ADVERTISEMENT

ದೇವೇಗೌಡರ ಕುಟುಂಬದ ವಿರುದ್ಧ ದೂರು

₹ 20,000 ಕೋಟಿ ಮೌಲ್ಯದ ಆಸ್ತಿ ಸಂಪಾದನೆ ಆರೋಪ

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:30 IST
Last Updated 24 ಮೇ 2017, 19:30 IST
ಬೆಂಗಳೂರು: ‘ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಮತ್ತು ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಕುಟುಂಬ ₹ 20,000 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಹೊಂದಿದೆ’ ಎಂದು ಆರೋಪಿಸಿ ಆದಾಯ ತೆರಿಗೆ ಇಲಾಖೆಗೆ ಎಸ್‌. ವೆಂಕಟೇಶ್‌ಗೌಡ ಎಂಬುವರು ದೂರು ನೀಡಿದ್ದಾರೆ.
 
‘ಈ ಕುಟುಂಬ ರಿಯಲ್‌ ಎಸ್ಟೇಟ್, ಸಿನಿಮಾ ನಿರ್ಮಾಣ, ರಫ್ತು, ಟೆಕ್ಸ್‌ಟೈಲ್‌  ವ್ಯವಹಾರ ನಡೆಸುತ್ತಿದೆ. ಅಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲೂ ಹಣಕಾಸು ವ್ಯವಹಾರ ನಡೆಸುತ್ತಿದೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.
 
‘ದೇವೇಗೌಡರ ಹಿರಿಯ ಪುತ್ರ ಎಚ್‌.ಡಿ. ಬಾಲಕೃಷ್ಣಗೌಡ ಅವರ ಪತ್ನಿ ಕವಿತಾ ಹೆಸರಿನಲ್ಲಿ ಅಮೆರಿಕ ಮತ್ತು ಉತ್ತರ ಭಾರತದ ವಿವಿಧೆಡೆ ಹೂಡಿಕೆ ಮಾಡಲಾಗಿದೆ. ಗೃಹಿಣಿಯೊಬ್ಬರು ಸಾವಿರಾರು ಕೋಟಿ ಮೌಲ್ಯದ ಆಸ್ತಿ ಹೊಂದಲು ಹೇಗೆ ಸಾಧ್ಯ’ ಎಂದು ಅವರು ದೂರಿನಲ್ಲಿ ಪ್ರಶ್ನಿಸಿದ್ದಾರೆ.
 
‘ಬೇನಾಮಿ ಹೆಸರಿನಲ್ಲೂ ಅಮೆರಿಕ, ದೆಹಲಿ, ಬೆಂಗಳೂರು ಮತ್ತು ಹಾಸನದಲ್ಲಿ ಆಸ್ತಿ ಇದೆ. ಈ ಸಂಬಂಧ 6,250 ಪುಟಗಳ ದಾಖಲೆಗಳನ್ನು ದೂರಿನೊಂದಿಗೆ ನೀಡಲಾಗಿದೆ. ಸಮಗ್ರ ತನಿಖೆ ನಡೆಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
 
ಯಡಿಯೂರಪ್ಪ ಕೈವಾಡ-ಎಚ್‌ಡಿಕೆ ಆರೋಪ:  ‘ನಮ್ಮ ಕುಟುಂಬ ₹ 20 ಸಾವಿರ ಕೋಟಿ ಅಕ್ರಮ ಆಸ್ತಿ ಗಳಿಸಿರುವುದಾಗಿ ವೆಂಕಟೇಶಗೌಡ ಎಂಬುವರು ಆದಾಯ ತೆರಿಗೆ ಇಲಾಖೆಗೆ ನೀಡಿರುವ ದೂರಿನ ಹಿಂದೆ ಬಿ.ಎಸ್‌.ಯಡಿಯೂರಪ್ಪ  ಕೈವಾಡ ಇದೆ’ ಎಂದು ಜನತಾದಳ(ಜಾತ್ಯತೀತ) ರಾಜ್ಯ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ  ಆರೋಪಿಸಿದ್ದಾರೆ.
 
ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ,  ‘ದೂರನ್ನು ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಿದ್ಧಪಡಿಸಲಾಗಿದೆ. ಐ.ಟಿ ಇಲಾಖೆಗೆ  ಮಧ್ಯಾಹ್ನ ದೂರು ಸಲ್ಲಿಸಿ ರಾತ್ರಿ ಅದರ ಪ್ರತಿಯನ್ನು ವಾಟ್ಸ್‌ಆ್ಯಪ್‌ ಮೂಲಕ ಎಲ್ಲ ಮಾಧ್ಯಮಗಳಿಗೂ ಬಿಜೆಪಿ ಕಚೇರಿಯಿಂದಲೇ ತಲುಪಿಸಲಾಗಿದೆ’ ಎಂದು ದೂರಿದರು.
 
ಆದಾಯ ತೆರಿಗೆ ಇಲಾಖೆಗೆ ದೂರು ನೀಡಿರುವ ವೆಂಕಟೇಶ್‌ ಗೌಡ ಹಿಂದೆ ಕಾಂಗ್ರೆಸ್‌ ಕಾರ್ಯಕರ್ತ ಆಗಿದ್ದರು. ಬಳಿಕ  ಯಡಿಯೂರಪ್ಪ ನೇತೃತ್ವದ ಕೆಜೆಪಿ ಸೇರಿ 2013 ರಲ್ಲಿ  ರಾಜರಾಜೇಶ್ವರಿ ನಗರದಿಂದ ಸ್ಪರ್ಧಿಸಿದ್ದರು ಎಂದು ಹೇಳಿದರು.
 
‘ಯಡಿಯೂರಪ್ಪ  ಹೇಡಿತನದ ರಾಜಕಾರಣ ಮಾಡಬಾರದು. ಧೈರ್ಯವಾಗಿ ಮುಂದಿನಿಂದ ರಾಜಕಾರಣ ಮಾಡಬೇಕು. ಕುತಂತ್ರದ ಮೂಲಕ ನನ್ನನ್ನು ಬಲಿಪಶು ಮಾಡಲು ಹೊರಟಿದ್ದಾರೆ’ ಎಂದು ಕುಮಾರಸ್ವಾಮಿ ಕಿಡಿ ಕಾರಿದರು.
 
‘₹ 20 ಸಾವಿರ ಕೋಟಿ ಸಿಕ್ಕಿದರೆ ಅದನ್ನು  ವಶಕ್ಕೆ ತೆಗೆದುಕೊಂಡು ಪ್ರಧಾನಿ ಮೋದಿಯವರು ರೈತರ ಸಾಲ ಮನ್ನಾ ಮಾಡಿಸಬಹುದು. ನಮ್ಮ ಕುಟುಂಬದ ಆಸ್ತಿ ಬಗ್ಗೆ ನಿವೃತ್ತ  ನ್ಯಾಯಾಧೀಶರಿಂದ ತನಿಖೆ ನಡೆಸಬಹುದು’ ಎಂದು ಹೇಳಿದರು.
****
ವೆಂಕಟೇಶ್‌ ಗೌಡ ಯಾರು?

ಆದಾಯ ತೆರಿಗೆ ಇಲಾಖೆಗೆ ನೀಡಿರುವ  ದೂರಿನ ಕೊನೆಯಲ್ಲಿ ದೂರುದಾರರ ಹೆಸರನ್ನು ಎಸ್‌. ವೆಂಕಟೇಶ್‌ ಗೌಡ, ಕಾಂಗ್ರೆಸ್‌ ಕಾರ್ಯಕರ್ತ ಎಂದು ಬರೆಯಲಾಗಿದೆ.

ಮಂಗಳವಾರ ದೂರು ನೀಡಲಾಗಿದ್ದು, ಅದರ ಪ್ರತಿಯನ್ನು ಮಾಧ್ಯಮಗಳಿಗೆ ಬುಧವಾರ ರವಾನಿಸಲಾಗಿದೆ. ಆದರೆ, ದೂರುದಾರ ಎಸ್‌. ವೆಂಕಟೇಶ್‌ಗೌಡ ಯಾರು ಎಂಬುದು ನಿಗೂಢವಾಗಿದೆ.
****
ಅಧಿಕಾರಿಗಳ ಮಧ್ಯೆ ಸಂಘರ್ಷ ಇತ್ತು
ಅನುರಾಗ್ ತಿವಾರಿ ಸಾವಿನ ವಿಚಾರದಲ್ಲಿ ಹಲವಾರು ಅನುಮಾನಗಳಿವೆ. ಸಿಬಿಐ ತನಿಖೆಯಿಂದ ಸತ್ಯಾಂಶ ಗೊತ್ತಾಗಲಿದೆ. ಅಧಿಕಾರಿಗಳ ಮಧ್ಯೆ ಸಂಘರ್ಷ ಇದ್ದಿದ್ದು  ನಿಜ. ಹಿರಿಯ ಅಧಿಕಾರಿಗಳು ಕಿರಿಯ ಅಧಿಕಾರಿಗಳಿಗೆ  ಕಿರುಕುಳ ನೀಡುತ್ತಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.

‘ದೂರು ಕೊಟ್ಟಿದ್ದು ನಾನಲ್ಲ’
ಯಡಿಯೂರಪ್ಪ ಅವರೊಂದಿಗೆ ಗುರುತಿಸಿಕೊಂಡಿರುವ ವೆಂಕಟೇಶ್‌ ಗೌಡ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು, ‘ನಾನು ಆದಾಯ ತೆರಿಗೆ ಇಲಾಖೆಗೆ ಯಾವುದೇ ದೂರು ನೀಡಿಲ್ಲ. ನನಗೂ ಅದಕ್ಕೂ ಸಂಬಂಧ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ದೂರು ಬಂದಿರುವುದನ್ನು ಖಚಿತಪಡಿಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ದೂರುದಾರನ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT