ADVERTISEMENT

ತಡೆಗೋಡೆ, ಸೇತುವೆಗಳಿಗೆ ₹150 ಕೋಟಿ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2016, 12:50 IST
Last Updated 28 ಸೆಪ್ಟೆಂಬರ್ 2016, 12:50 IST
ತಡೆಗೋಡೆ, ಸೇತುವೆಗಳಿಗೆ ₹150 ಕೋಟಿ ಬೇಡಿಕೆ
ತಡೆಗೋಡೆ, ಸೇತುವೆಗಳಿಗೆ ₹150 ಕೋಟಿ ಬೇಡಿಕೆ   

ಕಲಬುರ್ಗಿ: ಜಿಲ್ಲೆಯಲ್ಲಿ ಎರಡು ದಿನಗಳಿಂದ ಮಳೆ ನಿಂತಿದೆ. ಬೆಣ್ಣೆತೊರಾ, ಕಾಗಿಣಾ ನದಿಗಳ ಪ್ರವಾಹದ ಅಬ್ಬರವೂ ಕಡಿಮೆಯಾಗಿದೆ. ನದಿ ತೀರದ ಗ್ರಾಮಗಳು ಸಹಜ ಸ್ಥಿತಿಗೆ ಮರಳುತ್ತಿವೆ.  ಪ್ರವಾಹ ಪೀಡಿತ ಗ್ರಾಮಗಳ ಜನರಿಗೆ ಆರಂಭಿಸಿದ್ದ 22 ಗಂಜಿ ಕೇಂದ್ರಗಳ ಪೈಕಿ 19 ಗಂಜಿ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ.

ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿಯ ಬಹುತೇಕ ಸೇತುವೆಗಳು ತಳಮಟ್ಟದಲ್ಲಿವೆ, ಇಲ್ಲವೆ ಕಡಿಮೆ ಎತ್ತರದಲ್ಲಿವೆ. ಹೀಗಾಗಿ ಎಂಟು ಹೊಸ ಸೇತುವೆ ಹಾಗೂ ಎರಡು ಕಡೆಗಳಲ್ಲಿ ತಡೆಗೋಡೆ ನಿರ್ಮಾಣಕ್ಕೆ ₹150 ಕೋಟಿ ಅನುದಾನ ನೀಡುವಂತೆ  ಜಿಲ್ಲಾ ಆಡಳಿತ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ಮಳಖೇಡ ಹೊಸ ಸೇತುವೆ ನಿರ್ಮಾಣಕ್ಕೆ ₹50 ಕೋಟಿ, ದಂಡೋತಿ ಹೊಸ ಸೇತುವೆ ನಿರ್ಮಾಣಕ್ಕೆ ₹26 ಕೋಟಿ, ಮುತ್ತಗಾ ಗ್ರಾಮದ ಬಳಿ ಹೊಸ ಸೇತುವೆಗೆ ₹25 ಕೋಟಿ, ಕಣಸೂರ ಹೊಸ ಸೇತುವೆಗೆ ₹15 ಕೋಟಿ, ಮಹಗಾಂವ ಹೊಸ ಸೇತುವೆಗೆ ₹10 ಕೋಟಿ, ಗಾರಂಪಳ್ಳಿ ಹೊಸ ಸೇತುವೆಗೆ ₹8 ಕೋಟಿ, ತಾಜಲಾಪುರ, ಚಿಮ್ಮನಚೋಡ ಗ್ರಾಮಗಳಲ್ಲಿ ಹೊಸ ಸೇತುವೆಗಳ ನಿರ್ಮಾಣಕ್ಕೆ ತಲಾ ₹5 ಕೋಟಿ, ತೆಂಗಳಿ ಗ್ರಾಮದಲ್ಲಿ ತಡೆಗೋಡೆ ಮತ್ತು ಚಿಂಚೋಳಿ ಪಟ್ಟಣದಲ್ಲಿ ಮುಲ್ಲಾಮಾರಿ ನದಿಗೆ ತಡೆಗೋಡೆ ನಿರ್ಮಿಸಲು ತಲಾ ₹3 ಕೋಟಿ ಅನುದಾನ ನೀಡುವಂತೆ ಮಂಗಳವಾರ ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ.

ಜಲಾಶಯ ಭರ್ತಿ: ಅಮರ್ಜಾ ಹೊರತು ಪಡಿಸಿ ಉಳಿದೆಲ್ಲ ಜಲಾಶಯಗಳು ಭರ್ತಿಯಾಗಿವೆ. ಆದರೆ, 1.554 ಟಿಎಂಸಿ ಅಡಿ ಸಾಮರ್ಥ್ಯದ ಅಮರ್ಜಾ ಜಲಾಶಯದಲ್ಲಿ ಕೇವಲ 1.085 ಟಿಎಂಸಿ ಅಡಿಯಷ್ಟು ನೀರು ಮಾತ್ರ ಸಂಗ್ರಹವಾಗಿದೆ. 1343 ಕ್ಯುಸೆಕ್‌ ಒಳಹರಿವು ಇರುವುದು ಸ್ವಲ್ಪ ಆಶಾಭಾವ ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.