ADVERTISEMENT

ದ್ವಿತೀಯ ಪಿ.ಯು ಫಲಿತಾಂಶ ಪ್ರಕಟ

ದಕ್ಷಿಣ ಕನ್ನಡ ಪ್ರಥಮ, ಗದಗ ಕೊನೆ ಸ್ಥಾನ

​ಪ್ರಜಾವಾಣಿ ವಾರ್ತೆ
Published 18 ಮೇ 2015, 7:17 IST
Last Updated 18 ಮೇ 2015, 7:17 IST

ಬೆಂಗಳೂರು: 2014–15ನೇ ಸಾಲಿನ ದ್ವಿತೀಯ ಪದವಿ ಪೂರ್ವ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದೆ. ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನಗಳಿಸಿದ್ದು, ಗದಗ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ. ಈ ವರ್ಷ ಒಟ್ಟಾರೆ ಶೇಕಡ 60.54ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷ ಶೇ  60.47ರಷ್ಟು ಫಲಿತಾಂಶ ಬಂದಿತ್ತು.

ಪರೀಕ್ಷೆಗೆ ಹಾಜರಾದ ಒಟ್ಟು 6,10,323 ವಿದ್ಯಾರ್ಥಿಗಳ ಪೈಕಿ 3,69,474 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ADVERTISEMENT

ಈ ಪೈಕಿ ಎಂದಿನಂತೆ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಶೇ 68.24 ರಷ್ಟು ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಯಶಸ್ಸು ಪಡೆದಿದ್ದಾರೆ. ಇನ್ನು, ಶೇ 53.09 ರಷ್ಟು ಬಾಲಕರು ಪಾಸ್‌ ಆಗಿದ್ದಾರೆ.

ಗ್ರಾಮಾಂತರ ಪ್ರದೇಶದ ಮೇಲುಗೈ: ದ್ವಿತೀಯ ಪಿ.ಯು ಪರೀಕ್ಷೆಯಲ್ಲೂ ನಗರ ಪ್ರದೇಶದವರಿಗಿಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚಿನ ಯಶ ಕಂಡಿದ್ದಾರೆ. ಆದರೆ, ಮಾಧ್ಯಮವಾರು ಫಲಿತಾಂಶದಲ್ಲಿ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳು ಪಾರಮ್ಯ ಮರೆದಿದ್ದಾರೆ. ಇಂಗ್ಲಿಷ್ ಮಾಧ್ಯಮದ ಶೇ 66.87 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಫಲಿತಾಂಶ ಶೇ 53.41ರಷ್ಟಿದೆ.

ಗ್ರಾಮೀಣ ಪ್ರದೇಶದ ಫಲಿತಾಂಶ ಶೇಕಡ 61.52ರಷ್ಟಾಗಿದ್ದರೆ, ನಗರ ಪ್ರದೇಶ ಫಲಿತಾಂಶ ಶೇ 60.23ರಷ್ಟಿದೆ.

ವಾಣಿಜ್ಯ ವಿಭಾಗದ ಸಾಧನೆ: ಇನ್ನು ವಿಭಾಗವಾರು ಫಲಿತಾಂಶ ಪೈಕಿ ವಾಣಿಜ್ಯ ವಿಭಾಗದಲ್ಲಿ ಉತ್ತಮ ಸಾಧನೆ ತೋರಿ ಬಂದಿದ್ದು, ವಿಜ್ಞಾನ ಎರಡನೇ ಸ್ಥಾನದಲ್ಲಿದೆ. ಕಲಾ ವಿಭಾಗ ಕೊನೆಯ ಸ್ಥಾನದಲ್ಲಿದೆ.

ವಿಭಾಗವಾರು ಫಲಿತಾಂಶ ಇಂತಿದೆ.

ಕಲಾ                     ಶೇ 51.12ರಷ್ಟು
ವಾಣಿಜ್ಯ                 ಶೇ 67.06ರಷ್ಟು
ವಿಜ್ಞಾನ                 ಶೇ 65.19ರಷ್ಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.