ADVERTISEMENT

ತೆಂಗಿನ ಬೆಳೆಗೆ ಬಡಿದ ‘ಬರ’ ಸಿಡಿಲು!

ಬಸವರಾಜ ಹವಾಲ್ದಾರ
Published 23 ಏಪ್ರಿಲ್ 2017, 19:30 IST
Last Updated 23 ಏಪ್ರಿಲ್ 2017, 19:30 IST
ಮಂಡ್ಯ ತಾಲ್ಲೂಕಿನ ಹನಗನಹಳ್ಳಿ ಬಳಿ ತೆಂಗಿನ ತೋಟ ಹಾಳಾಗಿರುವುದು
ಮಂಡ್ಯ ತಾಲ್ಲೂಕಿನ ಹನಗನಹಳ್ಳಿ ಬಳಿ ತೆಂಗಿನ ತೋಟ ಹಾಳಾಗಿರುವುದು   

ಮಂಡ್ಯ: ‘ಕಲ್ಪವೃಕ್ಷ’ ಎಂದು ಕರೆಯಿಸಿಕೊಂಡಿರುವ ತೆಂಗಿನ ಗಿಡಗಳು ಬರ ಹಾಗೂ ಕಪ್ಪು ತಲೆ ಹುಳುವಿನ ಬಾಧೆಯಿಂದ ಒಣಗತೊಡಗಿವೆ. ರೈತರು ವರ್ಷಪೂರ್ತಿ ಗಳಿಸುತ್ತಿದ್ದ ಆದಾಯಕ್ಕೆ ಕತ್ತರಿ ಬಿದ್ದಿದೆ. ಕೊಳವೆಬಾವಿಗಳು ಬತ್ತಿ ಹೋಗಿರುವುದರಿಂದ ಹಾಗೂ ಕಪ್ಪು ತಲೆ ಹುಳುಬಾಧೆ ಹೆಚ್ಚಾಗಿರುವುದುರಿಂದ ನಷ್ಟದ ಪ್ರಮಾಣ ಮತ್ತಷ್ಟು ಹೆಚ್ಚಾಗಿದ್ದು, ಸರ್ವೆ ಕಾರ್ಯ ನಡೆಯಬೇಕಿದೆ.

ಕೆ.ಆರ್‌. ಪೇಟೆ ತಾಲ್ಲೂಕಿನಲ್ಲಿ 1,642 ಹೆಕ್ಟೇರ್‌, ಮದ್ದೂರು ತಾಲ್ಲೂಕಿನಲ್ಲಿ 780 ಹೆಕ್ಟೇರ್, ಮಳವಳ್ಳಿ ತಾಲ್ಲೂಕಿನಲ್ಲಿ 658 ಹೆಕ್ಟೇರ್‌, ಮಂಡ್ಯ ತಾಲ್ಲೂಕಿನಲ್ಲಿ 39 ಹೆಕ್ಟೇರ್‌, ನಾಗಮಂಗಲ ತಾಲ್ಲೂಕಿನಲ್ಲಿ 853 ಹೆಕ್ಟೇರ್‌, ಪಾಂಡವಪುರ ತಾಲ್ಲೂಕಿನಲ್ಲಿ 110 ಹೆಕ್ಟೇರ್‌, ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ 95 ಹೆಕ್ಟೇರ್‌ ಬೆಳೆ ನಾಶವಾಗಿದೆ.

ತೆಂಗಿನ ಗಿಡಗಳು ಒಣಗಿದ್ದು, ಗರಿಗಳೆಲ್ಲ ಉದುರಿ ಬಿದ್ದಿವೆ. ಕೆಲವು ಕಡೆಗಳಲ್ಲಿ ಗಿಡಗಳು ಸಂಪೂರ್ಣವಾಗಿ ನಾಶವಾಗಿವೆ. ತೋಟ ಬೋಳು, ಬೋಳಾಗಿ ಕಾಣಿಸುತ್ತಿದೆ.

ADVERTISEMENT

ಶ್ರೀರಂಗಪಟ್ಟಣ, ಮದ್ದೂರು, ಪಾಂಡವಪುರ ತಾಲ್ಲೂಕಿನ 7 ಸಾವಿರ ಹೆಕ್ಟೇರ್‌ ಪ್ರದೇಶದ ತೆಂಗಿನ ಬೆಳೆಯು ಕಾಲವೆ ನೀರನ್ನು ಅವಲಂಬಿಸಿತ್ತು. ಕಾಲುವೆಯಲ್ಲಿ ಡಿಸೆಂಬರ್‌ ತಿಂಗಳಿನಲ್ಲಿ ನೀರು ನಿಲ್ಲಿಸಿರುವುದರಿಂದ ಮುಂದಿನ ದಿನಗಳಲ್ಲಿ ಅಲ್ಲಿ ನಷ್ಟದ ಪ್ರಮಾಣ ಹೆಚ್ಚಾಗಲಿದೆ.

ಮದ್ದೂರು, ಕೆ.ಆರ್‌. ಪೇಟೆ ತಾಲ್ಲೂಕಿನಲ್ಲಿ ಕಪ್ಪು ತಲೆ ಹುಳು ಬಾಧೆ ಹೆಚ್ಚಾಗಿದೆ. ಮಳೆ ಬಂದರೆ ಕಪ್ಪು ತಲೆ ಹುಳು ತನ್ನಿಂದ ತಾನೇ ನಿಯಂತ್ರಣಕ್ಕೆ ಬರುತ್ತದೆ. ಈಗ ಔಷಧೋಪಚಾರ ಕೊಡಿಸಲಾಗುತ್ತಿದೆಯಾದರೂ ರೋಗ ಹರಡಿಕೊಳ್ಳುತ್ತಲೇ ಇದೆ. ಡಿಸೆಂಬರ್‌ ಅಂತ್ಯದವರೆಗೆ ನಷ್ಟದ ಅಂದಾಜು ಮಾಡಲಾಗಿತ್ತು. ಈಗ ಮತ್ತೇ ನಷ್ಟದ ಪ್ರಮಾಣ ಹೆಚ್ಚಾಗಿದೆ. ಮತ್ತೊಮ್ಮೆ ಸರ್ವೆ ಕಾರ್ಯ ಮಾಡಬೇಕಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೆ. ರುದ್ರೇಶ್‌.

ಶೇ 15 ರಿಂದ 20 ರಷ್ಟು ಇಳುವರಿಯ ಮೇಲೆ ಹೊಡೆತ ಬಿದ್ದಿದೆ ಎಂದು ಅಂದಾಜಿಸಲಾಗಿದೆ. ಹಾಗಾಗಿ ಮದ್ದೂರಿನ ಎಳನೀರು ಮಾರುಕಟ್ಟೆಗೂ ಎಳನೀರಿನ ಆವಕದಲ್ಲಿ ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.