ADVERTISEMENT

ದ್ವೇಷವೇ ನಿಮ್ಮ ತಂದೆ, ಅಸಹನೆಯೇ ತಾಯಿ

ಅನಂತಕುಮಾರ್ ಹೆಗಡೆಗೆ ದೇವನೂರ ಮಹಾದೇವ ಬಹಿರಂಗ ಪತ್ರ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2017, 19:30 IST
Last Updated 26 ಡಿಸೆಂಬರ್ 2017, 19:30 IST
ದ್ವೇಷವೇ ನಿಮ್ಮ ತಂದೆ, ಅಸಹನೆಯೇ ತಾಯಿ
ದ್ವೇಷವೇ ನಿಮ್ಮ ತಂದೆ, ಅಸಹನೆಯೇ ತಾಯಿ   

ಮೈಸೂರು: ‘ದ್ವೇಷವೇ ನಿಮ್ಮ ತಂದೆ, ಅಸಹನೆಯೇ ನಿಮ್ಮ ತಾಯಿ. ಭ್ರಮೆಯೇ ನಿಮ್ಮ ಮೂಲ ಪುರುಷ. ಮಿಥ್ಯ ಎಂಬುದೇ ನಿಮ್ಮ ಜ್ಞಾನ ಸಂಪತ್ತು’.

–ಸಾಹಿತಿ ದೇವನೂರ ಮಹಾದೇವ ಅವರು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರಿಗೆ ಮಂಗಳವಾರ ಬರೆದ ಬಹಿರಂಗ ಪತ್ರದಲ್ಲಿ ಹೀಗೆ ಪ್ರತ್ಯುತ್ತರ ಕೊಟ್ಟಿದ್ದಾರೆ.

‘ಅಪ್ಪ ಅಮ್ಮನ ಗುರುತು ಇಲ್ಲದಿರುವವರು ಜಾತ್ಯತೀತರು ಎಂದು ಕರೆಸಿಕೊಳ್ಳುತ್ತಿದ್ದಾರೆ ಎಂದು ನೀವು ಲೇವಡಿ ಮಾಡಿದ್ದೀರಿ. ಆದ್ದರಿಂದ ನಿಮ್ಮ ಅಪ್ಪ ಅಮ್ಮನ ಗುರುತನ್ನು ನಾವು ತಿಳಿಸಿಕೊಟ್ಟಿದ್ದೇವೆ’ ಎಂದಿದ್ದಾರೆ.

ADVERTISEMENT

ಬಿಜೆಪಿಯ ಹಿರಿಯ ನಾಯಕರಾದ ಎ.ಬಿ.ವಾಜಪೇಯಿ ಈಗ ಸಕ್ರಿಯರಾಗಿಲ್ಲ. ಆದ್ದರಿಂದ ಬಿಜೆಪಿ ಹಾಗೂ ಎನ್‌ಡಿಎ ಹಾಲಿ ನಾಯಕರು ಪ್ರಜ್ಞಾಹೀನ ಪುಂಡುಪೋಕರಿ ಮಾತುಗಳನ್ನು ಆಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

‘ಹುಟ್ಟಿದಾಗ ಪ್ರತಿಯೊಬ್ಬ ಮನುಷ್ಯನೂ ಪ್ರಾಣಿಯೇ. ಆದರೆ ಅವನು ಮಾಡುವ ಕೆಲಸಗಳಿಂದ ಮನುಷ್ಯನಾಗಿ ಬದಲಾಗುತ್ತಾನೆ ಎಂದಿದ್ದೀರಿ. ಆದರೆ ನಿಮ್ಮ ವಿಷಯದಲ್ಲಿ ಇದು ಯಾಕೋ ಉಲ್ಟಾ ಅನಿಸುತ್ತದೆ’ ಎಂದಿದ್ದಾರೆ.

‘ಸಂವಿಧಾನ ಬದಲಾಯಿಸಲು ನಾವು ಬಂದಿದ್ದೇವೆ ಎನ್ನುತ್ತೀರಿ. ಸಂವಿಧಾನ ರಚನಾ ಕಾರ್ಯ ನಿಮ್ಮಂಥವರ ಕೈಗೆ ಸಿಕ್ಕಿಬಿಟ್ಟಿದ್ದರೆ ನಿಮ್ಮ ಪೂರ್ವಿಕರು ನರಕ ಸೃಷ್ಟಿಸಿ ಅದನ್ನೇ ಸ್ವರ್ಗ ಎಂದುಬಿಡುವ ಸಾಧ್ಯತೆಯಿತ್ತು. ಸಂವಿಧಾನ ರಚನಾ ಕೆಲಸ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೈಗೆ ಸಿಕ್ಕಿದ್ದರಿಂದ ಭಾರತಮಾತೆ ಬಚಾವಾದಳು’ ಎಂದು ಹೇಳಿದ್ದಾರೆ.

‘ಅಕಸ್ಮಾತ್‌ ಬಿಜೆಪಿ ಅಧಿಕಾರಕ್ಕೆ ಬಂದರೆ ಯಡಿಯೂರಪ್ಪ ಅವರಿಗೆ ಮೂರು ನಾಮ ಹಾಕಿ, ವೈಷ್ಣವರನ್ನಾಗಿಸಿ ಶಂಕು–ಜಾಗಟೆ ಹಿಡಿಸುತ್ತಾರೆ. ಅನಂತಕುಮಾರ ಹೆಗಡೆ ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಬಿಜೆಪಿಯ ರಾಜಕಾರಣ ನೋಡಿದರೆ ಇದು ಸಂಭವಿಸಲೂಬಹುದು. ನಿಮ್ಮಂಥವರು ಕರ್ನಾಟಕವನ್ನು ಸ್ಮಶಾನ ಮಾಡಿಬಿಡುತ್ತೀರಿ ಎಂಬ ಭೀತಿ ಉಂಟಾಗುತ್ತದೆ’ ಎಂದಿದ್ದಾರೆ.

ಹೆಗಡೆ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ: 

ಕಲಬುರ್ಗಿ ‘ಜಾತ್ಯತೀತರಿಗೆ ಅಪ್ಪ- ಅಮ್ಮ ಯಾರೆಂದು ಗೊತ್ತಿಲ್ಲ ಎಂದು ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು' ಎಂದು ಆಳಂದ ಶಾಸಕ ಬಿ.ಆರ್.ಪಾಟೀಲ ತಿಳಿಸಿದರು.

‘ಈ ಸಂಬಂಧ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿದ್ದು, ಶೀಘ್ರದಲ್ಲಿಯೇ ಮೊಕದ್ದಮೆ ದಾಖಲು ಮಾಡಲಾಗುವುದು’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹೆಗಡೆ ನಾಲಿಗೆ ಕತ್ತರಿಸಿದವರಿಗೆ ₹1 ಕೋಟಿ ಬಹುಮಾನ

ಕಲಬುರ್ಗಿ: ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದು, ಅವರ ನಾಲಿಗೆಯನ್ನು ಕತ್ತರಿಸಿ ಕೊಟ್ಟವರಿಗೆ ₹1 ಕೋಟಿ ಬಹುಮಾನ ನೀಡುವುದಾಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುರುಶಾಂತ ಪಟ್ಟೇದಾರ ಮಂಗಳವಾರ ಘೋಷಿಸಿದರು.

‘ಸಂವಿಧಾನವನ್ನು ಒಪ್ಪುವುದಿಲ್ಲ, ಅದನ್ನು ಬದಲಾಯಿಸುತ್ತೇವೆ ಎಂದು ಹೇಳಿರುವುದು ಖಂಡನೀಯ. ಈ ಮೂಲಕ ಸಂವಿಧಾನದ ಜಾತ್ಯತೀತ ಆಶಯಕ್ಕೆ ಚ್ಯುತಿ ತರಲು ಯತ್ನಿಸಿದ್ದಾರೆ. ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.