ADVERTISEMENT

ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಆದೇಶ ಕಾಯ್ದಿರಿಸಿದ ಕೋರ್ಟ್

ಪ್ರಜಾವಾಣಿ ವಾರ್ತೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2016, 19:58 IST
Last Updated 1 ಜುಲೈ 2016, 19:58 IST

ಬೆಂಗಳೂರು:ದ್ವಿತೀಯ ಪಿ.ಯು ರಸಾಯನ ವಿಜ್ಞಾನ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಅರ್ಜಿ ವಿಚಾರಣೆಯನ್ನು ಶುಕ್ರವಾರ ಪೂರ್ಣಗೊಳಿಸಿರುವ ಹೈಕೋರ್ಟ್‌ ಆದೇಶವನ್ನು ಕಾಯ್ದಿರಿಸಿದೆ.

ಈ ವೇಳೆ ರಾಜ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪಿ.ಎಂ. ನವಾಜ್, ‘ಆರೋಪಿಗಳು ಲಕ್ಷಾಂತರ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡಿದ್ದಾರೆ. ಇವರ ಈ ದುಷ್ಕೃತ್ಯಕ್ಕೆ ಕೋರ್ಟ್‌ ದಯೆ ತೋರಬಾರದು. ಅವರನ್ನು ಹೊರಗೆ ಬಿಟ್ಟರೆ ಸಾಕ್ಷ್ಯಗಳನ್ನು ನಾಶ ಮಾಡುತ್ತಾರೆ’ ಎಂದು ಜಾಮೀನು ಕೋರಿಕೆಯ  ಅರ್ಜಿಗಳನ್ನು ಬಲವಾಗಿ  ಆಕ್ಷೇಪಿಸಿದರು.

ಈ ಮಧ್ಯೆ ಆರೋಪಿಗಳ ಪರ ವಕೀಲ ಹಸ್ಮತ್‌ ಪಾಷ ಅವರು, ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಿಟ್‌ ಅರ್ಜಿಯಲ್ಲಿ ಕೋಕಾ ಕಾಯ್ದೆ ಅಡಿ ತನಿಖೆ ನಡೆಸುವುದಕ್ಕೆ ತಡೆ ನೀಡಲಾಗಿದೆ. ಆರೋಪಿಗಳು ಕಳೆದ 87 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.  ಸಾಮಾನ್ಯ ಆರೋಪದಡಿ ದೋಷಾರೋಪ ಪಟ್ಟಿ ದಾಖಲಿಸಲು ಇರುವ ಕಾನೂನುಬದ್ಧ 60 ದಿನಗಳ ಕಾಲಮಿತಿ ಮುಗಿದು ಹೋಗಿದೆ. ಆದ್ದರಿಂದ ಜಾಮೀನು ನೀಡಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಫಣೀಂದ್ರ, ‘ಕೋಕಾ ಕಾಯ್ದೆಗೆ ಎಂಟು ವಾರಗಳ ತಡೆ ನೀಡಲಾಗಿದೆ. ನೀವು ಇನ್ನೂ ಯಾವುದೇ ಕಾಯ್ದೆ ಅಡಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿಲ್ಲವಲ್ಲ’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ನವಾಜ್‌, ‘ಆರೋಪಿಗಳಲ್ಲಿ ಕೆಲವು ಪೋಷಕರೂ ಹಾಗೂ ಇಂತಹ ಆರೋಪಗಳನ್ನು ಪದೇ ಪದೇ ಎಸಗುತ್ತಾ ಬಂದಿರುವ ಹಳೇಚಾಳಿಯವರೂ ಇದ್ದಾರೆ. ಮೂವರು ಮುಖ್ಯ ಆರೋಪಿಗಳನ್ನು ಹೊರತುಪಡಿಸಿ ಉಳಿದವರನ್ನು ದುಷ್ಕೃತ್ಯ ಪ್ರೇರಕರು ಎಂದು ಗುರುತಿಸಲಾಗಿದೆ. ಇವರೆಲ್ಲಾ ಗಂಭೀರ ಅಪರಾಧಗಳನ್ನು ಎಸಗಿದ್ದಾರೆ’ ಎಂದು ಪ್ರಾಸಿಕ್ಯೂಷನ್‌ ಕ್ರಮವನ್ನು ಸಮರ್ಥಿಸಿಕೊಂಡರು.

ನ್ಯಾಯಮೂರ್ತಿ ಎಚ್‌.ಬಿಳ್ಳಪ್ಪ  ಈಗಾಗಲೇ ಕೋಕಾ ಕಾಯ್ದೆಗೆ ಎಂಟು ವಾರಗಳ ತಡೆ ನೀಡಿದ್ದಾರೆ. ಈ ಮಧ್ಯೆ ಆರೋಪಿಗಳಾದ ಎಂ.ವಿ. ರುದ್ರಪ್ಪ, ಕೆ.ಎಸ್‌.ರಂಗನಾಥ ಹಾಗೂ ಓಬಳರಾಜು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.