ADVERTISEMENT

ತಿಂಗಳಲ್ಲಿ ವೈದ್ಯರ ನೇಮಕ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2015, 19:50 IST
Last Updated 23 ನವೆಂಬರ್ 2015, 19:50 IST

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಿಗೆ 1401 ವೈದ್ಯರ ನೇಮಕ ಪ್ರಕ್ರಿಯೆ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‌ ತಿಳಿಸಿದರು. ವಿಧಾನ ಪರಿಷತ್ತಿನಲ್ಲಿ ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಎಸ್‌.ವಿ. ಸಂಕನೂರ ಅವರ ಪ್ರಶ್ನೆಗೆ ಉತ್ತರಿಸಿದರು.

‘983 ತಜ್ಞರ ವೈದ್ಯರು, 331 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಹಾಗೂ 87 ದಂತ ವೈದ್ಯಾಧಿಕಾರಿಗಳ ನೇಮಕಕ್ಕೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವ ಕಳುಹಿಸಲಾಗಿತ್ತು.  ಆಯ್ಕೆ ಪಟ್ಟಿಯನ್ನು ಕೆಪಿಎಸ್‌ಸಿ ಕಳುಹಿಸಿದೆ.  ಡಿ.14ರಂದು ತಜ್ಞ ವೈದ್ಯರ, 15ರಂದು ದಂತ ವೈದ್ಯರ ಹಾಗೂ 16ರಂದು ಸಾಮಾನ್ಯ ವೈದ್ಯರ ನೇಮಕಕ್ಕೆ ಕೌನ್ಸೆಲಿಂಗ್‌ ನಡೆಸಲಾಗುವುದು. ಡಿಸೆಂಬರ್‌ ಅಂತ್ಯದೊಳಗೆ ಅವರಿಗೆ ಸ್ಥಳ ನಿಯೋಜನೆ  ಮಾಡಲಾಗುವುದು’ ಎಂದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ ಗಳ ಕೊರತೆ ಇರುವುದು ಗಮನಕ್ಕೆ ಬಂದಿದೆ. ಹೀಗಾಗಿ 25 ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ ಅಳವಡಿಕೆಗೆ ಸಚಿವ ಸಂಪುಟ ಅನುಮತಿ ನೀಡಿದೆ ಎಂದರು.
*
ಸುಣ್ಣದ ಸ್ಯಾಷೆಗೆ ನಿಷೇಧ
ಎಲೆ ಅಡಿಕೆಗೆ ಬಳಸುವ ಸುಣ್ಣದ ಸ್ಯಾಷೆಗಳ ಮಾರಾಟಕ್ಕೆ ನಿಷೇಧ ಹೇರಲಾಗಿದೆ ಎಂದು ಯು.ಟಿ. ಖಾದರ್ ತಿಳಿಸಿದರು. ಪರಿಷತ್ತಿನಲ್ಲಿ ಸೋಮವಾರ ಸ್ವಪ್ರೇರಿತ ಹೇಳಿಕೆ ನೀಡಿದ ಅವರು, ‘ಜನ ಈ ಸ್ಯಾಷೆಗಳನ್ನು ಖರೀದಿಸಿ ಅಂಗಡಿಗಳ ಪಕ್ಕದಲ್ಲೇ ಎಲೆ ಅಡಿಕೆ ಸೇವಿಸುತ್ತಾರೆ. ಸುಣ್ಣ, ಮಕ್ಕಳ ಕಣ್ಣಿಗೆ ಹಾರಿ  ತೊಂದರೆ ಉಂಟಾಗುತ್ತಿದೆ. ಅದಕ್ಕಾಗಿ ನಿಷೇಧಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.