ADVERTISEMENT

ದಲಿತರ ಮನೆಯಲ್ಲಿ ಬಿಎಸ್‌ವೈ ಭೋಜನ

​ಪ್ರಜಾವಾಣಿ ವಾರ್ತೆ
Published 22 ಮೇ 2017, 19:30 IST
Last Updated 22 ಮೇ 2017, 19:30 IST
ದಲಿತರ ಮನೆಯಲ್ಲಿ ಬಿಎಸ್‌ವೈ ಭೋಜನ
ದಲಿತರ ಮನೆಯಲ್ಲಿ ಬಿಎಸ್‌ವೈ ಭೋಜನ   
ಬಾಗಲಕೋಟೆ:  ಬರ ಅಧ್ಯಯನ ಸಲುವಾಗಿ ನಗರಕ್ಕೆ ಬಂದಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೋಮವಾರ ದಲಿತರ ಮನೆಗಳಲ್ಲಿ ಬೆಳಿಗ್ಗೆ ಉಪಾಹಾರ ಮತ್ತು ಮಧ್ಯಾಹ್ನದ ಊಟ ಸವಿದರು.
 
ದಲಿತರ ಮನೆಯಲ್ಲಿಯೇ ಉಪಾಹಾರ– ಊಟ ಸಿದ್ಧಪಡಿಸಿ ಅವರ ಕುಟುಂಬದವರಿಂದಲೇ ಬಡಿಸುವ ವ್ಯವಸ್ಥೆ ಮಾಡುವ ಮೂಲಕ ಯಾವುದೇ ವಿವಾದಕ್ಕೆ ಆಸ್ಪದವಾಗದಂತೆ ಎಚ್ಚರ ವಹಿಸಿದ್ದುದು ಕಂಡುಬಂತು.
 
ಚಿತ್ರದುರ್ಗದಲ್ಲಿ ಹೋಟೆಲ್‌ನಿಂದ ತರಿಸಿದ್ದ ಉಪಾಹಾರವನ್ನು ದಲಿತರ ಮನೆಯಲ್ಲಿ ಕುಳಿತು ಸೇವಿಸಿದ್ದರು ಎನ್ನುವ ವಿಚಾರ ರಾಜಕೀಯ ವಲಯದಲ್ಲಿ ವಿವಾದಕ್ಕೆ ಕಾರಣವಾಗಿತ್ತು.
 
ನಗರದಲ್ಲಿ, ರಂಗಪ್ಪ ಕುಂದರಗಿ ಎಂಬುವವರ ಮನೆಯಲ್ಲಿ ಯಡಿಯೂ ರಪ್ಪ  ಮಂಡಕ್ಕಿ ಸೂಸಲ ಸೇವಿಸಿದರು. ಮಧ್ಯಾಹ್ನ ಬಾದಾಮಿ ತಾಲ್ಲೂಕು ಜಾಲಿ ಹಾಳದ ದಲಿತ ಮುಖಂಡ ಫಕ್ಕೀರಪ್ಪ ದೇವರಮನಿ ಅವರ ಮನೆಯಲ್ಲಿ ಚಪಾತಿ, ಎಣೆಗಾಯಿ ಪಲ್ಲೆ ಹಾಗೂ ಶಿರಾ ಸೇವಿಸಿ ದರು. ಫಕ್ಕೀರಪ್ಪ ಅವರ ಪತ್ನಿ ರೇಣಮ್ಮ ಊಟ ಬಡಿಸಿದರು.
 
ಶಾಸಕ ಗೋವಿಂದ ಕಾರಜೋಳ ಹಾಗೂ ಮಾಜಿ ಶಾಸಕ ವೀರಣ್ಣ ಚರಂತಿ ಮಠ ನೇತೃತ್ವದಲ್ಲಿ ಯಡಿಯೂರಪ್ಪ ಅವ ರಿಗೆ ಸ್ವಾಗತ ಹಾಗೂ ಆತಿಥ್ಯ ನಡೆಯಿತು. 
 
ಧಿಮಾಕಿನ ಮಾತು ಸಲ್ಲ:  ‘ಮುಖ್ಯಮಂತ್ರಿಗೆ ರಾಜ್ಯದ ಬರ ಪರಿಸ್ಥಿತಿಯ ವಾಸ್ತವದ ಅರಿವು ಇಲ್ಲ. ರಾಜ್ಯದ ಎಲ್ಲ ಕೆರೆ– ಕಟ್ಟೆಗಳು ಖಾಲಿಯಾಗಿ ಹನಿ ನೀರು ಇಲ್ಲ. ಹಾಗಿದ್ದರೂ ಪಕ್ಷದ ಬರ ಅಧ್ಯಯನ ಪ್ರವಾಸದ ಬಗ್ಗೆ ಧಿಮಾಕಿನ ಮಾತು ಆಡುತ್ತಿದ್ದಾರೆ’ ಎಂದು ಯಡಿಯೂರಪ್ಪ  ಆಕ್ರೋಶ ವ್ಯಕ್ತಪಡಿಸಿದರು.
****
ನಮ್ಮ ಉಪಾಹಾರ ಉಸಾಬರಿ ನಿಮಗ್ಯಾಕೆ?
ತುಮಕೂರು:
  ‘ಬಿ.ಎಸ್.ಯಡಿಯೂರಪ್ಪ ಹಾಗೂ ಮುಖಂಡರು ನಮ್ಮ ಮನೆಯಲ್ಲಿ ಉಪಾಹಾರ ಸೇವಿಸಿದ್ದಾರೆ.  ನಮ್ಮ ಮನೆಯ ಉಪಾಹಾರದ ಬಗ್ಗೆ  ನಿಮಗೇಕೆ ಉಸಾಬರಿ’ ಎಂದು ಬಿಜೆಪಿ ಮುಖಂಡರಿಗೆ ಆತಿಥ್ಯ ನೀಡಿದ್ದ ಹನುಮಂತರಾಯಪ್ಪ ಮತ್ತು ಅವರ ಮಗ ಮಧು ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ನಮ್ಮ ಮನೆಯಲ್ಲಿಯೇ ಉಪಾಹಾರ ಸಿದ್ಧಪಡಿಸಿರಲಿ ಅಥವಾ ಬೇರೆ ಕಡೆಯಿಂದ ತರಿಸಿರಲಿ. ಅದರ ಉಸಾಬರಿ ಬೇರೆಯವರಿಗೇಕೆ?  ಯಡಿಯೂರಪ್ಪ  ಮನೆಗೆ ಬರುತ್ತಾರೆ ಎಂಬ ಸಂತೋಷದಲ್ಲಿ ಮನೆ ಮಂದಿಯೆಲ್ಲ ಬೆಳಗಿನ ಜಾವ ಎದ್ದು  ಕೇಸರಿಭಾತ್, ಇಡ್ಲಿ ತಯಾರಿಸಿದ್ದೆವು.

30 ಜನರಿಗೆ ಆಗುವಷ್ಟು ತಿಂಡಿಯನ್ನು ಮನೆಯಲ್ಲಿ ಮಾಡಿದ್ದೆವು. ಹೆಚ್ಚಿನ ಜನರು ಬಂದಿದ್ದರಿಂದ ಹೊಟೇಲ್‌ನಿಂದ ತರಿಸಿ ಕೊಟ್ಟೆವು. ಇದಕ್ಕಾಗಿ ₹ 7–8 ಸಾವಿರ ಖರ್ಚು ಮಾಡಿದ್ದೇವೆ. ಇದನ್ನೇ ಹೊಟೇಲ್‌ನಿಂದ ತರಿಸಿ ಉಪಾಹಾರ ಮಾಡಿದ್ದಾರೆ ಎಂದು ಟೀಕಿಸಿರುವುದರಿಂದ  ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ’ ಎಂದು ಹೇಳಿದರು.
****
‘ಭೇಟಿ ನಿಲ್ಲಿಸುವುದಿಲ್ಲ’
ಬೆಂಗಳೂರು: ‘
ಕಾಂಗ್ರೆಸ್‌ ಅಪ ಪ್ರಚಾರಕ್ಕೆ ಹೆದರಿ ದಲಿತರ ಕೇರಿಗೆ ಭೇಟಿ ನೀಡುವುದು ಮತ್ತು ಅವರ ಮನೆಗಳಲ್ಲಿ ಆಹಾರ ಸೇವಿಸುವುದನ್ನು ನಿಲ್ಲಿಸುವುದಿಲ್ಲ’ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT