ADVERTISEMENT

ತಂದೆ ಕವನ ವಾಚಿಸಿದ ಮಗ

​ಪ್ರಜಾವಾಣಿ ವಾರ್ತೆ
Published 17 ಜನವರಿ 2015, 19:30 IST
Last Updated 17 ಜನವರಿ 2015, 19:30 IST

ಧಾರವಾಡ: ಡಾ.ವಿ.ಕೃ. ಗೋಕಾಕರ ಪುತ್ರ ಅನಿಲ ಗೋಕಾಕರು ತಮ್ಮ ತಂದೆಯ ಕವನ ವಾಚಿಸಿದ್ದು ‘ಸಾಹಿತ್ಯ ಸಂಭ್ರಮ’ದ ವಿ.ಕೃ.ಗೋಕಾಕ ಮತ್ತು ಪು.ತಿ.ನ ಅವರ ಕವನದ ಓದು ಗೋಷ್ಠಿಯ ವಿಶೇಷ.

‘ಸೂರ್ಯನ ಪ್ರದಕ್ಷಿಣೆ ಮರೆತು..­ಸ್ವಯಂ­ಪ್ರದಕ್ಷಿಣೆಯಲಿ ಪೃಥ್ವಿ ಸ್ಥಿರೆಯಾಗಿದಾಳೆ.. ಇಂದು ರಜೆ..’ ಎಂಬ ಕವನವನ್ನು ಅವರು ವಾಚಿಸಿದರು.

‘ನನ್ಮ ತಂದೆಯವರು ದೊಡ್ಡ ಸಾರ್ವಜನಿಕ ಸಭೆಯಲ್ಲಿ ವಾಚಿಸಿದ ಕೊನೆಯ ಕವಿತೆ ಇದು. ಅವರಿಗೆ ಜ್ಞಾನಪೀಠ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಒಂದು ಇಂಗ್ಲಿಷ್ ಮತ್ತು ಒಂದು ಕನ್ನಡ ಕವನ ವಾಚಿಸಲು ಹೇಳಿದಾಗ ಅವರು ಇದನ್ನು ಓದಿದ್ದರು’ ಎಂದು ಅನಿಲ ಸ್ಮರಿಸಿದರು.

ಟಿವಿ ಪರದೆ ಮುಂದೂ ಜನ: ಸಾಂಸ್ಕೃತಿಕ ನಗರಿ ಧಾರವಾಡದ ಸಾಹಿತ್ಯ ರಸಿಕರ ಚಿತ್ತವೆಲ್ಲ ಈಗ ಸಾಹಿತ್ಯ ಸಂಭ್ರಮ­ದತ್ತಲೇ ಇದೆ. ಆದರೆ, ನೋಂದಣಿ ಮಾಡಿ­ಕೊಂಡವರು ಮಾತ್ರ ಕಾರ್ಯ­ಕ್ರಮ­ದಲ್ಲಿ ಭಾಗಿಯಾಗುವ ಅವಕಾಶ ಪಡೆದಿದ್ದಾರೆ. ಕಟ್ಟುನಿಟ್ಟಿನ ನಿರ್ವಹಣೆ­ಯಿಂದಾಗಿ ಬಹಳಷ್ಟು ಜನರಿಗೆ ಕಾರ್ಯಕ್ರಮದೊಳಗೆ ಹೋಗಲು ಆಗಿಲ್ಲ. ಆದರೆ, ಅವರು ನಿರಾಶರಾಗಿಲ್ಲ.

ಅವರಿಗಾಗಿಯೇ ಸುವರ್ಣ ಮಹೋ­ತ್ಸವ ಭವನದ ಆವರಣದಲ್ಲಿ ಇರುವ ಪುಸ್ತಕ ಪ್ರದರ್ಶನ, ಮಾರಾಟ ಮಳಿಗೆ­ಯಲ್ಲಿ ಬೃಹತ್ ಟಿವಿ ಪರದೆಯನ್ನು ಅಳವಡಿಸಲಾಗಿದೆ. ಒಳಗೆ ನಡೆಯುವ ಗೋಷ್ಠಿಗಳ ನೇರ ಪ್ರಸಾರ ಇದರಲ್ಲಿ ಪ್ರಸಾರವಾಗುತ್ತಿದೆ. ಶನಿವಾರ ಈ ಪರದೆಯ ಮುಂದೆ ಬೆಳಿಗ್ಗೆಯ ಮೊದಲ ಗೋಷ್ಠಿಯಿಂದಲೇ ಸಾಹಿತ್ಯಾಸಕ್ತರು ಸೇರಿದ್ದರು. ಬಹುತೇಕ ಕುರ್ಚಿಗಳು ಭರ್ತಿಯಾಗಿದ್ದವು. ಸಂಜೆಯ ಕೊನೆಯ ಗೋಷ್ಠಿ ಮುಗಿ­ಯುವವರೆಗೂ ಜನರು ಟಿವಿ ಪರದೆಯ ಮುಂದೆ ಕುಳಿತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.