತೆ ಗೌತಮ್‌ ಬಳಿ ಕೇಳಿಕೊಂಡಿದ್ದಳು. ಕೃತ್ಯ ಎಸಗುವುದಕ್ಕಾಗಿ ₹ 5 ಲಕ್ಷ ಹಣ ನೀಡುವುದಾಗಿ ಆಮಿಷ ಒಡ್ಡಿದ್ದಳು’ ಎಂದು ವಿವರಿಸಿದರು.

ADVERTISEMENT

ಗೌತಮ್‌ ಕೊಂಡಾಣ ಗ್ರಾಮದಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದ. ಆತನಿಗೂ ಹಣದ ಅಡಚಣೆ ಉಂಟಾಗಿತ್ತು. ಹಣಕ್ಕಾಗಿ ಕೊಲೆ ಮಾಡಲು ಒಪ್ಪಿಕೊಂಡಿದ್ದ ಆತ, ತಮ್ಮನ ಸಹಾಯ ಪಡೆದುಕೊಂಡಿದ್ದ. ಅ.22ರ ಬೆಳಿಗ್ಗೆ ಮನೆಯಿಂದ ಹೊರಟು ಮುಡಿಪುವಿನಿಂದ ತೊಕ್ಕೊಟ್ಟು ಕಡೆಗೆ ಜಾಗಿಂಗ್‌ ಹೊರಟಿದ್ದ ಕಾರ್ತಿಕ್‌ನನ್ನು ಕೊಣಾಜೆಯ ಗಣೇಶ್ ಮಹಲ್‌ ಬಳಿ ಬೆಳಿಗ್ಗೆ 5 ಗಂಟೆ ಸುಮಾರಿಗೆ ಆರೋಪಿಗಳು ಅಡ್ಡಗಟ್ಟಿದ್ದರು. ಕಬ್ಬಿಣದ ಸರಳಿನಿಂದ ತಲೆಗೆ ಹೊಡೆದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಕಾರ್ತಿಕ್‌, ಅ.23ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.